ಸ್ಯಾಮ್ ಸಂಗ್ ಬ್ರಾಂಡ್ ಪ್ರೀಮಿಯಂ ಫೋನ್ ಗಳಿಗೆ ಹೆಸರಾಗಿದೆ. ಅದರಲ್ಲೂ ಫೋಲ್ಡ್ ಮತ್ತು ಫ್ಲಿಪ್ ಮಾಡಬಹುದಾದ ಫೋನ್ ಗಳು ಸ್ಯಾಮ್ ಸಂಗ್ ನ ಹೆಗ್ಗಳಿಕೆ. ಫ್ಲಿಪ್ ಸರಣಿಯಲ್ಲಿ ಅದರ ಇತ್ತೀಚಿನ ಫೋನ್ ಸ್ಯಾಮ್ ಸಂಗ್ ಗೆಲಾಕ್ಸಿ ಫ್ಲಿಪ್ 4. ಈ ಫೋನು ಮೂರು ಬಣ್ಣಗಳಾದ ಪಿಂಕ್ ಗೋಲ್ಡ್, ಬೋರಾ ಪರ್ಪಲ್ ಹಾಗೂ ಗ್ರಾಫೈಟ್ ನಲ್ಲಿ ದೊರಕುತ್ತದೆ. ಇದು 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಹಾಗೂ 8 ಜಿಬಿ ರ್ಯಾಮ್ ಮತ್ತು 256 ಜಿಬಿ ಅಂತರಿಕ ಸಂಗ್ರಹದ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ದರ ಕ್ರಮವಾಗಿ 89,999 ರೂ. ಹಾಗೂ 94,999 ರೂ. (ಸ್ಯಾಮ್ ಸಂಗ್. ಕಾಮ್ ನಲ್ಲಿ)
ವಿನ್ಯಾಸ ಮತ್ತು ಪರದೆ: ನೇರಳೆ ಬಣ್ಣದ ಫೋನಿನ ಹಿಂಬದಿಯ ಮೇಲ್ಮೈಯಲ್ಲಿ ಎರಡು ಲೆನ್ಸಿನ ಪ್ರಾಥಮಿಕ ಕ್ಯಾಮರಾಗಳಿವೆ. ಈ ಕ್ಯಾಮರಾ ಭಾಗವನ್ನು ಕಪ್ಪು ಬಣ್ಣದಲ್ಲಿ ವಿನ್ಯಾಸ ಮಾಡಲಾಗಿದೆ. ತುಂಬಾ ತೆಳುವಾಗಿರುವ ಈ ಫೋನನ್ನು ಮಡಚಿದಾಗ ನಮ್ಮ ಅಂಗೈಯಲ್ಲಿ ಮುಚ್ಚಿಕೊಳ್ಳುವಷ್ಟು ಪುಟ್ಟದಾಗುತ್ತದೆ. ಫ್ರೇಮ್ ಅನ್ನು ಈಗ ಮ್ಯಾಟ್ ಫಿನಿಷ್ ಬದಲಿಗೆ ನಯವಾಗಿಸಲಾಗಿದೆ. ಇದು ಗ್ಲೇಜಿಯಾಗಿರುವುದರಿಂದ ಕೈಯಲ್ಲಿ ಹಿಡಿದಾಗ ಜಾರುವಂತಿದೆ.
ಇದನ್ನು ಜೇಬಿನಲ್ಲಿಟ್ಟುಕೊಂಡರೂ ಫೋನ್ ಇದೆ ಎಂದು ಗೊತ್ತಾಗುವುದಿಲ್ಲ. ಇದು ಕಠಿಣವಾದ Samsung Galaxy ಫೋಲ್ಡಬಲ್‌ಗಳಲ್ಲಿ ಒಂದಾಗಿದೆ. ವಿಶ್ವದ ಮೊದಲ ನೀರು-ನಿರೋಧಕ ಫೋಲ್ಡಬಲ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಪಡೆದಿದೆ. Corning® Gorilla® Glass Victus®+ ರಕ್ಷಣೆ ಪರದೆಗೆ ಇದೆ. ಇದರ ಹಿಂಜ್ ಮತ್ತು ಫ್ರೇಂ ಆರ್ಮರ್ ಅಲ್ಯೂಮಿನಿಯಂನಿಂದ ಮಾಡಿದ್ದಾಗಿದ್ದು, ಬಹಳ ಕಠಣವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದರ ಫ್ರೇಂ ಸ್ಟೀಲ್ ಬಣ್ಣದಲ್ಲಿದೆ. ಫೋನು 6.9 ಮಿ.ಮೀ. ದಪ್ಪವಾಗಿದೆ. 187 ಗ್ರಾಂ ತೂಕವಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ನೀರು ನಿರೋಧಕವಾಗಿದೆ. IPX8 ರೇಟಿಂಗ್ ಹೊಂದಿದೆ. Samsung Galaxy Z ಫ್ಲಿಪ್ 4 ನ 6.7-ಇಂಚಿನ ಮಡಿಸಬಹುದಾದ ಡೈನಾಮಿಕ್ AMOLED 2X ಡಿಸ್ ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಹೊಂದಿದೆ. ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಹೊರಾಂಗಣದಲ್ಲಿ ಸ್ಪಷ್ಟವಾಗಿ ಕಾಣುತ್ತದೆ, ಡಿಸ್ಪ್ಲೇ HDR10+ ಅನ್ನು ಸಹ ಬೆಂಬಲಿಸುತ್ತದೆ. ಒಟ್ಟಾರೆ ಪರದೆ ಬಹಳ ಸ್ಪಷ್ಟವಾಗಿ ಪ್ರಕಾಶಮಾನವಾಗಿ ಕಾಣುತ್ತದೆ.
ವಿಶೇಷಣಗಳು: ಇತ್ತೀಚಿನ Qualcomm Snapdragon 8+ Gen 1 SoC ಅನ್ನು ಇದು ಒಳಗೊಂಡಿದೆ. ಬ್ಯಾಟರಿ, 3,700mAh ಇದ್ದು, 25W ಚಾರ್ಜರ್ ಹೊಂದಿದೆ.
Related Articles
ಇದು Android 12 ಅನ್ನು ಆಧರಿಸಿದ Samsung ನ One UI ಆವೃತ್ತಿ 4.1.1 ಹೊಂದಿದೆ. ಫೋನನ್ನು ಮಡಚಿದಾಗ 1.9 ಇಂಚಿನ ಕವರ್ ಡಿಸ್ ಪ್ಲೇ ಇದ್ದು, ಇದರಲ್ಲಿ ಸಮಯ, ನೊಟಿಫಿಕೇಷನ್ ಗಳನ್ನು ನೋಡಬಹುದಾಗಿದೆ.
ಕಾರ್ಯಾಚರಣೆ: ಗೀಕ್‌ಬೆಂಚ್‌ನ ಸಿಂಗಲ್-ಕೋರ್ ಮತ್ತು ಮಲ್ಟಿ-ಕೋರ್ ಪರೀಕ್ಷೆಗಳಲ್ಲಿ ಕ್ರಮವಾಗಿ 1,286 ಮತ್ತು 4,076 ಅಂಕಗಳನ್ನು ಈ ಫೋನ್ ಪಡೆದಿದೆ. ಜೊತೆಗೆ AnTuTu ನಲ್ಲಿ 9,21,680 ಸ್ಕೋರ್‌ಗಳನ್ನು ನಿರ್ವಹಿಸಿದೆ. ಮಲ್ಟಿಟಾಸ್ಕಿಂಗ್ ನಲ್ಲೂ ಫೋನ್ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಚಲನಚಿತ್ರಗಳನ್ನು ವೀಕ್ಷಿಸುವಾಗ ಫೋನ್ ಹೆಚ್ಚು ಬಿಸಿಯಾಗಲಿಲ್ಲ. ಹೊರಾಂಗಣದಲ್ಲಿ ವಿಡಿಯೊಗಳನ್ನು ರೆಕಾರ್ಡ್ ಮಾಡುವಾಗ ಸ್ವಲ್ಪ ಬೆಚ್ಚಗಿನ ಅನುಭವವಾಯಿತು.
ಕ್ಯಾಮರಾ: Galaxy Z Flip 4 ಸ್ಯಾಮ್‌ಸಂಗ್ ಅದೇ ಕ್ಯಾಮೆರಾ ಸೆಟಪ್ ಅನ್ನು ಉಳಿಸಿಕೊಂಡಿದೆ, ಹಿಂಭಾಗದಲ್ಲಿ ಪ್ರಾಥಮಿಕ ಮತ್ತು ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾಗಳಿಗಾಗಿ ಎರಡು 12-ಮೆಗಾಪಿಕ್ಸೆಲ್ ಲೆನ್ಸ್ ಹೊಂದಿದೆ. ಮತ್ತು ಸೆಲ್ಫಿಗಾಗಿ 10-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
ಪ್ರಾಥಮಿಕ ಕೆಮರಾ ಈಗ ದೊಡ್ಡ ಪಿಕ್ಸೆಲ್ ಗಾತ್ರದೊಂದಿಗೆ ದೊಡ್ಡ ಸೆನ್ಸರ್ ಹೊಂದಿದೆ. (1.8µm ಪಿಕ್ಸೆಲ್ಸ್) ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಉತ್ತಮವಾಗಿ ಕೆಲಸ ನಿರ್ವಹಿಸುತ್ತದೆ.
ಪ್ರಾಥಮಿಕ ಕ್ಯಾಮೆರಾ ಹಗಲು ಬೆಳಕಿನಲ್ಲಿ ಉತ್ತಮ ಡೀಟೇಲ್ ಚಿತ್ರಗಳನ್ನು ನೀಡುತ್ತದೆ. ಅಲ್ಟ್ರಾ-ವೈಡ್-ಆಂಗಲ್ ಕ್ಯಾಮರಾ ಸಹ ಚೆನ್ನಾಗಿದೆ. ಸೆಲ್ಫಿ ಕ್ಯಾಮರಾ ಸಹ ಪರವಾಗಿಲ್ಲ.
ಪ್ರಾಥಮಿಕ ಕ್ಯಾಮರಾ, ಕಡಿಮೆ ಬೆಳಕಿನಲ್ಲಿ ಚಿತ್ರೀಕರಣ ಮಾಡುವಾಗ, ಕ್ಯಾಮರಾ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ರಾತ್ರಿ ಮೋಡ್ ಅನ್ನು ಸಕ್ರಿಯಗೊಳಿಸುತ್ತದೆ. ಇದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಬ್ಯಾಟರಿ: ಇದು 3700 ಎಂಎಎಚ್ ಬ್ಯಾಟರಿ ಹೊಂದಿದೆ. 25 ವ್ಯಾಟ್ಸ್ ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಸ್ಯಾಮ್ಸಂಗ್ ಇದರ ಜೊತೆ ಜಾರ್ಜರ್ ನೀಡಿಲ್ಲ. ಇತ್ತೀಚಿಗೆ ಇತರ ಕಂಪೆನಿಗಳು 120 ವ್ಯಾಟ್ಸ್ ಚಾರ್ಜರ್ ಗಳನ್ನು ನೀಡುತ್ತಿದ್ದು, ಅತ್ಯಂತ ವೇಗವಾಗಿ ಅಂದರೆ , ಅರ್ಧ ಗಂಟೆಯೊಳಗೇ ಸಂಪೂರ್ಣ ಚಾರ್ಜ್ ಆಗುವ ಸವಲತ್ತು ನೀಡುತ್ತಿವೆ. ಆದರೆ ಸ್ಯಾಮ್ಸಂಗ್ ಇನ್ನೂ 25 ವ್ಯಾಟ್ಸ್ ಚಾರ್ಜಿಂಗ್ ನೀಡಿದೆ. ಇದು ಸಂಪೂರ್ಣ ಚಾರ್ಜ್ ಆಗಲು ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಒಂದು ಪ್ಲಸ್ ಪಾಯಿಂಟ್ ಎಂದರೆ ಬ್ಯಾಟರಿ ಬೇಗ ಖಾಲಿಯಾಗುವುದಿಲ್ಲ. ಒಂದು ದಿನ ಬಾಳಿಕೆ ಬರುತ್ತದೆ.
ಒಟ್ಟಾರೆ ಈ ಫೋನು ಡಿಫರೆಂಟ್ ಮತ್ತು ಪ್ರೀಮಿಯಂ ಬಯಸುವವರಿಗಾಗಿ ರೂಪಿತವಾಗಿದೆ. ಸ್ಯಾಮ್ ಸಂಗ್ ಫೋಲ್ಡ್ , ಫ್ಲಿಪ್, ಫೋನ್ ಗಳನ್ನು ಬಯಸುವ ಫ್ಯಾನ್ ಗಳನ್ನು ಇದು ನಿರಾಸೆಗೊಳಿಸುವುದಿಲ್ಲ.
-ಕೆ.ಎಸ್. ಬನಶಂಕರ ಆರಾಧ್ಯ.