Advertisement

ಎಂಥಾ ಮರಳಯ್ಯಾ?!

12:30 AM Mar 23, 2019 | |

ತರಿತರಿಯಾಗಿರುವ ಮರಳಿನಲ್ಲಿ ಚಿತ್ರ ಬಿಡಿಸುವುದು, ಅದರಲ್ಲೂ ಭಾವಚಿತ್ರ ಬಿಡಿಸುವುದು ಕಷ್ಟದ ಕೆಲಸ. ಸತತ ಅಭ್ಯಾಸದಿಂದ ಈ ಕಲೆಯನ್ನು ಒಲಿಸಿಕೊಂಡವರು ರೇಣುಕ ಹೊನ್ನೆಭಾಗಿ. ಮರಳು ಚಿತ್ರ ರಚನೆಯಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂಬುದು ಇವರ ಮಹದಾಸೆ. 

Advertisement

ಸಾಧನೆಗೆ ಅಸಾಧ್ಯವಾದದು ಯಾವುದೂ ಇಲ್ಲ. ಸಾಧಿಸಬೇಕೆಂಬ ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ, ಮರಳು ಚಿತ್ರಕಲೆಯಿಂದ ಎಲ್ಲರನ್ನೂ ಮರುಳು ಮಾಡುತ್ತಿರುವ ರೇಣುಕ ಹೊನ್ನೆಬಾಗಿಯವರೇ ಸಾಕ್ಷಿ. ಮೂಲತಃ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಹೊನ್ನೆಭಾಗಿಯವರಾದ ರೇಣುಕ, ಹುಟ್ಟಿದ್ದು ಬಡ ಕುಟುಂಬದಲ್ಲಿ. ಗುಡಿಸಲಿನಲ್ಲಿ ಜೀವನ, ಬುಡ್ಡಿದೀಪದಲ್ಲೇ ಹೈಸ್ಕೂಲ್‌ ಮುಗಿಸಿದ ಹುಡುಗನಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ. ಇವರ ಪ್ರತಿಭೆಯನ್ನು ಕಂಡು ಚಿಕ್ಕನಾಯಕನಹಳ್ಳಿಯ ವಾಣಿ ಚಿತ್ರಕಲಾ ಕಾಲೇಜಿನವರು ತಮ್ಮ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಿದರು. ಚಿತ್ರಕಲೆ ಹಾಗೂ ವಿಶುವಲ್‌ ಆರ್ಟ್ಸ್ನಲ್ಲಿ ಡಿಪ್ಲೊಮಾ ಪಡೆದು ಪ್ರಸ್ತುತ ಗ್ರಾಫಿಕ್‌ ಡಿಸೈನರ್‌ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ರೇಣುಕಾರದ್ದು ಬಹುಮುಖ ಪ್ರತಿಭೆ.


 
ಮರಳಿನಲ್ಲಿ ಅರಮನೆ
ಮೊದಮೊದಲು ವರ್ಣಚಿತ್ರಗಳನ್ನು ಮಾತ್ರ ಬಿಡಿಸುತ್ತಿದ್ದ ಇವರು, ಅನೇಕ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನೂ ಕೊಟ್ಟಿದ್ದರು. ಯೂಟ್ಯೂಬ್‌ನಲ್ಲಿ ಮರಳು ಚಿತ್ರಕಲೆಯ ವಿಡಿಯೋಗಳನ್ನು ನೋಡಿ, ಆ ಚಿತ್ರಕಲೆಯತ್ತ ಆಸಕ್ತಿ ಮೂಡಿತು. ಮನೆಯಲ್ಲೇ ಮರಳು ಚಿತ್ರಕಲೆಯನ್ನು ಅಭ್ಯಸಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅದರ ವಿಡಿಯೋಗಳನ್ನು ಹಾಕಲಾರಂಭಿಸಿದರು. ನೋಡುಗರಿಂದ ಉತ್ತೇಜನ ಸಿಕ್ಕಿತು. ಮರಳು ಚಿತ್ರಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹಂಬಲ ಅವರಲ್ಲಿ ಮೂಡಿತು. ಇವರ ಚಿತ್ರಕಲೆಗೆ ತಿರುವು ಸಿಕ್ಕಿದ್ದು 2016ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ. ಇವರ ವಿಡಿಯೋಗಳನ್ನು ನೋಡಿದ್ದ ಕಾರ್ಯಕ್ರಮ ಆಯೋಜಕರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮರಳು ಚಿತ್ರಕಲೆ ಪ್ರದರ್ಶನ ನೀಡಲು ಆಹ್ವಾನಿಸಿದರು. ಅಲ್ಲಿ ರೇಣುಕ ಪ್ರದರ್ಶಿಸಿದ, ಮೈಸೂರು ಅರಮನೆ, ಹಂಪಿಯ ಶಿಲ್ಪಕಲಾ ವೈಭವ, ಗೊಮ್ಮಟೇಶ್ವರ, ಜೋಗ ಮುಂತಾದ ಮರಳು ಚಿತ್ರಗಳು ಪ್ರೇಕ್ಷಕರ ಮನಸೂರೆಗೊಂಡವು. ಅಲ್ಲಿಂದ ಮುಂದೆ ಇವರು ಹಿಂತಿರುಗಿ ನೋಡಿದ್ದೇ ಇಲ್ಲ. 

ಯೂಟ್ಯೂಬ್‌ನಲ್ಲಿ ಓಬವ್ವ
ಮರಳಿನಲ್ಲಿ ಚಿತ್ರ ಬಿಡಿಸುವುದು ಸುಲಭದ ಮಾತಲ್ಲ. ತರಿತರಿ ಇರುವ ಮರಳಿನಲ್ಲಿ ಚಿತ್ರಬಿಡಿಸುವುದು, ಅದರಲ್ಲೂ ವ್ಯಕ್ತಿಯ ಭಾವಚಿತ್ರವನ್ನು ಬಿಡಿಸಲು ತುಂಬಾ ಅಭ್ಯಾಸ ಬೇಕು. ಸತತ ಅಭ್ಯಾಸ ಮಾಡಿ ರೇಣುಕಾರವರು ಅದನ್ನು ಕರಗತ ಮಾಡಿಕೊಂಡಿದ್ದಾರೆ. ನಂತರ ಚನ್ನಗಿರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದುರ್ಗದ ಒನಕೆ ಓಬವ್ವನನ್ನು ಮರಳಿನಲ್ಲಿ ಮೂಡಿಸಿದ ಇವರ ಕೈಚಳಕವನ್ನು ಲಕ್ಷಾಂತರ ಜನ ಯೂಟ್ಯೂಬ್‌ನಲ್ಲಿ ವೀಕ್ಷಿಸಿದರು. ರಾಜ್ಯದ ಬೇರೆ ಬೇರೆ ಕಡೆ ನೀಡಿದ ಪ್ರದರ್ಶನಗಳಲ್ಲಿ, ಡಾ. ಶಿವಕುಮಾರ ಸ್ವಾಮೀಜಿ, ಡಾ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ದರ್ಶನ್‌, ವಿಷ್ಣುವರ್ಧನ್‌ ಮುಂತಾದ ವ್ಯಕ್ತಿಚಿತ್ರಗಳು ಹೆಸರುವಾಸಿಯಾದವು. ಮಜಾ ಟಾಕೀಸ್‌ನಲ್ಲಿ ಚಿತ್ರನಟ ಅನಂತ್‌ನಾಗ್‌ರವರ ಚಿತ್ರ ರಚಿಸಿದ್ದು ಹಾಗೂ “ಕಾರ್ಗಿಲ್‌ ವಿಜಯ ದಿವಸ’ದಂದು ನಡೆದ ಕಾರ್ಯಕ್ರಮವೊಂದರಲ್ಲಿ ಸೈನಿಕ ಯೋಗೇಂದ್ರ ಸಿಂಗ್‌ ಯಾದವ್‌ ಅವರ ಜೀವನವನ್ನು ಬಿಂಬಿಸುವ “ಕಾರ್ಗಿಲ್‌ ಕದನ’ ಶೀರ್ಷಿಕೆಯಡಿ ರಚಿಸಿದ ಮರಳು ಚಿತ್ರ ಕಲಾ ಪ್ರದರ್ಶನ ಅವರಿಗೆ ಅತ್ಯಂತ ಹೆಮ್ಮೆ ತಂದ ಪ್ರದರ್ಶನಗಳು. 

Advertisement

ಪ್ರಶಸ್ತಿ ಸನ್ಮಾನ
ಕೇವಲ ಮರಳು ಚಿತ್ರವಲ್ಲದೆ, ಸ್ಥಳದಲ್ಲಿಯೇ ಭಾವಚಿತ್ರಗಳನ್ನು ಬಿಡಿಸುವುದರಲ್ಲಿ ಇವರು ಸಿದ್ಧಹಸ್ತರು. ಇವರ ಸಾಧನೆಯನ್ನು ಗುರುತಿಸಿ ಸರ್‌ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ ಇವರಿಗೆ “ಕರ್ನಾಟಕ ಕಲಾ ಮಯೂರ’ ಬಿರುದು ನೀಡಿ ಗೌರವಿಸಿದೆ. 2016ರಲ್ಲಿ ಹೊಸದುರ್ಗದ ಕನಕ ಮಠ ಹಾಗೂ 2018ರಲ್ಲಿ ಅಖೀಲ ಕರ್ನಾಟಕ ಯುವ ಕುರುಬರ ಒಕ್ಕೂಟ “ಕನಕ ಚೇತನ’ ಬಿರುದು ನೀಡಿವೆ. “ಟ್ಯಾಲೆಂಟ್‌ ಆಫ್ ಕರ್ನಾಟಕ’ ಪ್ರಶಸ್ತಿ ಕೂಡಾ ಇವರಿಗೆ ಸಿಕ್ಕಿದೆ. 

ಮರಳ ಶೋಧನೆ
ಮರಳು ಚಿತ್ರ ರಚನೆಗೆ ಬೇಕಾಗುವ ಮರಳನ್ನು ತಾವೇ ಸಮುದ್ರತೀರದಿಂದ ತಂದು ಶೋಧಿಸಿ, ಮರಳನ್ನು ತಯಾರಿಸಿಕೊಳ್ಳುತ್ತಾರೆ. ಮನೆಯವರ ಪ್ರೋತ್ಸಾಹ ಇವರ ಜೊತೆಗಿದೆ. ಈ ಮರಳು ಚಿತ್ರ ರಚನೆಯಲ್ಲಿ ರಾಷ್ಟ್ರಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬ ಮಹದಾಸೆ ಇವರದ್ದು. 

ಭಾಷಣದ ಮಧ್ಯೆ ಮರಳಿನಾಕೃತಿ
 2015ರಲ್ಲಿ, ಶಿರಾ ತಾಲೂಕಿನ ದ್ವಾರನಕುಂಟೆಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಷಣ ಮಾಡುತ್ತಿದ್ದರೆ, ಅವರ ಎದುರಲ್ಲೇ ಕುಳಿತು ಅವರ ಭಾವಚಿತ್ರ ಬಿಡಿಸಿಕೊಟ್ಟರು. ಅದನ್ನು ನೋಡಿದ ಸಿದ್ದರಾಮಯ್ಯ, ರೇಣುಕ ಅವರ ಬೆನ್ನುತಟ್ಟಿ ಶ್ಲಾ ಸಿದ್ದರಂತೆ.

ಪ್ರಕಾಶ್‌ ಕೆ. ನಾಡಿಗ್‌ 

Advertisement

Udayavani is now on Telegram. Click here to join our channel and stay updated with the latest news.

Next