ಪ್ರಜ್ವಲ್ ದೇವರಾಜ್ ನಾಯಕರಾಗಿರುವ “ಚೀತಾ’ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ. ಈ ಚಿತ್ರಕ್ಕಾಗಿ ನಗರದ ಹೆಚ್ಎಂಟಿ ಫ್ಯಾಕ್ಟರಿ ಆವರಣದಲ್ಲಿ ಬೃಹತ್ ಮಾರ್ಕೆಟ್ ಸೆಟ್ ಹಾಕಲಾಗಿದ್ದು, ಅಲ್ಲಿ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ನಡೆಯುತ್ತಿದೆ.
ಪ್ರತಿಭಾ ನರೇಶ್ ಈ ಚಿತ್ರದ ನಿರ್ಮಾಪಕಿ. ಕಳೆದ 23 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸರ್ ಆಗಿ, ಡ್ಯಾನ್ಸ್ ಮಾಸ್ಟರ್ ಆಗಿರುವ ಕಲೈ “ಚೀತಾ’ ಮೂಲಕ ನಿರ್ದೇಶಕರಾಗಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಕಲೈ, “ಇದು ನನ್ನ ನಿರ್ದೇಶನದ ಮೊದಲ ಚಿತ್ರ. ನಾನು ಮೊದಲು ನೃತ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದು ಪ್ರಜ್ವಲ್ ಅವರ ಜೊತೆ. ಈಗ ನನ್ನ ಮೊದಲ ನಿರ್ದೇಶನದ ಚಿತ್ರಕ್ಕೂ ಅವರೆ ನಾಯಕ. ಚೀತಾ, ಮಾರ್ಕೆಟ್ನಲ್ಲೇ ನಡೆಯುವ ಕಥೆ. ಮಾರುಕಟ್ಟೆಯಲ್ಲೇ ಹುಟ್ಟಿಬೆಳೆದ ಹುಡುಗನೊಬ್ಬನ ಕಥೆಯೂ ಹೌದು. ಪ್ರಜ್ವಲ್ ಅವರದು ಈ ಚಿತ್ರದಲ್ಲಿ ಮಾರುಕಟ್ಟೆಯಲ್ಲಿ ನಡೆಯುವ ಅವ್ಯವಹಾರಗಳ ವಿರುದ್ಧ ಹೋರಾಟ ಮಾಡುವ ಹೋರಾಟಗಾರನ ಪಾತ್ರ. ಅಲ್ಲೇ ಬೆಳೆದು ಅಲ್ಲೇ ಇರುವ ಆ ಹುಡುಗನ ಕಂಡರೆ ಅಲ್ಲಿನ ಜನರಿಗೆ ಅಚ್ಚುಮೆಚ್ಚು. ಸುಮಾರು ಎರಡು ತಿಂಗಳ ಕಾಲ ಇನ್ನೂರಕ್ಕೂ ಅಧಿಕ ಜನರ ಪರಿಶ್ರಮದಲ್ಲಿ ಈ ಅದ್ದೂರಿ ಸೆಟ್ ನಿರ್ಮಾಣವಾಗಿದೆ. ಯಾವುದಕ್ಕೂ ಕೊರತೆ ಬಾರದ ಹಾಗೆ ನಿರ್ಮಾಣ ಮಾಡುತ್ತಿದ್ದಾರೆ ನಿರ್ಮಾಪಕಿ ಪ್ರತಿಭಾ ನರೇಶ್’ ಎಂದರು.
ಪ್ರಜ್ವಲ್ ದೇವರಾಜ್ ಕೂಡಾ ಈ ಸಿನಿಮಾ ಮೇಲೆ ಭರ್ಜರಿ ನಿರೀಕ್ಷೆ ಇಟ್ಟಿದ್ದಾರೆ. “ಮಾರ್ಕೆಟ್ ನಲ್ಲೇ ಬೆಳೆಯುವ ಹುಡುಗನ ಪಾತ್ರ ನನ್ನದು. ಹಿರಿಯ ನಟರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಮಾರ್ಕೆಟ್ನಲ್ಲಿ ಎಲ್ಲಾ ಕೆಲಸಗಳು ವೇಗವಾಗಿ ನಡೆಯುತ್ತಿರುತ್ತದೆ. ನನ್ನ ಪಾತ್ರ ಕೂಡ ಅದೇ ರೀತಿ. ಹಾಗಾಗಿ ಚಿತ್ರಕ್ಕೆ ಚೀತಾ ಎಂದು ಹೆಸರಿಡಲಾಗಿದೆ. ಚಿತ್ರದ ಕಥೆಯೂ ತುಂಬಾ ಚೆನ್ನಾಗಿದೆ’ ಎಂದರು.
ನಾಯಕಿ ಮೇಘಾ ಶೆಟ್ಟಿ ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಉಳಿದಂತೆ ನಟರಾದ ಶಿವರಾಜ್ ಕೆ ಆರ್ ಪೇಟೆ, ಸಿದ್ಲಿಂಗು ಶ್ರೀಧರ್, ಟೆನ್ನಿಸ್ ಕೃಷ್ಣ, ಶಂಕರ್, ಬೇಬಿ ಲೇಖನ, ಚಿನ್ನಿ ಪ್ರಕಾಶ್ ಮಾತನಾಡಿದರು.