ಮುಂಬಯಿ: ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಜ. 6 ರಂದು ಸಂಜೆ ವಸಾಯಿರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿಯವರ ಬಾಲಾಜಿ ಮಂದಿರಕ್ಕೆ ಭೇಟಿ ನೀಡಿದರು.
ಜಿಎಸ್‌ಬಿ ಸಮಾಜ ಸೇವಾ ಸಂಘ ವಸಾಯಿಗಾಂವ್ ಪಾರಾನಾಕಾ ಮೊಕ್ಕಾಂನಿಂದ ಆಗಮಿಸಿದ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಶ್ರೀಗಳು ಸಂಸ್ಥಾನದ ದೇವರಾದ ಶ್ರೀ ವ್ಯಾಸರಘುಪತಿ ಮತ್ತು ಶ್ರೀ ಲಕ್ಷ್ಮೀ ನರಸಿಂಹ ವಿಗ್ರಹವನ್ನು ಗರ್ಭಗುಡಿಯಲ್ಲಿಟ್ಟು ಪೂಜೆಗೈದರು.
ಜಿಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವೇದಘೋಷವನ್ನು ವೇದಮೂರ್ತಿ ಗಿರಿಧರ ಭಟ್ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾಯಿತು. ಸಮಿತಿಯ ಸಂಚಾಲಕ ಸೋಮೇಶ್ವರ ದೇವೇಂದ್ರ ಭಕ್ತ ಅವರು ಸ್ವಾಗತಿಸಿ ವರದಿ ವಾಚಿಸಿದರು. ಸಮಿತಿಯ ಪರವಾಗಿ ಕಾರ್ಯದರ್ಶಿ ಕಿನ್ನಿಗೋಳಿ ಪುರುಷೋತ್ತಮ ಶೆಣೈ ಅವರು ಸಮಿತಿಯ ಪದಾಧಿಕಾರಿಗಳು ಉಪಸ್ಥಿತಿಯಲ್ಲಿ ಶ್ರೀಗಳ ಪಾದಪೂಜೆ ನೆರವೇರಿಸಿದರು.
ಆಶೀರ್ವಚನ ನೀಡಿದ ಶ್ರೀಗಳು, ನಿಮ್ಮೆಲ್ಲರ ಧಾರ್ಮಿಕ ಪ್ರಜ್ಞೆಯನ್ನು ಕಂಡು ಸಂತೋಷವಾಯಿತು. ದೇವರ ಬಗ್ಗೆ ಶ್ರದ್ಧೆª, ಭಕ್ತಿಯಿದ್ದಲ್ಲಿ ಸಂಘಟನೆ ಅಭಿವೃದ್ಧಿಯತ್ತ ಸಾಗುತ್ತದೆ. ಈ ಕಲಿಯುಗದಲ್ಲಿ ದೇವರ ನಾಮಸ್ಮರಣೆಯಿಂದ, ಭಜನೆಯಿಂದ ಭಗವಂತನನ್ನು ಒಲಿಸಲು ಸುಲಭ ಮಾರ್ಗವಾಗಿದೆ. ಸಂಧ್ಯಾ ವಂದನೆ ದಿನನಿತ್ಯ ಮಾಡುವುದರಿಂದ ಜೀವನ ಪಾವನಾಗುತ್ತದೆ. ಸಮಿತಿಯವರು ಹಲವು ವರ್ಷಗಳಿಂದ ಪ್ರತಿ ಶನಿವಾರ ಮಾಡುವ ಭಜನೆ ಮತ್ತು ಇತರ ಚಟುವಟಿಕೆಗಳು, ಅನ್ನಸಂತರ್ಪಣೆಯನ್ನು ಕಂಡಾಗ ಸಂತೋಷವಾಗುತ್ತಿದೆ. ಸಮಿತಿಯ ಎಲ್ಲಾ ಯೋಜನೆಗಳು ಸಾಕಾರಗೊಳ್ಳಲಿ ಎಂದು ನುಡಿದು ಸೇರಿದ್ದ ಭಕ್ತಾದಿಗಳನ್ನು ಫಲ, ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ವಾಲ್ಕೇಶ್ವರ ಶ್ರೀ ಕಾಶೀಮಠದ ವ್ಯವಸ್ಥಾಪಕ ಅಧ್ಯಕ್ಷ ಜಿ. ಜಿ. ಪ್ರಭು, ಉಮನಾಥ ನಾಯಕ್, ದಹಿಸರ್ ಶ್ರೀ ಕಾಶಿ ಮಠದ ಕಾರ್ಯದರ್ಶಿ ಮಧುಸೂದನ್ ಪೈ, ಜಿಎಸ್‌ಬಿ ಸೇವಾ ಮಂಡಳದ ಕೋಶಾಧಿಕಾರಿ ಕೃಷ್ಣ ಪೈ, ಅಮೀತ್ ದಿನೇಶ್ ಪೈ, ಜಿಎಸ್‌ಬಿ ಸೇವಾ ಸಂಘ ವಸಾಯಿ ಪಾರನಾಕಾದ ಕಾರ್ಯದರ್ಶಿ ರಮೇಶ್ ಶೆಣೈ, ವಿರಾರ್, ನಲಸೋಪರ, ಮೀರಾ-ಭಾಯಂದರ್, ದಹಿಸರ್, ಬೊರಿವಲಿ ಪರಿಸರದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಸಂಜೆ ಫಲಾಹಾರ ಮತ್ತು ರಾತ್ರಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಮಿತಿಯ ಅಧ್ಯಕ್ಷ ಕೃಷ್ಣ ಕಾಮತ್, ಗೌರವಾಧ್ಯಕ್ಷ ವಸಂತ ನಾಯಕ್, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಕೋಶಾಧಿಕಾರಿ ಸುರೇಶ್ ಪೈ, ಸಂಚಾಲಕ ದೇವೇಂದ್ರ ಭಕ್ತ, ಮಹಿಳಾ ವಿಭಾಗದ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು, ಸಮಿತಿಯ ಸದಸ್ಯರ ಉಸ್ತುವಾರಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಮಿತಿಯ ಸಹ ಸಂಚಾಲಕ ದೇವದಾಸ್ ಭಟ್ ಅವರ ನೇತೃತ್ವದಲ್ಲಿ ದೇವರ ಮಂಟಪವನ್ನು ಅಲಂಕರಿಸಲಾಗಿತ್ತು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.