ಹುಬ್ಬಳ್ಳಿ: ರಾಷ್ಟ್ರಧ್ವಜವನ್ನು ಖಾದಿ ಬಟ್ಟೆಯಿಂದ ನೇಕಾರರು ತಯಾರಿಸುತ್ತ ಬಂದಿದ್ದು, ಇದೀಗ ಕೇಂದ್ರ ಸರಕಾರ ಯಂತ್ರಗಳಿಂದ ಹಾಗೂ ಖಾದಿ ಅಲ್ಲದೆ ಪಾಲಿಸ್ಟರ್ ನಿಂದಲೂ ತಯಾರಿಸಬಹುದೆಂದು ತಿದ್ದುಪಡಿ ಮಾಡಿರುವುದಕ್ಕೆ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ತೀವ್ರ ವಿರೋಧ ವ್ಯಕ್ತ ಪಡಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ವಿ.ಪತ್ತಾರ, ಇಲ್ಲಿವರೆಗೆ ಹುಬ್ಬಳ್ಳಿಯ ಬೆಂಗೇರಿ ಕೇಂದ್ರದಲ್ಲಿ ತಯಾರಾದ ಬಿಎಸ್ ಐ ನಿಯಮದಡಿಯ ರಾಷ್ಟ್ರಧ್ವಜವನ್ನೇ ಕೆಂಪುಕೋಟೆ ಸೇರಿದಂತೆ ದೇಶದೆಲ್ಲಡೆ ಬಳಕೆ ಮಾಡಲಾಗುತ್ತಿದೆ. ಆದರೆ ಇದೀಗ ಕೇಂದ್ರ ಗೃಹ ಸಚಿವಾಲಯ ತಿದ್ದುಪಡಿ ತಂದು ಯಂತ್ರಗಳಿದಂಲೂ ಹಾಗೂ ಪಾಲಿಸ್ಟರ್ ಬಟ್ಟೆಯಿಂದಲೂ ರಾಷ್ಟ್ರಧ್ವಜ ತಯಾರಿಸಬಹುದು ಎಂದು ಹೇಳಿರುವುದು ರಾಷ್ಟ್ರಧ್ವಜ ತಯಾರಿಸುವ ನೇಕಾರರು, ಕೆಲಸಗಾರರಿಗೆ ಆಘಾತ ತರಿಸಿದೆ ಎಂದರು.
75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹೆಚ್ಚಿನ ಧ್ವಜ ಬೇಕೆಂದು ಖಾದಿ ಆಯೋಗ ಸಭೆ ಮಾಡಿದ್ದರಿಂದ ಒಕ್ಕೂಟದಡಿಯಲ್ಲಿ ರಾಷ್ಟ್ರಧ್ವಜ ತಯಾರಿಸಲಾಗಿದೆ. ಆದರೆ ಸರಕಾರದ ತಿದ್ದುಪಡಿಯಿಂದ ಗೊಂದಲ ಸೃಷ್ಟಿಯಾಗಿದ್ದು, ರಾಷ್ಟ್ರಧ್ವಜಕ್ಕಿದ್ದ ಮೌಲ್ಯವೇ ಕುಗ್ಗುವಂತೆ ಮಾಡಿದೆ. ಕೆಲ ಮೂಲಗಳ ಪ್ರಕಾರ ಕೇಂದ್ರ ಸರಕಾರ ಚೀನಾದಿಂದ ನಮ್ಮ ರಾಷ್ಟ್ರಧ್ವಜ ಆಮದಿಗೆ ಬೇಡಿಕೆ ಸಲ್ಲಿಸಿದೆ ಎಂದು ತಿಳಿದು ಬಂದಿದ್ದು, ಇದು ಅತ್ಯಂತ ನೋವಿನ ಹಾಗೂ ಕಳವಳಕಾರಿ ಸಂಗತಿಯಾಗಿದೆ ಎಂದರು.
ಯಂತ್ರದಿಂದ ಹಾಗೂ ಪಾಲಿಸ್ಟರ್ ಬಟ್ಟೆಯಿಂದ ರಾಷ್ಟ್ರಧ್ವಜ ತಯಾರಿಕೆ ಯತ್ನವನ್ನು ಸರಕಾರ ಕೈಬಿಡಬೇಕು. ಇದು ರಾಷ್ಟ್ರಧ್ವಜ ದ ಮೌಲ್ಯ ಹಾಗೂ ದೇಶದ ಸ್ವಾಭಿಮಾನದ ಪ್ರಶ್ನೆಯಾಗಿದೆ ಎಂದರು.
ಈಗಾಗಲೇ ಪ್ರಧಾನಿ, ಕೇಂದ್ರ ಗೃಹ ಸಚಿವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ಮನವಿ ಸಲ್ಲಿಸಿದ್ದೇವೆ. ಸರಕಾರ ತನ್ನ ನಿಲುವು ಮುಂದುವರೆಸಿದರೆ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.