ಹೊಸದಿಲ್ಲಿ: ಸನಾತನ ಧರ್ಮದ ವಿರುದ್ಧ ಡಿಎಂಕೆ ನಾಯಕರಾದ ಉದಯನಿಧಿ ಸ್ಟಾಲಿನ್ ಮತ್ತು ಎ. ರಾಜಾ ಅವರ ಟೀಕೆಗಳನ್ನು ಒಪ್ಪುವುದಿಲ್ಲ. ಪಕ್ಷವು ಸರ್ವಧರ್ಮಗಳಲ್ಲಿ ಸಮಾನ ನಂಬಿಕೆ ಹೊಂದಿದೆ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ
ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,
“ಕಾಂಗ್ರೆಸ್ ಯಾವಾಗಲೂ ‘ಸರ್ವಧರ್ಮ ಸಂಭವ’ವನ್ನು ನಂಬುತ್ತದೆ, ಇದರಲ್ಲಿ ಪ್ರತಿಯೊಂದು ಧರ್ಮ, ಪ್ರತಿಯೊಂದು ನಂಬಿಕೆಗೂ ತನ್ನದೇ ಆದ ಸ್ಥಳವಿದೆ. ಯಾರೂ ಯಾವುದೇ ನಿರ್ದಿಷ್ಟ ನಂಬಿಕೆಯನ್ನು ಇನ್ನೊಂದು ನಂಬಿಕೆಗಿಂತ ಕಡಿಮೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸಂವಿಧಾನವು ಇದನ್ನು ಅನುಮತಿಸುವುದಿಲ್ಲ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಯಾವುದೇ ಹೇಳಿಕೆಗಳನ್ನು ನಂಬುವುದಿಲ್ಲ” ಎಂದರು.
“ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಇತಿಹಾಸವನ್ನು ನೀವು ತಿಳಿದಿದ್ದರೆ, ನಾವು ಯಾವಾಗಲೂ ಈ ನಿಲುವನ್ನು ಉಳಿಸಿಕೊಂಡಿದ್ದೇವೆ. ಸಂವಿಧಾನ ಸಭೆಯ ಚರ್ಚೆಗಳು ಮತ್ತು ಭಾರತದ ಸಂವಿಧಾನದಲ್ಲಿ ಅದೇ ತತ್ವಗಳನ್ನು ನೀವು ಕಾಣಬಹುದು. ಕಾಂಗ್ರೆಸ್‌ಗೆ ಸಂಬಂಧಪಟ್ಟಂತೆ ಸಂವಿಧಾನದ ಬಗ್ಗೆ ಮರುಚಿಂತನೆ ಮಾಡಲು ಸಾಧ್ಯವೇ ಇಲ್ಲ” ಎಂದಿದ್ದಾರೆ.
‘ಕಾಂಗ್ರೆಸ್ ಪಕ್ಷ ಮಿತ್ರ ಪಕ್ಷದ ನಾಯಕರ ಟೀಕೆಗಳನ್ನು ಏಕೆ ಖಂಡಿಸಲಿಲ್ಲ’ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಖೇರಾ, “ಅಂತಹ ಹೇಳಿಕೆಗಳನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದೇನೆ” ಎಂದರು.
‘ಡಿಎಂಕೆಯೊಂದಿಗೆ ಈ ವಿಚಾರನ್ನು ಕಾಂಗ್ರೆಸ್ ಪ್ರಸ್ತಾಪಿಸುತ್ತದೆಯೇ’ ಎಂದು ಕೇಳಿದಾಗ, ‘ಈ ಸಮಸ್ಯೆಗಳನ್ನುಪ್ರಸ್ತಾಪಿಸು ಅಗತ್ಯವಿಲ್ಲ, ಏಕೆಂದರೆ “ನಮ್ಮ ಮತದಾರರು ಪ್ರತಿಯೊಂದು ಧರ್ಮವನ್ನು ಗೌರವಿಸುತ್ತಾರೆ ಎಂಬುದು ನಮಗೆ ತಿಳಿದಿದೆ. ಈಗ ನೀವು ಯಾರೊಬ್ಬರ ಟೀಕೆಗಳನ್ನು ತಿರುಚಲು ಬಯಸಿದರೆ, ಅವರು ಹಾಗೆ ಮಾಡಲು ಸ್ವತಂತ್ರರು. ಪ್ರಧಾನಿಯವರಿಗೆ ಸೂಕ್ತವಾಗಿದ್ದರೆ ಆ ಟೀಕೆಗಳನ್ನು ತಿರುಚಲಿ. ಇಂಡಿಯಾ ಮೈತ್ರಿಕೂಟದ ಪ್ರತಿಯೊಬ್ಬ ಸದಸ್ಯರು ಎಲ್ಲಾ ನಂಬಿಕೆಗಳು, ಸಮುದಾಯಗಳು ಮತ್ತು ನಂಬಿಕೆಗಳ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ” ಎಂದು ಪ್ರತಿಕ್ರಿಯಿಸಿದರು.
ಏಡ್ಸ್ ಮತ್ತು ಕುಷ್ಠರೋಗಕ್ಕೆ ಹೋಲಿಕೆ!!
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಜನರಲ್ಲಿ ವಿಭಜನೆ ಮತ್ತು ತಾರತಮ್ಯವನ್ನು ಉತ್ತೇಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ ನಂತರ ತೀವ್ರ ರಾಜಕೀಯ ಗದ್ದಲದ ನಡುವೆ ಡಿಎಂಕೆ ನಾಯಕ ಎ ರಾಜಾ ”ಸನಾತನ ಧರ್ಮ ಸಾಮಾಜಿಕ ಕಳಂಕವನ್ನು ಹೊಂದಿದ್ದು, ಏಡ್ಸ್ ಮತ್ತು ಕುಷ್ಠರೋಗದಂತಹ ಕಾಯಿಲೆಗಳಿಗೆ ಹೋಲಿಸಬೇಕು” ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.