Advertisement

“ಅಧಿಕಾರಿಗಳಿಂದ ಮತ್ತೆ ಮರಳು ಸಮಸ್ಯೆ’

06:00 AM Jul 01, 2018 | Team Udayavani |

ಉಡುಪಿ: ಮರಳು ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಪ್ರಯತ್ನಿಸದೆ ಉಲ್ಬಣಕ್ಕೆ ಕಾರಣವಾಗುತ್ತಿದ್ದಾರೆಂದು ಶಾಸಕರಾದ
ಕೆ. ರಘುಪತಿ ಭಟ್‌ ಮತ್ತು ಪ್ರತಾಪಚಂದ್ರ ಶೆಟ್ಟಿ ಶನಿವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಆ. 7ಕ್ಕೆ ಈ ವರ್ಷದ ಸಿಆರ್‌ಝೆಡ್‌ ಮರಳುಗಾರಿಕೆ ಅನುಮತಿ (ಲೀಸ್‌) ಅವಧಿ ಮುಕ್ತಾಯವಾಗುತ್ತದೆ. ಅನಂತರ ಮತ್ತೆ ಅನುಮತಿ ನೀಡಬೇಕು. ಅನುಮತಿ ನೀಡಬೇಕಾದರೆ ಮೊದಲೇ ಮರಳುದಿಬ್ಬಗಳನ್ನು ಗುರುತಿಸಬೇಕು. ಈ ಕೆಲಸವನ್ನು ಮಾಡಿಲ್ಲ. ಹಾಗಾಗಿ ಮತ್ತೆ ಮುಂದಿನ ಹಲವು ತಿಂಗಳುಗಳ ಕಾಲ ಮರಳಿನ ಸಮಸ್ಯೆ ಉಲ್ಬಣವಾಗುವ ಆತಂಕ ಇದೆ ಎಂದರು. ಫೆಬ್ರವರಿ-ಮಾರ್ಚ್‌ನಲ್ಲಿಯೇ ಹೊಸ ಮರಳು ದಿಬ್ಬಗಳನ್ನು ಗುರುತಿಸುವ ಕೆಲಸ ಮಾಡಬೇಕಿತ್ತು ಎಂದು ಜಿ.ಪಂ. ಸದಸ್ಯ ಪ್ರತಾಪ್‌ ಹೆಗ್ಡೆ ಮಾರಾಳಿ ಹೇಳಿದರು. 

Advertisement

ಲೇಡಿಗೋಷನ್‌ನಂತೆ ಉಡುಪಿ ಆಸ್ಪತ್ರೆ: ಈಗ ಖಾಸಗಿಯವರಿಂದ ನಿರ್ಮಿಸಲ್ಪಟ್ಟ ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ದೊರೆಯಬೇಕಾದರೆ ಅದರ ಮೇಲೆ ಸರಕಾರದ ನಿಯಂತ್ರಣ ಅತ್ಯಗತ್ಯ. ಈಗ ಇರುವ ಹೆಂಗಸರ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿರುವ ವೈದ್ಯರು, ದಾದಿಯರು, ಸಿಬಂದಿಯನ್ನು ಹೊಸದಾಗಿ ನಿರ್ಮಾಣವಾದ 200 ಬೆಡ್‌ಗಳ ಆಸ್ಪತ್ರೆಗೆ ನಿಯೋಜಿಸಬೇಕು. ಅಲ್ಲಿ ಸರಕಾರಿ ಮತ್ತು ಖಾಸಗಿ ವೈದ್ಯರು, ಸಿಬಂದಿ, ತಜ್ಞರಿರಬೇಕು. ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಯಲ್ಲಿರುವಂತೆ ಪ್ರತ್ಯೇಕ ಯುನಿಟ್‌ಗಳಿರಬೇಕು.  ಈಗ ಒಡಂಬಡಿಕೆ ಆಗಿದೆ.  ಕೆಲವು ಷರತ್ತುಗಳನ್ನು ವಿಧಿಸಿಯೇ ಅಂತಿಮ ಒಪ್ಪಿಗೆ ನೀಡಬೇಕು. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದು ಭಟ್‌ ಹೇಳಿದರು.

ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್‌. ಮೆಂಡನ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ಉದಯ ಕೋಟ್ಯಾನ್‌, ಶಶಿಕಾಂತ್‌ ಪಡುಬಿದ್ರಿ, ಸಿಇಒ ಶಿವಾನಂದ ಕಾಪಶಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌, ಉಪಕಾರ್ಯದರ್ಶಿ ನಾಗೇಶ್‌ ರಾಯ್ಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next