Advertisement

ಏಪ್ರಿಲ್‌ ನಲ್ಲಿ ಸಿನಿ ಧಮಾಕಾ; ಅಂತರ ನೋಡಿಕೊಂಡು ತೆರೆಗೆ ಬರಲು ಯೋಚನೆ

11:28 AM Mar 25, 2022 | Team Udayavani |

ಬಿಗ್‌ ಬಜೆಟ್‌ ಸ್ಟಾರ್‌ ಸಿನಿಮಾಗಳ ಅಬ್ಬರ ಇಲ್ಲದಿದ್ದರಿಂದ ಕಳೆದ ಒಂದೂವರೆ ತಿಂಗಳಿನಿಂದ ಬಹುತೇಕ ಹೊಸಬರ ಸಿನಿಮಾಗಳು ಸಲೀಸಾಗಿ ತೆರೆಗೆ ಬಂದಿದ್ದವು. ಎರಡೂವರೆ ವರ್ಷದಿಂದ ತೆರೆಗೆ ಬರದೆ ಕಾಯುತ್ತಿದ್ದ ಬಹುತೇಕ ಹೊಸಬರ ಸಿನಿಮಾಗಳು “ನಾ ಮುಂದು, ತಾ ಮುಂದು..’ ಎನ್ನುವಂತೆ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದವು. ಫೆಬ್ರವರಿ ತಿಂಗಳಿನಲ್ಲಿ ಇಂಥ ಬರೋಬ್ಬರಿ 20ಕ್ಕೂ ಹೆಚ್ಚು ಸಿನಿಮಾಗಳು ತೆರೆ ಕಾಣುವ ಮೂಲಕ ಸ್ಯಾಂಡಲ್‌ವುಡ್‌ನ‌ಲ್ಲಿ ಒಂದಷ್ಟು ಕಳೆ ತಂದುಕೊಟ್ಟಿದ್ದವು.

Advertisement

ಇನ್ನು ಮಾರ್ಚ್‌ ಮೊದಲ ಶುಕ್ರವಾರ (ಮಾ. 4) ಬರೋಬ್ಬರಿ ಒಂಬತ್ತು ಸಿನಿಮಾಗಳು ತೆರೆಕಂಡರೆ, ಮಾರ್ಚ್‌ ಎರಡನೇ ಶುಕ್ರವಾರ (ಮಾ. 11) ಐದು ಸಿನಿಮಾಗಳು ಬಿಡುಗಡೆಯಾಗಿ ತೆರೆಗೆ ಬಂದಿದ್ದವು. ಆದರೆ ಮಾರ್ಚ್‌ ಮೂರನೇ ವಾರ (ಮಾ. 18) ಕನ್ನಡ ಚಿತ್ರರಂಗದ ಬಹುನಿರೀಕ್ಷಿತ, ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ಜೇಮ್ಸ್‌’ ಸಿನಿಮಾ ಬಿಡುಗಡೆಯಾಗಿ ದ್ದರಿಂದ ಕನ್ನಡದಲ್ಲಿ ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಪುನೀತ್‌ ರಾಜಕುಮಾರ್‌ ಸ್ಮರಣಾರ್ಥ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲೆಯಾಳಂ ಸೇರಿದಂತೆ ಬಹುತೇಕ ಚಿತ್ರರಂಗಗಳು “ಜೇಮ್ಸ್‌’ ಬಿಡುಗಡೆಗೆ ಮುಕ್ತ ದಾರಿ ಮಾಡಿಕೊಟ್ಟಿದ್ದರಿಂದ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಹೀಗೆ ಬಹುತೇಕ ಭಾರತದ ಯಾವುದೇ ಭಾಷೆಗಳಲ್ಲೂ ಹೊಸ ಸಿನಿಮಾಗಳು ಬಿಡುಗಡೆಯಾಗಿಲ್ಲ.

ಇಂದು (ಮಾ.25)ಭಾರತೀಯ ಚಿತ್ರರಂಗದ ಮತ್ತೂಂದು ಬಹುನಿರೀಕ್ಷಿತ ಸಿನಿಮಾ “ಆರ್‌ಆರ್‌ ಆರ್‌’ ಬಿಡುಗಡೆಯಾಗುತ್ತಿದ್ದು, ಇಂದು ಕೂಡ ಯಾವುದೇ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಬಹುತೇಕ ಬಿಡುಗಡೆ ನಿಂತಿರುವ ಚಿತ್ರತಂಡಗಳ ಚಿತ್ತ ಈಗ ಏಪ್ರಿಲ್‌ನತ್ತ ನೆಟ್ಟಿದೆ. ಸದ್ಯಕ್ಕೆ ಏಪ್ರಿಲ್‌ನಲ್ಲಿ ಬಹುನಿರೀಕ್ಷಿತ “ಕೆಜಿಎಫ್-2′ ಹೊರತುಪಡಿಸಿ, ಬೇರೆ ಯಾವುದೇ ಬಿಗ್‌ ಸ್ಟಾರ್‌ ನಟರ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌ ಆಗದಿರುವುದರಿಂದ, ಬಿಡುಗಡೆಗೆ ರೆಡಿಯಾಗಿರುವ ಅದರಲ್ಲೂ, ಬಹುತೇಕ ಹೊಸಬರು ಏಪ್ರಿಲ್‌ ತಿಂಗಳಿನ ಮೇಲೆ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ:ಹೋಮ್‌ ಮಿನಿಸ್ಟರ್‌ ಟ್ರೇಲರ್‌ ಹಿಟ್‌ ಲಿಸ್ಟ್‌ ಗೆ; ಏ.01ರಂದು ಉಪ್ಪಿ ಚಿತ್ರ ಬಿಡುಗಡೆ

ಚಿತ್ರರಂಗದ ಮೂಲಗಳ ಪ್ರಕಾರ ಏಪ್ರಿಲ್‌ ತಿಂಗಳಿನಲ್ಲಿ ಬಿಗ್‌ಬಜೆಟ್‌ ಸ್ಟಾರ್ ಸಿನಿಮಾಗಳನ್ನು ಹೊರತುಪಡಿಸಿ, ಸುಮಾರು 20ಕ್ಕೂ ಹೆಚ್ಚು ಹೊಸಬರ ಸಿನಿಮಾಗಳು ತೆರೆಗೆ ಬರುವ ಯೋಚನೆಯಲ್ಲಿವೆ. ಸದ್ಯಕ್ಕೆ ಏಪ್ರಿಲ್‌ 1ಕ್ಕೆ ರಿಯಲ್‌ಸ್ಟಾರ್‌ ಉಪೇಂದ್ರ ಮತ್ತು ವೇದಿಕಾ ಅಭಿನಯದ “ಹೋಮ್‌ ಮಿನಿಸ್ಟರ್‌’, ಹಿರಿಯ ನಟ ಸುರೇಶ್‌ ಹೆಬ್ಳೀಕರ್‌, ಲಕ್ಷ್ಮೀ ಮತ್ತಿತರರು ಅಭಿನಯಿಸಿರುವ “ತ್ರಿಕೋನ’, ಮದರಂಗಿ ಕೃಷ್ಣ ಮತ್ತು ಎಸ್ತಾರ್‌ ನರೋನಾ ಜೋಡಿಯಾಗಿ ಅಭಿನಯಿಸಿರುವ “ಲೋಕಲ್‌ ಟ್ರೈನ್‌’, ಮನೋಜ್‌ ಮತ್ತು ಮಠ ಗುರು ಪ್ರಸಾದ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಬಾಡಿಗಾಡ್‌’, “ಇನ್ಸ್‌ಟಂಟ್‌ ಕರ್ಮ’, “ತಲೆದಂಡ’ ಸೇರಿದಂತೆ ಆರು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿ ಕೊಂಡಿವೆ. ಇದಲ್ಲದೆ ಏಪ್ರಿಲ್‌.1ಕ್ಕೆ ಇನ್ನೂ ಐದಾರು ಸಿನಿಮಾಗಳು ತೆರೆಗೆ ಬರುವ ಯೋಚನೆಯಲ್ಲಿದ್ದು, ಈ ಸಿನಿಮಾಗಳ ಬಿಡುಗಡೆಯ ದಿನಾಂಕ ಇನ್ನಷ್ಟೇ ಅಧಿಕೃತವಾಗಿ ಅನೌನ್ಸ್‌ ಆಗಬೇಕಿದೆ.

Advertisement

“ಕೆಜಿಎಫ್-2′ ಬಿಡುಗಡೆಯ ಬಳಿಕ ಏಪ್ರಿಲ್‌ ಕೊನೆಯ ಎರಡು ವಾರಗಳಲ್ಲಿ ತೆರೆಗೆ ಬರುವ ಹೊಸಬರ ಸಿನಿಮಾಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪ್ರದರ್ಶಕರು ಮತ್ತು ವಿತರಕರು.

ಜಿ. ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next