Advertisement

ಮರಳು ಸಮಸ್ಯೆ: ಮತದಾನ ಬಹಿಷ್ಕಾರದ ಎಚ್ಚರಿಕೆ

01:00 AM Mar 14, 2019 | Team Udayavani |

ಉಡುಪಿ: ಮರಳು ಸಮಸ್ಯೆಯನ್ನು ಬಗೆಹರಿಸದಿದ್ದರೆ ಮತದಾನವನ್ನು ಬಹಿಷ್ಕರಿಸಲಾಗುವುದು ಎಂದು ಮರಳು ಹೋರಾಟ ಸಮಿತಿ, ಹೊಯಿಗೆ ದೋಣಿ ಮಾಲಕರ ಸಂಘ, ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೊ ಮಾಲಕರ ಸಂಘ ಎಚ್ಚರಿಸಿವೆ. 

Advertisement

ಸಚಿವೆ-ಸಂಸದೆಗೆ ಟೀಕೆ
ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಡಚಣೆಯನ್ನು ನಿವಾರಿಸಿದ್ದರೂ ಜಿಲ್ಲಾಡಳಿತ ಮರಳು ಸಮಸ್ಯೆ ನೀಗಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡಿದರು? ಸಂಸದರು ಏನೂ ಮಾತನಾಡಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದು ಗೊತ್ತಿದ್ದರೂ ಜಿಲ್ಲಾಧಿಕಾರಿ ಏಕೆ ಕ್ರಮ ಜರುಗಿಸಲು ಮುಂದಾಗಲಿಲ್ಲ? ನಮ್ಮ ನಿರ್ಧಾರ ಅಚಲ. ನಮ್ಮನ್ನು ಜೈಲಿಗೆ ಹಾಕಿದರೂ ಅಲ್ಲಿ ರಾಗಿಮುದ್ದೆ ತಿಂದು ಜೀವಿಸುತ್ತೇವೆ ಎಂದು ವಿವಿಧ ಸಂಘಗಳ ಪದಾಧಿಕಾರಿಗಳಾದ ಸತ್ಯರಾಜ ಬಿರ್ತಿ, ಪ್ರವೀಣ್‌ ಸುವರ್ಣ, ಚಂದ್ರ ಪೂಜಾರಿ, ಅನ್ಸರ್‌ ಅಹಮ್ಮದ್‌, ರಾಘವೇಂದ್ರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಅಧಿಕಾರಿಗಳ ರಾಜ್ಯಭಾರ
ಉಡುಪಿ ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲ, ಅಧಿಕಾರಿಗಳದ್ದೇ ರಾಜ್ಯಭಾರ ನಡೆಯುತ್ತಿದೆ. ನಾವು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದರೆ “ಅಧ್ಯಯನ ನಡೆಸಬೇಕು’ ಎನ್ನುತ್ತಾರೆ. ಇವರು ಅಧ್ಯಯನ ಮಾಡುವುದು ಯಾವಾಗ? ಬೇಥಮೆಟ್ರಿಕ್‌ ಸರ್ವೆಗೆ 20-25 ಲ.ರೂ. ಖರ್ಚಾಗಿದೆ. ಎಲ್ಲ ಗುತ್ತಿಗೆದಾರರಿಗೆ ಗುತ್ತಿಗೆ ವಹಿಸಿಕೊಟ್ಟಿದ್ದರೆ ದಿನಕ್ಕೆ 7.65 ಲ.ರೂ. ರಾಯಧನ ಸಿಗುತ್ತಿತ್ತು. ಮರಳುಗಾರಿಕೆ ಆರಂಭಿಸದೆ ಇದ್ದರೆ ಆದಾಯ ಬರುವುದು ಹೇಗೆ? ಸರ್ವೆಗೆ ಮಾಡಿದ ಖರ್ಚನ್ನು ಅಧಿಕಾರಿಗಳೇ ಭರಿಸಲಿ ಎಂದು ಒತ್ತಾಯಿಸಿದರು. 

ಎಷ್ಟು ಜನರ ಬಲಿ ಬೇಕು?
ನಾವು ಸಾಲ ಮಾಡಿ ಲಾರಿಗಳನ್ನು ತೆಗೆದುಕೊಂಡಿದ್ದು, ಈಗ ಸಾಲ ತೀರಿಸಲು ಆಗುತ್ತಿಲ್ಲ. ಇವರು ಎಷ್ಟು ಜನರ ಜೀವವನ್ನು ಬಲಿ ತೆಗೆದು ಕೊಳ್ಳಬೇಕೆಂದಿದ್ದಾರೆ? ಹಿಂದಿನ ಮತ್ತು ಈಗಿನ ಜಿಲ್ಲಾಧಿಕಾರಿಯವರು ಬೇರೆ ಉದ್ಯೋಗ ಮಾಡಿ ಎನ್ನುತ್ತಾರೆ. ನಾವು ಬೇರೇನು ಉದ್ಯೋಗ ಮಾಡುವುದು? ಮಾ. 14- 15ರಂದು ಸಭೆ ನಡೆಯಲಿದೆಯಂತೆ. ಇದೂ ಖಚಿತವಲ್ಲ. ಸಭೆಯಲ್ಲಿ ಮರಳು ತೆಗೆಯಲು ಪೂರಕ ನಿರ್ಧಾರ ತಳೆಯದೆ ಹೋದರೆ ಸ್ವಯಂಪ್ರೇರಿತವಾಗಿ ಮತದಾನವನ್ನು ಬಹಿಷ್ಕರಿಸಲಾಗುವುದು ಎಂದರು.

Advertisement

ಕಾಣದ ಕೈಗಳು
ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳು ಸಮಸ್ಯೆ ನಿವಾರಿಸಲು ವಿಫ‌ಲವಾಗಿವೆ. ಕಾನೂನು ಜನರ ಹಿತಕ್ಕೆ ಇರಬೇಕೆ ವಿನಾ ಜನರಿಗೆ ತೊಂದರೆಯಾಗುವುದಕ್ಕಲ್ಲ. ಆರು ತಿಂಗಳ ಹಿಂದೆ ನ್ಯಾಯಾಲಯದ ತೀರ್ಪಿನಂತೆ ಹೆದ್ದಾರಿ ಬದಿಯ ಬಾರ್‌ಗಳು ಬಂದ್‌ ಆದವು. ಅನಂತರ ಅವು ಯಥಾಸ್ಥಿತಿಗೆ ಬರಲಿಲ್ಲವೆ? ಸಮಸ್ಯೆ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಎಂ ಸ್ಯಾಂಡ್‌, ಮಲೇಶಿಯಾ ಸ್ಯಾಂಡ್‌ ಪರವಾಗಿರುವವರ ಲಾಬಿ ಕೆಲಸ ಮಾಡುತ್ತಿದೆ. 2001ರ ಮೊದಲ ಮತ್ತು ಅನಂತರದ ಗುತ್ತಿಗೆದಾರರೆಂದು ಬಿರುಕು ಮೂಡಿಸಲು ಯತ್ನಿಸಿದರು. ಆದರೆ ನಮ್ಮಲ್ಲಿ ಒಗ್ಗಟ್ಟು ಇದೆ. ನಮಗೆ ಮಾತ್ರ ಕಾನೂನು ಮಾತನಾಡುತ್ತಾರೆ. ದ.ಕ. ಜಿಲ್ಲೆಯಿಂದ ಮರಳು ಬರುತ್ತಿಲ್ಲವೆ? ಕಲ್ಯಾಣಪುರ ಧಕ್ಕೆ ತೆಗೆದ ಮರಳು ಸಾಗಿಸಲು ಲಾರಿಗಳು ಹೋದರೆ ನಮಗೆ ಕೊಡದೆ 10,000 – 15,000 ರೂ.ಗೆ ಬ್ರಹ್ಮಾವರ, ಕುಂದಾಪುರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಲಾರಿಗಳಿಗೆ ಜಿಪಿಎಸ್‌ ಅಳವಡಿಸಿರುವುದರಿಂದ ಅದರ ನಷ್ಟವನ್ನು ಯಾರು ಭರಿಸಬೇಕು? ಜಿಪಿಎಸ್‌ ಹೆಸರಿನಲ್ಲಿಯೂ ಕೋಟ್ಯಂತರ ರೂ. ಅವ್ಯವಹಾರ ಆಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next