Advertisement

ದ.ಕ. ಉಡುಪಿ ಜಿಲ್ಲೆಗೆ ಒಟ್ಟು 13,450 ಮನೆ ಗುರಿ: ಪ್ರಗತಿಯಲ್ಲಿದೆ ಅರ್ಹ ಫಲಾನುಭವಿಗಳ ಆಯ್ಕೆ

09:49 AM Jul 18, 2022 | Team Udayavani |

ಬಂಟ್ವಾಳ: ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಯದಿಂದ ವಿಳಂಬವಾಗಿದ್ದ ವಸತಿ ಯೋಜನೆಯಡಿ ಮನೆಗಳ ಮಂಜೂರಾತಿ ಈಗ ಆರಂಭವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಬಸವ ವಸತಿ- ಡಾ| ಬಿ.ಆರ್‌. ಅಂಬೇಡ್ಕರ್‌ (ಗ್ರಾಮೀಣ) ವಸತಿ ಯೋಜನೆಗಳ ಮೂಲಕ ಒಟ್ಟು 13,450 ಮನೆಗಳು ಗುರಿ ನೀಡಲಾಗಿದ್ದು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.

Advertisement

ಈಗಾಗಲೇ ಆಯ್ಕೆಯಾಗಿರುವ ಬಹುತೇಕ ಫಲಾನುಭವಿಗಳಿಗೆ ಮನೆ ನಿರ್ಮಾಣದ ಆದೇಶ ಪತ್ರ ವಿತರಿಸಲಾಗಿದೆ.

ಬಸವ ವಸತಿಯಲ್ಲಿ ಮನೆ ಮಂಜೂರಾಗುವ ಫಲಾನುಭವಿಗಳಿಗೆ 1.20 ಲಕ್ಷ ರೂ. ಹಾಗೂ ಡಾ| ಬಿ.ಆರ್‌. ಅಂಬೇಡ್ಕರ್‌ (ಗ್ರಾಮೀಣ)ನಲ್ಲಿ ಮನೆ ಮಂಜೂರಾಗುವ ಪ. ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ 1.75 ಲಕ್ಷ ರೂ. ಮೊತ್ತ ಹಂತಗಳಲ್ಲಿ ಲಭ್ಯವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಬಸವ ವಸತಿಯಲ್ಲಿ 5,993 ಮತ್ತು ಡಾ| ಬಿ.ಆರ್‌. ಅಂಬೇಡ್ಕರ್‌ (ಗ್ರಾಮೀಣ)ನಲ್ಲಿ 1,907 ಸೇರಿ ಒಟ್ಟು 7,900 ಮನೆಗಳ ಗುರಿ ನಿಗದಿಯಾಗಿದೆ. ಉಡುಪಿ ಜಿಲ್ಲೆಗೆ ಬಸವ ವಸತಿಯಲ್ಲಿ 4,210 ಮತ್ತು ಡಾ| ಅಂಬೇಡ್ಕರ್‌ನಲ್ಲಿ 1,340 ಮನೆಗಳು ಸೇರಿ ಒಟ್ಟು 5,550 ಮನೆಗಳ ಗುರಿ ನಿಗದಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಸತಿ ಹಂಚಿಕೆ ವಿವರ
ಗ್ರಾ.ಪಂ. ವ್ಯಾಪ್ತಿಯ ಜನಸಂಖ್ಯೆಯ ಆಧಾರದಲ್ಲಿ ಸದಸ್ಯರನ್ನು ಆರಿಸುವುದರಿಂದ ಅದೇ ಆಧಾರದಲ್ಲಿ ಈ ಬಾರಿ ಮನೆಗಳು ಮಂಜೂರಾಗಿವೆ. ಒಂದು ಗ್ರಾಮ ಪಂಚಾಯತ್‌ನಲ್ಲಿ 15ಕ್ಕಿಂತ ಕಡಿಮೆ ಸದಸ್ಯರಿದ್ದರೆ 30 ಮನೆ, 15ರಿಂದ 25 ಸದಸ್ಯರಿದ್ದರೆ 40 ಮನೆ ಮತ್ತು 25ಕ್ಕಿಂತ ಹೆಚ್ಚಿನ ಸದಸ್ಯರಿದ್ದರೆ 50 ಮನೆ ಹಂಚಿಕೆ ಮಾಡಲಾಗಿದೆ.

Advertisement

ದ.ಕ.ಕ್ಕೆ ನೀಡಿರುವ ಒಟ್ಟು 7,900 ಮನೆಗಳ ಗುರಿಯಲ್ಲಿ ಪ್ರಸ್ತುತ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೆಲವು ಗ್ರಾ.ಪಂ.ಗಳಲ್ಲಿ ಅರ್ಹ ಫಲಾನುಭವಿಗಳು ಇಲ್ಲದಿದ್ದರೆ ಅವನ್ನು ಬೇರೆ ಗ್ರಾ.ಪಂ.ಗಳಿಗೆ ಮರು ಗುರಿ ನಿಗದಿ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಅದು ಪೂರ್ಣಗೊಂಡರೆ ಗುರಿ ತಲುಪುವುದಕ್ಕೆ ಸಾಧ್ಯವಿದೆ.
ಎಚ್‌.ಆರ್‌. ನಾಯಕ್‌
ಯೋಜನಾ ನಿರ್ದೇಶಕರು,
ದ.ಕ. ಜಿ.ಪಂ.

ಉಡುಪಿ ಜಿಲ್ಲೆಗೆ ನಿಗದಿ ಯಾಗಿರುವ ಗುರಿಯಲ್ಲಿ ಈಗಾಗಲೇ ಶೇ. 70ರಿಂದ 80 ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಮರು ಗುರಿ ನಿಗದಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅದಾದರೆ ಬಹುತೇಕ ಗುರಿ ತಲುಪಿ ದಂತಾಗುತ್ತದೆ. ಉದಾಹರಣೆಗೆ, ಕೆಲವು ಗ್ರಾ.ಪಂ.ನಲ್ಲಿ ಎಸ್‌ಸಿ ಫಲಾನುಭವಿಗಳು ಇಲ್ಲದೆ ಇದ್ದರೆ ಎಸ್‌ಟಿಗೆ ವರ್ಗಾಯಿಸಿ ಮರು ಗುರಿ ನಿಗದಿ ಮಾಡಲಾಗುತ್ತದೆ.
-ಬಾಬು, ಯೋಜನಾ ನಿರ್ದೇಶಕರು, ಉಡುಪಿ ಜಿ.ಪಂ.


- ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next