ಬೆಂಗಳೂರು: ನಟ ನಾಗಭೂಷಣ್ ಅವರು ಕಾರು ಅಪಘಾತ ಪ್ರಕರಣದಿಂದ ಸುದ್ದಿಯಲ್ಲಿದ್ದಾರೆ. ಅವರ ಕಾರು ಢಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಈ ಸಂಬಂಧ ನಟನ ವಿರುದ್ಧ ದೂರು ದಾಖಲಾಗಿತ್ತು.
ಸೋಮವಾರ(ಅ.9 ರಂದು) ನಟ ನಾಗಭೂಷಣ್ ಅವರು ತನ್ನ ವಕೀಲರೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದು, ಇದರಲ್ಲಿ ಅವರು ಪ್ರಕರಣ ಸಂಬಂಧ ಮಾತನಾಡಿದ್ದಾರೆ.
“ಅಪಘಾತವಾದ ಬಳಿಕ ನಾನು ಎಲ್ಲಿಗೂ ಓಡಿಹೋಗಿಲ್ಲ. ನನ್ನ ಕಾರು ಕೂಡ ಅಲ್ಲೇ ಇತ್ತು. ನಾನು ಸ್ವತಃ ಗಾಯಾಳಗಳನ್ನು ಆಸ್ಪತ್ರೆಗೆ ದಾಖಲಿಸಿದ್ದೆ. ಅಪಘಾತವಾದ ಬಳಿಕ ನಾನೇ ಖುದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದೆ. ನಾನು ಅಂದಿನ ಘಟನೆಯಿಂದ ಮಾನಸಿಕವಾಗಿ ಕುಸಿದು ಬಿಟ್ಟಿದ್ದೇನೆ. ದಯವಿಟ್ಟು ಯಾರೂ ಕೂಡ ಇದನ್ನು ಹಿಟ್ & ರನ್ ಕೇಸ್ ಎಂದು ಹೇಳಬೇಡಿ ಎಂದು ನಟ ಹೇಳಿದ್ದಾರೆ.
“ನಾನು ವೇಗವಾಗಿ ಕಾರು ಓಡಿಸಿಲ್ಲ. ಆ ರಸ್ತೆಯಲ್ಲಿ ಅಷ್ಟು ವೇಗವಾಗಿ ಕಾರು ಓಡಿಸಲು ಆಗುವುದಿಲ್ಲ. ಒಮ್ಮೆಗೆ ದಂಪತಿ ರಸ್ತೆಗೆ ಬಂದ ಕಾರಣದಿಂದ ಕಾರು ಅಪಘಾತವಾಯಿತು. ಆ ಕುಟುಂಬಕ್ಕೆ ಆದ ನೋವಿನ ಅರಿವು ನನಗಿದೆ. ಆ ಕುಟುಂಬದ ಜೊತೆಗಿರುವೆ, ಮುಂದಿನ ದಿನಗಳಲ್ಲಿ ಅವರ ಬಳಿ ಮಾತನಾಡಿಸುವ ಪ್ರಯತ್ನವನ್ನು ಮಾಡುತ್ತೇನೆ” ಎಂದಿದ್ದಾರೆ.
ಇದೇ ರೀತಿ ತಂದೆಯನ್ನು ಕಳೆದುಕೊಂಡೆ.. ಇದೇ ರೀತಿಯ ಅಪಘಾತದಲ್ಲಿ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೆ. ಗೌರಿ ಹಬ್ಬದ ದಿನದಂದು ಇಂಥದ್ದೇ ಅಪಘಾತದಲ್ಲಿ ನನ್ನ ತಂದೆ ನಿಧನರಾದರು. ಅದನ್ನು ಯಾರು ಮಾಡಿದರು ಅಂಥ ನಮಗೆ ಇದುವರೆಗೆ ಗೊತ್ತಾಗಿಲ್ಲ. ಯಾರಿಗಾದರೂ ಅಪಘಾತವಾದರೆ ಅವರನ್ನು ಆಸ್ಪತ್ರೆಗೆ ಸೇರಿಸಿ, ಓಡಿಹೋಗಬೇಡಿ. ನನ್ನ ತಂದೆಯ ಘಟನೆಯಿಂದ ನಾನು ಇದನ್ನೇ ಕಲಿತದ್ದು” ಎಂದು ನಟ ಹೇಳಿದ್ದಾರೆ.
ಆಗಿದ್ದೇನು: ಸೆ.30 ರಂದು ಬೆಂಗಳೂರಿನ ವಸಂತನಗರ ಮುಖ್ಯ ರಸ್ತೆಯಲ್ಲಿ ಕೃಷ್ಣ (58) ಹಾಗೂ ಅವರ ಪತ್ನಿ ಪ್ರೇಮಾ (48) ಅವರು ರಾತ್ರಿ ವಾಕಿಂಗ್ ಮಾಡುವಾಗ ನಟ ನಾಗಭೂಷಣ ಅವರಿದ್ದ ಕಾರು ಢಿಕ್ಕಿಯಾಗಿತ್ತು. ಮೊದಲು ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿಯಾಗಿದ್ದು, ನಂತರ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರು ಢಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಪ್ರೇಮಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಸಂಬಂಧ ನಾಗಭೂಷಣ್ ಅವರ ವಿರುದ್ಧ ದೂರು ದಾಖಲಾಗಿತ್ತು, ಆ ಬಳಿಕ ನಟ ಬೇಲ್ ಪಡೆದು ಹೊರಗೆ ಬಂದಿದ್ದರು.