Advertisement

Sandalwood ಸಿನಿಜಾತ್ರೆ; ಅಕ್ಟೋಬರ್‌ 6ಕ್ಕೆ 7 ಸಿನಿಮಾಗಳು ಬಿಡುಗಡೆ

12:02 PM Oct 01, 2023 | Team Udayavani |

2023 ಮುಗಿಯುತ್ತಾ ಬಂದಿದೆ. ಈಗಾಗಲೇ 150ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿವೆ. ಈ ವರ್ಷವೇ ಸಿನಿಮಾ ಬಿಡುಗಡೆ ಮಾಡಬೇಕೆಂದು ಅದರ ಹಿಂದೆ ಬಿಝಿಯಾಗಿರುವ ಸಿನಿಮಾ ಮಂದಿಯ ಕ್ಯೂ ಇನ್ನೂ ದೊಡ್ಡದಿದೆ. ಅದೇ ಕಾರಣದಿಂದ ವಾರದಿಂದ ವಾರಕ್ಕೆ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಪರಿಣಾಮವಾಗಿ ಅಕ್ಟೋಬರ್‌ 6ಕ್ಕೆ ಬರೋಬ್ಬರಿ 7 ಸಿನಿಮಾಗಳು ತೆರೆಕಾಣುತ್ತಿವೆ. ಇದರೊಂದಿಗೆ ಅಕ್ಟೋಬರ್‌ ಮೊದಲ ವಾರ ಸಖತ್‌ ಕಲರ್‌ಫ‌ುಲ್‌ ಆಗಿರಲಿದೆ. ಆ ಏಳು ಸಿನಿಮಾಗಳು ಯಾವುದೆಂದು ನೋಡುವುದಾದರೆ, “ಫೈಟರ್‌’, “ಮಾರಕಾಸ್ತ್ರ’, “ಆಡೇ ನಮ್‌ ಗಾಡು’,”ಲವ್‌’, “ರಾಜಮಾರ್ತಾಂಡ’, “ಮಿಸ್ಟರ್‌ ಅಂಡ್‌ ಮಿಸಸ್‌ ಮನ್ಮಥ’ ಹಾಗೂ “ಅಭಿರಾಮಚಂದ್ರ’ ಚಿತ್ರಗಳು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲಿವೆ.

Advertisement

ಮಾರಕಾಸ್ತ್ರ

ಮಾಲಾಶ್ರೀ ಮುಖ್ಯಭೂಮಿಕೆಯಲ್ಲಿರುವ “ಮಾರಕಾಸ್ತ್ರ’ ಚಿತ್ರ ಅಕ್ಟೋಬರ್‌ 6ಕ್ಕೆ ತೆರೆಕಾಣುತ್ತಿದೆ. ಮಾಲಾಶ್ರೀ ಕೂಡಾ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಇಟ್ಟಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, “ನಿರ್ದೇಶಕ ಗುರುಮೂರ್ತಿ ಸುನಾಮಿ ಹೇಳಿದ ಕಥೆ ಇಷ್ಟವಾಯಿತು. ನಾನು ಈ ಚಿತ್ರ ಒಪ್ಪಕೊಳ್ಳಲು ನಿರ್ದೇಶಕರೇ ಕಾರಣ. ಏಕೆಂದರೆ ಅವರು ವಿಕಲ ಚೇತನರಾಗಿದ್ದರು ಕೂಡ, ಅವರಲ್ಲಿರುವ ಸಿನಿಮಾ ಪ್ರೀತಿ ಕಂಡು ಸಂತೋಷವಾಯಿತು. ಮೊದಲು ಹನ್ನೊಂದು ದಿನಗಳ ಕಾಲ ನನ್ನ ಚಿತ್ರೀಕರಣ ಎಂದು ನಿಗದಿಯಾಗಿತ್ತು. ಆ ನಂತರ ಒಟ್ಟು ಅರವತ್ತು ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ನಾಲ್ಕು ಸಾಹಸ ಸನ್ನಿವೇಶಗಳಿದೆ. ನಾನು

ಆ್ಯಕ್ಷನ್‌ ಕ್ವೀನ್‌ ಎಂದು ಕರೆಸಿಕೊಳ್ಳಲು ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಪ್ರಮುಖ ಕಾರಣ. ಅವರ ಜೊತೆಗೆ ಈ ಸಿನಿಮಾದಲ್ಲೂ ಕೆಲಸ ಮಾಡಿದ್ದು ಖುಷಿಯಾಗಿದೆ. “ಮಾರಕಾಸ್ತ್ರ’ ಸಿನಿಮಾದ ಸಾಹಸ ಸನ್ನಿವೇಶಗಳು ನನ್ನ ಹಿಂದಿನ “ಚಾಮುಂಡಿ’, “ಶಕ್ತಿ’ ಮುಂತಾದ ಸಿನಿಮಾಗಳ ಸಾಹಸ ಸನ್ನಿವೇಶಗಳನ್ನು ನೆನಪಿಸಿತು. ಈ ಸಿನಿಮಾದಲ್ಲಿ ನಾನು ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ಅಭಿನಯಿಸಿದ್ದೇನೆ’ ಎಂದು ಕಥೆ ಮತ್ತು ಪಾತ್ರ ಪರಿಚಯ ಮಾಡಿಕೊಡುತ್ತಾರೆ

ಆಡೇ ನಮ್‌ ಗಾಡ್‌

Advertisement

ಹಿರಿಯ ನಿರ್ದೇಶಕ ಕೆ. ಹೆಚ್‌ ವಿಶ್ವನಾಥ್‌ ನಿರ್ದೇಶನದ ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಕಥಾಹಂದರ ಹೊಂದಿರುವ “ಆಡೇ ನಮ್‌ ಗಾಡ್‌’ ಸಿನಿಮಾ ಕೂಡಾ ಈ ವಾರ ತೆರೆಕಾಣುತ್ತಿದೆ. “ಬಿ. ಬಿ. ಆರ್‌ ಫಿಲಂಸ್‌’ ಹಾಗೂ “ಎವರೆಸ್ಟ್‌ ಇಂಡಿಯಾ ಎಂಟರ್‌ಟೈನರ್‌’ ಬ್ಯಾನರ್‌ನಡಿ ಪ್ರೊ. ಬಿ.ಬಸವರಾಜ್‌ ಹಾಗೂ ರೇಣುಕಾ ಬಸವರಾಜ್‌ ಚೊಚ್ಚಲ ಬಾರಿಗೆ ನಿರ್ಮಿಸುತ್ತಿರುವ “ಆಡೇ ನಮ್‌ ಗಾಡ್‌’ ಸಿನಿಮಾದಲ್ಲಿ “ಮ್ಯಾನ್‌ ಆಫ್ ದಿ ಮ್ಯಾಚ್‌’, “ರಾಮ ರಾಮ ರೇ’ ಸಿನಿಮಾಗಳ ಖ್ಯಾತಿಯ ನಟರಾಜ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಂಜುನಾಥ್‌ ಜಂಬೆ, ಅಜಿತ್‌ ಬೊಪ್ಪನಹಳ್ಳಿ, ಅನೂಪ್‌ ಶೂನ್ಯ, ಸಾರಿಕ ರಾವ್‌, ಬಿ. ಸುರೇಶ್‌ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಳೇ ಮೈಸೂರಿನ ಗ್ರಾಮೀಣ ಹಿನ್ನೆಲೆಯಲ್ಲಿ ಮತ್ತು ಮೂಡನಂಬಿಕೆಯ ಸುತ್ತ “ಆಡೇ ನಮ್‌ ಗಾಡ್‌’ ಸಿನಿಮಾದ ಕಥಾಹಂದರ ಸಾಗುತ್ತದೆ.

ಅಭಿರಾಮಚಂದ್ರ

ಈ ಹಿಂದೆ “ಕಿರಿಕ್‌ ಪಾರ್ಟಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಾಗೇಂದ್ರ ಗಾಣಿಗ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ನಿರ್ದೇಶನ ಮಾಡಿರುವ “ಅಭಿರಾಮಚಂದ್ರ’ ಸಿನಿಮಾ ಕೂಡ ಅಕ್ಟೋಬರ್‌ ಮೊದಲವಾರ ಬಿಡುಗಡೆಯಾಗುತ್ತಿದೆ. “ಅಭಿರಾಮಚಂದ್ರ’ ಸಿನಿಮಾದಲ್ಲಿ ಸಿದ್ದು ಮೂಲಿಮನಿ, ರಥ ಕಿರಣ್‌, ನಾಟ್ಯರಂಗ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶಿವಾನಿ ರೈ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವೀಣಾ ಸುಂದರ್‌, ಸುಂದರ್‌, ಎಸ್‌. ನಾರಾಯಣ್‌, ಪ್ರಕಾಶ್‌ ತುಮ್ಮಿನಾಡು, ಪವನ್‌ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೊನ ಪ್ರೇಮಕಥಾಹಂದರ ಹೊಂದಿರುವ ಈ ಸಿನಿಮಾವನ್ನು “ಎ.ಜಿ.ಎಸ್‌ ಎಂಟರ್ಟೆನ್ಮೆಂಟ್‌’ ಹಾಗೂ “ರವಿ ಬಸ್ರೂರು ಮ್ಯೂಸಿಕ್‌ ಮತ್ತು ಮೂವೀಸ್‌’ ಬ್ಯಾನರ್‌ನಡಿ ಎ. ಜಿ. ಸುರೇಶ್‌ ಹಾಗೂ ಮಲ್ಲೇಶ್‌ ನಿರ್ಮಾಣ ಮಾಡಿದ್ದಾರೆ.

ಫೈಟರ್‌

ವಿನೋದ್‌ ಪ್ರಭಾಕರ್‌ ನಟನೆಯ “ಫೈಟರ್‌’ ಒಂದು ಆ್ಯಕ್ಷನ್‌ ಸಿನಿಮಾ. ಲೇಖಾಚಂದ್ರ ಈ ಚಿತ್ರದ ನಾಯಕಿ. ನೂತನ್‌ ನಿರ್ದೇಶನದ ಈ ಚಿತ್ರವನ್ನು ಸೋಮಶೇಖರ್‌ ನಿರ್ಮಿಸಿದ್ದಾರೆ. ಅನ್ಯಾಯದ ವಿರುದ್ಧದ ಹೋರಾಟದ ಕುರಿತಾಗಿ ಈ ಸಿನಿಮಾ ಮಾಡಲಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌, ಹಾಡುಗಳು ಹಿಟ್‌ಲಿಸ್ಟ್‌ ಸೇರಿವೆ

ರಾಜಮಾರ್ತಾಂಡ

ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿರುವ ಕೊನೆಯ ಸಿನಿಮಾ “ರಾಜ ಮಾರ್ತಾಂಡ’ ಕೂಡಾ ಈ ವಾರ ತೆರೆಕಾಣುತ್ತಿದೆ. ಈ ಚಿತ್ರವನ್ನು ರಾಮ್‌ ನಾರಾಯಣ್‌ ನಿರ್ದೇಶಿಸಿದ್ದು, ಶಿವಕುಮಾರ್‌ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಇದರ ಜೊತೆಗೆ ಹೊಸಬರ “ಲವ್‌’ ಹಾಗೂ “ಮನ್ಮಥ’ ಚಿತ್ರಗಳು ಕೂಡಾ ಅಕ್ಟೋಬರ್‌ ಮೊದಲವಾರ ಬಿಡುಗಡೆಯಾಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next