Advertisement

ಗೆಲಾಕ್ಸಿ ಎಂ32 5G ಸ್ಯಾಮ್‍ಸಂಗ್‍ನಲ್ಲಿ ಮಧ್ಯಮ ವರ್ಗದ ಇನ್ನೊಂದು ಆಯ್ಕೆ

05:52 PM Sep 28, 2021 | Team Udayavani |

ಮೊಬೈಲ್‍ ಫೋನ್‍ ಬ್ರಾಂಡ್‍ ಗಳಿಗೆ ಭಾರತ ದೊಡ್ಡ ಹಾಗೂ ಪ್ರಮುಖ ಮಾರುಕಟ್ಟೆ. ಹೀಗಾಗಿಯೇ ಪ್ರಮುಖ ಮೊಬೈಲ್‍ ಫೋನ್‍ ತಯಾರಿಕಾ ಕಂಪೆನಿಗಳು ಭಾರತದಲ್ಲಿ ತಮ್ಮ ಹೊಸ ಹೊಸ ಮಾಡೆಲ್‍ಗಳನ್ನು ಹೊರ ತರುತ್ತಲೇ ಇವೆ. ಅದರಲ್ಲೂ ಸ್ಯಾಮ್‍ ಸಂಗ್‍ ಕಂಪೆನಿಯಂತೂ ಒಂದರ ಹಿಂದೆ ಒಂದರಂತೆ ತನ್ನ ಹೊಸ ಮೊಬೈಲ್‍ಗಳನ್ನು ಬಿಡುಗಡೆ ಮಾಡುತ್ತಿದೆ. ಅದು ಇತ್ತೀಚಿಗೆ ಹೊರ ತಂದಿರುವ ಹೊಸ ಮಾಡೆಲ್‍ ಗೆಲಾಕ್ಸಿ ಎಂ32 5ಜಿ.

Advertisement

ಇದರ ದರ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 20,999 ರೂ. ಹಾಗೂ 8ಜಿಬಿ/128 ಜಿಬಿ ಮಾದರಿಗೆ 22,999 ರೂ. ಇದೆ.

ಈ ಮುಂಚೆ ಕಳೆದ ಜುಲೈನಲ್ಲಿ ಗೆಲಾಕ್ಸಿ ಎಂ32 ಮೊಬೈಲ್‍ ಹೊರತರಲಾಗಿತ್ತು. ಅದರಲ್ಲಿ 5ಜಿ ಸವಲತ್ತು ಇರಲಿಲ್ಲ. ಹಾಗಾಗಿ 5ಜಿ ಸೌಲಭ್ಯ ಅಳವಡಿಸಿ ಈ ಮೊಬೈಲ್‍ ಹೊರತರಲಾಗಿದೆ. ಹೆಸರು ಮಾತ್ರ ಹೋಲಿಕೆ ಇದೆ. ಆದರೆ ಹೊರ ವಿನ್ಯಾಸ ಮತ್ತು ಸ್ಪೆಸಿಫಿಕೇಷನ್‍ ಗಳಲ್ಲಿ ಬಹಳ ವ್ಯತ್ಯಾಸ ಇದೆ. ಹೀಗಾಗಿ ಇದಕ್ಕೆ ಹೊಸ ಹೆಸರು ಕೊಟ್ಟಿದ್ದರೂ ಆಗುತ್ತಿತ್ತು!

ಪ್ರೊಸೆಸರ್: ಇದರಲ್ಲಿ ಮೀಡಿಯಾಟೆಕ್‍ ಡೈಮೆನ್ಸಿಟಿ 720 ಎಂಟು ಕೋರ್ ಗಳ ಪ್ರೊಸೆಸರ್ ನೀಡಲಾಗಿದೆ. ಈಗ ಮೊಬೈಲ್‍ ಕಂಪೆನಿಗಳು ಮಧ್ಯಮ ದರ್ಜೆಯ ಫೋನ್‍ಗಳಲ್ಲಿ 5ಜಿ ಗಾಗಿ ಹೆಚ್ಚಾಗಿ ಮೀಡಿಯಾಟೆಕ್‍ ಪ್ರೊಸೆಸರ್ ಅವಲಂಬಿಸಿವೆ. ಸ್ನಾಪ್‍ ಡ್ರಾಗನ್‍ ಗೆ ಹೋಲಿಸಿದರೆ ಮೀಡಿಯಾಟೆಕ್‍ ಪ್ರೊಸೆಸರ್ ದರ ಕಡಿಮೆ ಎಂಬ ಕಾರಣಕ್ಕೆ. ಈ ಪ್ರೊಸೆಸರ್ 5ಜಿಯ 12 ಬ್ಯಾಂಡ್‍ ಗಳನ್ನು ಬೆಂಬಲಿಸುತ್ತದೆ. ಹೀಗಾಗಿ ವಿವಿಧ ನೆಟ್‍ ವರ್ಕ್ ಕಂಪೆನಿಗಳು ಬೇರೆ ಬೇರೆ ಬ್ಯಾಂಡ್‍ ನಲ್ಲಿ ತಮ್ಮ 5ಜಿ ಸವಲತ್ತು ನೀಡಿದರೂ ಇದು ಕೆಲಸ ಮಾಡುತ್ತದೆ. ಹೀಗಾಗಿ ನೈಜ 5ಜಿ ಅನುಭವ ದೊರಕುತ್ತದೆ ಎಂಬುದು ಕಂಪೆನಿಯ ಹೇಳಿಕೆ. ಸದ್ಯಕ್ಕೆ ಭಾರತದಲ್ಲಿ 5ಜಿ ಜಾರಿಗೆ ಬಂದಿಲ್ಲ. 5ಜಿ ಹೊರತುಪಡಿಸಿದರೂ, ಇದೊಂದು ಮಧ್ಯಮ ದರ್ಜೆಯಲ್ಲಿ ವೇಗದ ಪ್ರೊಸೆಸರ್ ಎನ್ನಬಹುದು. ಹಾಗಾಗಿ ಮೊಬೈಲ್‍ ಫೋನ್‍ ಅಡೆತಡೆಯಿಲ್ಲದೆ ಕೆಲಸ ನಿರ್ವಹಿಸುತ್ತದೆ. 2 ವರ್ಷದವರೆಗೆ ಇದಕ್ಕೆ ಆಂಡ್ರಾಯ್ಡ್ ಅಪ್ ಡೇಟ್‍ ಗಳನ್ನು ನೀಡುವುದಾಗಿ ಕಂಪೆನಿ ತಿಳಿಸಿದೆ. ಇದರಲ್ಲಿ ಈಗ ಆಂಡ್ರಾಯ್ಡ್ 11 ಆವೃತ್ತಿ ಇದ್ದು, ಇದಕ್ಕೆ ಸ್ಯಾಮ್ಸಂಗ್‍ ನ ಒನ್‍ ಯೂಐ ಅಳವಡಿಸಲಾಗಿದೆ. ಎರಡು ವರ್ಷ ಅಪ್‍ ಡೇಟ್‍ ನೀಡಿದರೆ ಆಂಡ್ರಾಯ್ಡ್ ಇನ್ನೂ ಎರಡರಿಂದ ಮೂರು ಆವೃತ್ತಿಗಳು ಈ ಫೋನ್‍ ಗೆ ದೊರಕುತ್ತವೆ.

ಪರದೆ ಮತ್ತು ವಿನ್ಯಾಸ: ಇದರಲ್ಲಿ 6.5 ಇಂಚಿನ ಟಿಎಫ್‍ಟಿ ಪರದೆ ಇದೆ. ಪರದೆ ಫುಲ್‍ ಎಚ್‍ಡಿ ಪ್ಲಸ್‍ ಅಲ್ಲ. ಎಚ್‍ಡಿ ಪ್ಲಸ್‍ ಮಾತ್ರ (720*1600). ಪರದೆಯ ರಕ್ಷಣೆಗೆ ಗೊರಿಲ್ಲಾ ಗ್ಲಾಸ್‍5 ಪದರ ಇದೆ. ಸ್ಯಾಮ್‍ ಸಂಗ್‍ ಫೋನ್‍ಗಳಲ್ಲಿ ಸಾಮಾನ್ಯವಾಗಿರುವ ಅಮೋಲೆಡ್‍ ಪರದೆ ಇದರಲ್ಲಿಲ್ಲ. ಆದರೂ ಡಿಸ್‍ಪ್ಲೇ ಗುಣಮಟ್ಟ ಚೆನ್ನಾಗಿದೆ. ಪರದೆಯ ಮೇಲ್ಭಾಗ ಮುಂಬದಿ ಕ್ಯಾಮರಾಕ್ಕೆ ವಾಟರ್‍ ಡ್ರಾಪ್‍ ವಿನ್ಯಾಸ ನೀಡಲಾಗಿದೆ. ಮೊಬೈಲ್‍ ನ ಬಂಪರ್‍ ಮತ್ತು ಹಿಂಬದಿ ದೇಹವನ್ನು ಪ್ಲಾಸ್ಟಿಕ್‍ನಿಂದ ಮಾಡಲಾಗಿದೆ. ಹಿಂಬದಿ ವಿನ್ಯಾಸ ಹಿಂದಿನ ಗೆಲಾಕ್ಸಿ ಎ52 ಮೊಬೈಲ್‍ ಮಾದರಿಯಲ್ಲೇ ಇದೆ. ಅದೇ ರೀತಿಯ ಪ್ಲಾಸ್ಟಿಕ್‍ ಅನ್ನು ಬಳಸಲಾಗಿದೆ. ಹಿಂಬದಿ ವಿನ್ಯಾಸ ಬೇರೆ ಬ್ರಾಂಡ್‍ ಗಳಿಗಿಂತ ವಿಭಿನ್ನವಾಗಿದ್ದು, ಗಮನ ಸೆಳೆಯುತ್ತದೆ. ಸ್ಲಿಮ್‍ ಕೂಡ ದೆ. ಮೊಬೈಲ್‍ 202 ಗ್ರಾಂ ತೂಕವಿದೆ. ಕಪ್ಪು ಮತ್ತು ಆಕಾಶ ನೀಲಿ ಬಣ್ಣದಲ್ಲಿ ದೊರಕುತ್ತದೆ.

Advertisement

ಕ್ಯಾಮರಾ: ನಾಲ್ಕು ಕ್ಯಾಮರಾಗಳಿವೆ. 48 ಮೆ.ಪಿ. ಮುಖ್ಯ ಕ್ಯಾಮರಾ, 8 ಮೆ.ಪಿ. ಅಲ್ಟ್ರಾವೈಡ್‍, 5 ಮೆ.ಪಿ. ಡೆಪ್ತ್ ಹಾಗೂ 2 ಮೆ.ಪಿ. ಮ್ಯಾಕ್ರೋ ಕ್ಯಾಮರಾ ಇದೆ. ಮುಂಬದಿಗೆ 13 ಮೆ.ಪಿ. ಕ್ಯಾಮರಾ ನೀಡಲಾಗಿದೆ. ಸಾಮಾನ್ಯವಾಗಿ ಸ್ಯಾಮ್ಸಂಗ್‍ ಫೋನುಗಳು ಕ್ಯಾಮರಾ ವಿಷಯದಲ್ಲಿ ಅಸಮಾಧಾನವನ್ನೇನೂ ಉಂಟು ಮಾಡುವುದಿಲ್ಲ. ತನ್ನದು ನೈಜ 48 ಮೆ.ಪಿ. ಕ್ಯಾಮರಾ ಎಂದು ಸ್ಯಾಮ್‍ ಸಂಗ್‍ ಹೇಳಿಕೊಳ್ಳುತ್ತದೆ. ಹಾಗೆಯೇ ಇದರಲ್ಲೂ ಕ್ಯಾಮರಾ ಅದರ ದರಪಟ್ಟಿಯಲ್ಲಿ ಉತ್ತಮವಾದ ಫಲಿತಾಂಶವನ್ನೇ ನೀಡುತ್ತದೆ. 13 ಮೆ.ಪಿ.ನ ಮುಂಬದಿ ಸೆಲ್ಫಿ ಕ್ಯಾಮರಾ ಕೂಡ ಪರವಾಗಿಲ್ಲ.

ಬ್ಯಾಟರಿ: 5000 ಎಂಎಎಚ್‍ ನ ಭರ್ಜರಿ ಬ್ಯಾಟರಿ ಇದೆ. ಟೈಪ್‍ ಸಿ ಟೈಪ್‍ 15 ವ್ಯಾಟ್ಸ್ ವೇಗದ ಚಾರ್ಜರ್ ನೀಡಲಾಗಿದೆ. ಚಾರ್ಜರ್ ವಿಷಯದಲ್ಲಿ ಸ್ಯಾಮ್‍ ಸಂಗ್‍ ಕೊಂಚ ಉದಾರತೆ ತೋರಬೇಕಿದೆ. ಅದರ ಪ್ರತಿಸ್ಪರ್ಧಿ ಕಂಪೆನಿಗಳು ಈ ದರಕ್ಕೆ 33 ವ್ಯಾಟ್ಸ್ ವೇಗದ ಚಾರ್ಜರ್ ನೀಡುತ್ತಿವೆ. 15 ವ್ಯಾಟ್ಸ್ ಚಾರ್ಜರ್ 5000 ಎಂಎಎಚ್‍ ಬ್ಯಾಟರಿಯನ್ನು ಚಾರ್ಜ್‍ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಒಮ್ಮೆ ಪೂರ್ತಿ ಚಾರ್ಜ್‍ ಮಾಡಿದರೆ ಸಾಧಾರಣ ಬಳಕೆಗೆ ಒಂದೂವರೆಯಿಂದ ಎರಡು ದಿನ ಬ್ಯಾಟರಿ ಬಾಳಿಕೆ ಬರುತ್ತದೆ.

ಒಟ್ಟಾರೆ ಈ ಫೋನು ಸ್ಯಾಮ್‍ ಸಂಗ್‍ ಪ್ರಿಯರಿಗೆ ದರಕ್ಕೆ ತಕ್ಕ ಮೌಲ್ಯ ನೀಡುತ್ತದೆ. ಅದರ ಪ್ರೀಮಿಯಂ ವಿನ್ಯಾಸ, 5ಜಿ ಸವಲತ್ತು, ಕ್ಯಾಮರಾ, ಬ್ಯಾಟರಿ ವಿಭಾಗಗಳ ಕಾರ್ಯ ನಿರ್ವಹಣೆ ತೃಪ್ತಿದಾಯಕವಾಗಿದೆ. 33 ವ್ಯಾಟ್ಸ್ ವೇಗದ ಚಾರ್ಜರ್, ಮೊಬೈಲ್‍ ಜೊತೆಗೆ ಇತರ ಕಂಪೆನಿಗಳಂತೆ ಸಿಲಿಕಾನ್‍ ಕೇಸ್‍, ಪರದೆ ರಕ್ಷಕ ಗಾರ್ಡ್‍ ಅನ್ನು ಸ್ಯಾಮ್‍ ಸಂಗ್‍ ನೀಡಬೇಕಿತ್ತು.

-ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next