ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಯನ್ನು ಶುಕ್ರವಾರ (ಸೆಪ್ಟೆಂಬರ್ 4, 2020) ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ಎರಡು ಕಾರುಗಳಲ್ಲಿ ರಾಗಿಣಿ ನಿವಾಸಕ್ಕೆ ಸರ್ಚ್ ವಾರಂಟ್ ಮೂಲಕ ಆಗಮಿಸಿ, ಮನೆಯಲ್ಲಿ ಕೂಲಂಕಷ ಪರಿಶೀಲನೆ ನಡೆಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಶೋಧ ಕಾರ್ಯದ ನಂತರ ರಾಗಿಣಿ ಮೊಬೈಲ್, ಕಾರಿನ ಕೀ, ಮನೆಯ ಕೀ ಹಾಗೂ ರಾಗಿಣಿಯನ್ನು ತಮ್ಮ ವಶಕ್ಕೆ ಪಡೆದಿರುವುದಾಗಿ ವರದಿ ಹೇಳಿದೆ.
ನಟಿ ರಾಗಿಣಿ ಆಪ್ತ ರವಿಶಂಕರ್ ನನ್ನು ಬಂಧಿಸಿದ ಸಿಸಿಬಿ ಪೊಲೀಸರು ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ಪರಿಚಯಸ್ಥ ರಾಹುಲ್ ಹಾಗೂ ನಟಿ ಶರ್ಮಿಳಾ ಮಾಂಡ್ರೆ ಪರಿಚಯಸ್ಥ ಎನ್ನಲಾದ ಕಾರ್ತಿಕ್ ರಾಜುವನ್ನು ವಶಕ್ಕೆ ಪಡೆದಿದ್ದರು.
ರವಿಶಂಕರ್ ನಗರದ ಡ್ರಗ್ ಪೆಡ್ಲರ್ ಗಳ ಜತೆ ಸಂಪರ್ಕ ಹೊಂದಿರುವ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದರು.
ರವಿಶಂಕರ್ ಮಾಹಿತಿಯನ್ನಾಧರಿಸಿ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ ಅನಾರೋಗ್ಯದ ಕಾರಣ ಸೋಮವಾರ ವಕೀಲರ ಜತೆ ಬರುವುದಾಗಿ ರಾಗಿಣಿ ಟ್ವೀಟ್ ಮೂಲಕ ತಿಳಿಸಿದ್ದಳು. ತಮಗೂ ಪ್ರಕರಣಕ್ಕೂ ಸಂಬಂಧವಿಲ್ಲ , ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು, ಸಮಾಜದ ನಾಗರಿಕಳಾಗಿ ವಿಚಾರಣೆಗೆ ಹಾಜರಾಗುವುದು ನನ್ನ ಕರ್ತವ್ಯ. ಆದರೆ ಕಾರಣಾಂತರಗಳಿಂದ ಗುರುವಾರ ಹಾಜರಾಗಲು ಸಾಧ್ಯವಿಲ್ಲ. ಸೋಮವಾರ ವಕೀಲರ ಮೂಲಕ ಹಾಜರಾಗುವುದಾಗಿ ಬರೆದುಕೊಂಡಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ್ದ ಸಿಸಿಬಿ ಪೊಲೀಸರು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಶುಕ್ರವಾರವೇ ಹಾಜರಾಗಬೇಕೆಂದು ಸೂಚಿಸಿದ್ದರು. ಅಲ್ಲದೇ ರಾಗಿಣಿ ಮನೆ ಶೋಧ ಕಾರ್ಯ ನಡೆಸಲು ಕೋರ್ಟ್ ನಿಂದ ಸರ್ಚ್ ವಾರಂಟ್ ಕೂಡ ಪಡೆದುಕೊಂಡಿದ್ದು, ಶುಕ್ರವಾರ ಬೆಳಗ್ಗೆ ರಾಗಿಣಿ ಮನೆ ಮೇಲೆ ದಾಳಿ ಸಿಸಿಬಿ ದಾಳಿ ನಡೆಸಿತ್ತು.