Advertisement

ವಿಜಿ ಬಾಯಲ್ಲಿ ಪೋಲಿ ಮಾತು

06:00 AM Jun 08, 2018 | |

ಸಂಚಾರಿ ವಿಜಯ್‌ ಇಲ್ಲಿಯವರೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳಲ್ಲಿ, ಹೆಚ್ಚು ಪೋಲಿ ಡೈಲಾಗ್‌ಗಳಿರುವ, ಪಡ್ಡೆಗಳನ್ನು ಒಲಿಸಿಕೊಳ್ಳುವಂತಹ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಈಗ ಅದೂ ಹಾಗೋಗಿದೆ, “ಪಾದರಸ’ ಎಂಬ ಸಿನಿಮಾದಲ್ಲಿ. 

Advertisement

ಹೌದು, “ಪಾದರಸ’ ಚಿತ್ರದಲ್ಲಿ ವಿಜಯ್‌ ಈ ಹಿಂದೆ ಮಾಡಿರದಂತಹ ಪಾತ್ರ ಮಾಡಿದ್ದಾರೆ. ಅದು ಲವರ್‌ಬಾಯ್‌ ಆಗಿ. ಜೊತೆಗೆ ಪಡ್ಡೆ ಹುಡುಗರು ಇಷ್ಟಪಡುವಂತಹ ಒಂದಷ್ಟು ಪೋಲಿ ಡೈಲಾಗ್‌ ಅನ್ನು ಕೂಡಾ ಹೇಳಿದ್ದಾರಂತೆ. ಆ ತರಹ ಡೈಲಾಗ್‌ ಹೊಡೆಯುವುದು ಅಷ್ಟು ಸುಲಭವಾಗಿರಲಿಲ್ಲವಂತೆ. ಈ ಕುರಿತು ಮಾತನಾಡುವ ಅವರು, “ನನಗೆ ಇದು ತುಂಬಾ ಕಷ್ಟ-ಇಷ್ಟದ ಸಿನಿಮಾ. ಬೇರೆ ತರಹದ ಇಮೇಜ್‌ ಇರೋ ಸಿನಿಮಾ. ಪಡ್ಡೆಹುಡುಗರನ್ನು ಕೆಣಕುವಂತಹ ಸಂಭಾಷಣೆಗಳನ್ನು ನಾನು ಹೇಳಿದ್ದೇನೆ. ಆರಂಭದಲ್ಲಿ ತುಂಬಾ ಮುಜುಗರವಾಯಿತು. ನಿರ್ದೇಶಕರು ಬಂದು, “ಈ ಸಿನಿಮಾದಿಂದ ನಿಮಗೊಂದು ಹೊಸ ಇಮೇಜ್‌ ಸಿಗಲಿದೆ. ಮಾಡಿ’ ಎಂದರು. ಅದರಂತೆ ಮಾಡಿದೆ. ಈಗ ಖುಷಿ ಇದೆ. ಒಂದು ವೇಳೆ ಈ ಸಿನಿಮಾವನ್ನು ಮಾಡದೇ ಇದ್ದಿದ್ದರೆ ಒಂದೊಳ್ಳೆಯ ಸಿನಿಮಾವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು ವಿಜಯ್‌. 

ಇಲ್ಲಿ ಯಾರ ಹಂಗಿಲ್ಲದ ಅನಾಥ ಹುಡುಗನಾಗಿ ಅವರು ಕಾಣಿಸಿಕೊಂಡಿದ್ದಾರಂತೆ. ಅವರ ಸ್ನೇಹಿತನಾಗಿ ನಿರಂಜನ್‌ ನಟಿಸಿದ್ದಾರೆ. ಚಿತ್ರದಲ್ಲಿ ಒಂದೊಳ್ಳೆಯ ಸಂದೇಶವಿದೆಯಂತೆ. ಯಾರಿಗೆ ಬೇಕಾದರೂ ಮೋಸ ಮಾಡಬಹುದು, ಸುಳ್ಳು ಹೇಳಬಹುದು. ಆದರೆ, ನಮ್ಮ ಮನಸ್ಸಿಗೆ ಮಾತ್ರ ಸುಳ್ಳು ಹೇಳಲು ಸಾಧ್ಯವಿಲ್ಲ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ಇನ್ನು, ಚಿತ್ರದ ಮುಂಬೈ-ಕರ್ನಾಟಕದ ಏರಿಯಾಗಳು ಮಾರಾಟವಾಗಿರುವುದರಿಂದ ವಿಜಯ್‌ ಖುಷಿಯಾಗಿದ್ದಾರೆ. ಈ ಚಿತ್ರವನ್ನು ಹೃಷಿಕೇಶ್‌ ಜಂಭಗಿ ನಿರ್ದೇಶಿಸಿದ್ದಾರೆ. ಅವರು ಸಿನಿಮಾ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಚಿತ್ರವಾಗಲು ಸಹಕರಿಸಿದವರಿಗೆ ಥ್ಯಾಂಕ್ಸ್‌ ಹೇಳಲು ಸಮಯ ತಗೊಂಡರು. ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾದಲ್ಲಿ ಒಂದು ಸಂದೇಶವನ್ನು ಹೇಳಿದ್ದಾರಂತೆ ಹೃಷಿಕೇಶ್‌. ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕೃಷ್ಣ ಅವರು ಹೇಳುವಂತೆ ನವರಸಗಳು ಸೇರಿ “ಪಾದರಸ’ ಆಗಿದೆಯಂತೆ. “ಸಿನಿಮಾ ಇಷ್ಟವಾಗದಿದ್ದರೆ ಕಾಸು ವಾಪಾಸ್‌ ಕೊಡ್ತೀವಿ’ ಎನ್ನುವಷ್ಟರ ಮಟ್ಟಿಗೆ ನಾವು ಈ ಸಿನಿಮಾ ಮೇಲೆ ವಿಶ್ವಾಸ ಇಟ್ಟಿದ್ದೇವೆ ಎನ್ನುವುದು ಅವರ ಮಾತು. 

ಚಿತ್ರದಲ್ಲಿ ವೈಷ್ಣವಿ ಮೆನನ್‌ ನಾಯಕಿ. ಇದು ಅವರು ಒಪ್ಪಿಕೊಂಡ ಮೊದಲ ಸಿನಿಮಾವಂತೆ. ಆರಂಭದಲ್ಲಿ ನಿರ್ದೇಶಕರು ಯಾರ್ಯಾರು ನಟಿಸುತ್ತಿದ್ದಾರೆಂಬ ಪಟ್ಟಿ ಹೇಳಿದಾಗ ಭಯವಾಯಿತಂತೆ. ಏಕೆಂದರೆ, ಅವರೆಲ್ಲರಿಗೂ ನಟನೆಯ ಅನುಭವವಿದ್ದು, ತನಗಿಲ್ಲ ಎಂಬ ಕಾರಣದಿಂದ ಸ್ವಲ್ಪ ಟೆನ್ಸ್‌ ಆದರಂತೆ. ಆದರೆ, ಸೆಟ್‌ನಲ್ಲಿ ಎಲ್ಲರ ಸಹಕಾರ ಚೆನ್ನಾಗಿತ್ತು ಎನ್ನುವುದು ಅವರ ಮಾತು. ಮನಸ್ವಿನಿ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಇನ್ನು ವಿಜಯ್‌ ಚೆಂಡೂರ್‌ ಮತ್ತು ನಿರಂಜನ್‌ ದೇಶಪಾಂಡೆ ಕೂಡಾ ನಟಿಸಿದ್ದಾರೆ. ಚಿತ್ರದಲ್ಲಿ ನಿರಂಜನ್‌ ದೇಶಪಾಂಡೆ, ವಿಜಯ್‌ ಸ್ನೇಹಿತರಾಗಿ ನಟಿಸಿದ್ದಾರೆ. ಅವರದ್ದು ಮಾವ-ಭಾವ ಎನ್ನುತ್ತಾ ಓಡಾಡಿಕೊಂಡಿರುವ ಪಾತ್ರವಂತೆ. ವಿಜಯ್‌ ಚೆಂಡೂರುಗೆ ಈ ಸಿನಿಮಾ ತುಂಬಾ ವಿಶೇಷವಂತೆ. ಇವರ ಪಾತ್ರ ಕೇವಲ ಕಾಮಿಡಿಯಾಗಿ ಉಳಿಯದೇ, ಸಂದೇಶ ಕೊಡುವ ಕೆಲಸವನ್ನೂ ಮಾಡಿದೆಯಂತೆ. “ಪಾದರಸ’ ಚಿತ್ರಕ್ಕೆ ಎ.ಟಿ.ರವೀಶ್‌ ಸಂಗೀತ, ಎಂ.ಬಿ.ಅಳ್ಳಿಕಟ್ಟಿ ಛಾಯಾಗ್ರಹಣವಿದೆ.

Advertisement

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next