“ದಂಡುಪಾಳ್ಯ ಹಂತಕರು ಎಂದು ಕರೆಸಿಕೊಂಡು ಗಲ್ಲು ಶಿಕ್ಷೆ ಮತ್ತು ಜೀವಾವಧಿ ಶಿಕ್ಷೆಗೆ ಗುರಿಯಾದ ಬಹುತೇಕರು ಅಮಾಯಕರು. ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿದ್ದವರನ್ನು ಬಲವಂತವಾಗಿ ಇಂಥ ಗಂಭೀರ ಪ್ರಕರಣದಲ್ಲಿ ಸಿಲುಕಿಸಿ ಅವರನ್ನು ಜೈಲಿಗೆ ತಳ್ಳಲಾಗಿದೆ. ಆದರೆ ವಾಸ್ತವವಾಗಿ, ಇದರ ಹಿಂದೆ ದೊಡ್ಡ ದೊಡ್ಡ ಕಾಣದ ಕೈಗಳಿವೆ. ಅವರನ್ನು ರಕ್ಷಿಸುವ ಸಲುವಾಗಿ ಸರ್ಕಾರ, ಪೊಲೀಸ್, ಮತ್ತು ಇಡೀ ಒಂದು ವ್ಯವಸ್ಥೆ ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಇಂಥ ಅಮಾಯಕರನ್ನು ಬಲಿಪಶುಗಳನ್ನಾಗಿ ಮಾಡಿದೆ. ರಾಜ್ಯದಲ್ಲಿ ಇಂಥ ಅನೇಕ ಪ್ರಕರಣಗಳಲ್ಲಿ ಇದೇ ರೀತಿ ಅದೆಷ್ಟೋ ಅಮಾಯಕರು ಬಲಿಪಶುಗಳಾಗಿದ್ದಾರೆ. ಇದನ್ನು ಪ್ರಶ್ನಿಸಲು ಮತ್ತು ಅದರ ಹಿಂದಿನ ಸತ್ಯವನ್ನು ತಿಳಿಯಲು ಹೋದರೆ ಇಡೀ ವ್ಯವಸ್ಥೆ ನಿಮ್ಮ ವಿರುದ್ಧವಾಗಿ ನಿಲ್ಲುತ್ತದೆ. ಈ ಸಿನಿಮಾದಲ್ಲಿ ಅಂಥದ್ದೊಂದು ಪಾತಕ ಲೋಕವನ್ನು ಜನರ ಮುಂದೆ ತೆರೆದಿಡಲಾಗುತ್ತಿದೆ’ ಇದು ಲೇಖಕ ಅಗ್ನಿ ಶ್ರೀಧರ್ ಮಾತು.
ಅಂದಹಾಗೆ, ಅಗ್ನಿ ಶ್ರೀಧರ್ ಇಂಥದ್ದೊಂದು ಮಾತಾಡಿರುವುದು ತಮ್ಮ ಮುಂಬರುವ “ಕ್ರೀಂ’ ಸಿನಿಮಾದ ಬಗ್ಗೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ “ಕ್ರೀಂ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೇ ವೇಳೆ ಸಿನಿಮಾದ ಕುರಿತು ಮಾಹಿತಿ ನೀಡಲು ಚಿತ್ರತಂಡದ ಜೊತೆ ಬಂದಿದ್ದ ಅಗ್ನಿ ಶ್ರೀಧರ್, ಸಿನಿಮಾದ ವಿಷಯಗಳ ಬಗ್ಗೆ ಮಾತನಾಡಿದರು.
“ಅನೇಕ ವರ್ಷಗಳಿಂದ ವೇಶ್ಯಾವಾಟಿಕೆಯಲ್ಲಿರುವ ಮಹಿಳೆಯರು ನಿಗೂಢವಾಗಿ ಕೊಲೆಯಾಗುತ್ತಿದ್ದಾರೆ. ಅವರಲ್ಲಿ ಬಹುತೇಕರನ್ನು ವಾಮಾಚಾರ ಇತ್ಯಾದಿ ಕೃತ್ಯಗಳಿಗೆ ಬಲಿ ಕೊಡಲಾಗುತ್ತಿದೆ. ಇಂದಿಗೂ ಇದು ನಡೆಯುತ್ತಿದೆ. ಇದರ ಹಿಂದೆ ಅನೇಕ ರಾಜಕಾರಣಿಗಳು, ಉದ್ಯಮಿಗಳು, ಹಿರಿಯ ಅಧಿಕಾರಿಗಳು ಹೀಗೆ ದೊಡ್ಡ ದೊಡ್ಡ ಪ್ರಭಾವಿಗಳಿದ್ದಾರೆ. ಇಂಥ ವಿಷಯಗಳ ಬಗ್ಗೆ ಗೊತ್ತಿದ್ದವರು ಕೂಡ ಮಾತನಾಡುವುದಿಲ್ಲ. ಹಾಗೇನಾದರೂ ಮಾತನಾಡಿದರೆ, ಅವರನ್ನು ವ್ಯವಸ್ಥಿತವಾಗಿ ಬಾಯಿ ಮುಚ್ಚಿಸಲಾಗುತ್ತದೆ. ಇಂಥದ್ದೇ ವಿಷಯವನ್ನು ಈ “ಕ್ರೀಂ’ ಸಿನಿಮಾದಲ್ಲಿ ಹೇಳಿದ್ದೇವೆ’ ಎಂದರು.
ಇನ್ನು “ಕ್ರೀಂ’ ಎಂಬುದು ಬೀಜ ಮಂತ್ರದಲ್ಲಿ ಬರುವ ಒಂದು ಪದ. ಸಿನಿಮಾದ ಕಥಾಹಂದರಕ್ಕೆ ಸೂಕ್ತವೆಂಬ ಕಾರಣಕ್ಕೆ “ಕ್ರೀಂ’ ಎಂಬುದನ್ನೇ ಸಿನಿಮಾದ ಟೈಟಲ್ ಆಗಿ ಇಟ್ಟುಕೊಳ್ಳಲಾಗಿದೆ ಎಂಬುದು ಚಿತ್ರತಂಡದ ವಿವರಣೆ. “ಕ್ರೀಂ’ ಸಿನಿಮಾಕ್ಕೆ ಅಭಿಷೇಕ್ ಬಸಂತ್ ನಿರ್ದೇಶನವಿದ್ದು, ದೇವೇಂದ್ರ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
“ಕ್ರೀಂ’ ಸಿನಿಮಾದಲ್ಲಿ ಸಂಯುಕ್ತಾ ಹೆಗ್ಡೆ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು ಉಳಿದಂತೆ ಅರುಣ್ ಸಾಗರ್, ಅಚ್ಯುತ ಕುಮಾರ್, ರೋಷನ್ ಮತ್ತಿತರರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.