ಸ್ಯಾಮ್ ಸಂಗ್ ಕಂಪೆನಿ ಎ ಸರಣಿಯಲ್ಲಿ ಐದು ಮಾಡೆಲ್‍ಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲೊಂದು ಗೆಲಾಕ್ಸಿ ಎ53 5ಜಿ. ಈ ಫೋನಿನ ವಿಶೇಷಣಗಳು, ಕಾರ್ಯಾಚರಣೆ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ.
ಈ ಫೋನು ಎರಡು ಆವೃತ್ತಿಗಳನ್ನು ಹೊಂದಿದೆ. 128 ಜಿಬಿ ಆಂತರಿಕ ಸಂಗ್ರಹ ಹಾಗೂ 6 ಜಿಬಿ ರ್ಯಾಮ್ ಹಾಗೂ 128 ಜಿಬಿ ಸಂಗ್ರಹ ಹಾಗೂ 8 ಜಿಬಿ ರ್ಯಾಮ್. ದರ ತಲಾ 31,999 ರೂ. ಹಾಗೂ 32,999 ರೂ. ಇದೆ.
ಮೊದಲಿಗೆ ಸಂಕ್ಷಿಪ್ತವಾಗಿ ಇದರ ಸ್ಪೆಸಿಫಿಕೇಷನ್ ಇಂತಿದೆ: 64 ಮೆ.ಪಿ. ಹಿಂಬದಿ ಕ್ಯಾಮರಾ ಹಾಗೂ 32 ಸೆಲ್ಫೀ ಕ್ಯಾಮರಾ, ಎಕ್ಸಿನಾಸ್ 1280 ಪ್ರೊಸೆಸರ್ ಒಳಗೊಂಡಿದೆ.6.5 ಇಂಚಿನ ಎಫ್‍ಎಚ್ ಡಿ ಪ್ಲಸ್, 120 ಹರ್ಟ್ಜ್ ರಿಫ್ರೆಶ್ ರೇಟ್ ನ ಅಮೋಲೆಡ್ ಪರದೆ ಇದೆ. ಐಪಿ67 ರೇಟಿಂಗ್ ಸ್ಪಿಲ್, ಸ್ಪ್ಲಾಶ್ ಮತ್ತು ಧೂಳು ನಿರೋಧಕವಾಗಿದೆ.
ವಿನ್ಯಾಸ: ಇದರ ವಿನ್ಯಾಸ ಹೆಚ್ಚು ಕಡಿಮೆ ಇದರ ‘ಅಣ್ಣ’ ಗೆಲಾಕ್ಸಿ ಎ73 ಮಾದರಿಯಲ್ಲಿದೆ. ಅಲ್ಯುಮಿನಿಯಂ ಫ್ರೇಂ ಹೊಂದಿದ್ದು, ಹಿಂಬದಿಯ ಕವಚ ಪ್ಲಾಸ್ಟಿಕ್ ಆಗಿದೆ. ಪರದೆ ಮಧ್ಯದಲ್ಲಿ ಪಂಚ್ ಹೋಲ್ ಕ್ಯಾಮರಾ ಇದ್ದು, ಪರದೆ ಹೆಚ್ಚು ಆವರಿಸಿ, ಸಣ್ಣ ಗೆರೆ ಎಳೆದಂತೆ ಪರದೆಯ ಅಂಚು (ಬೆಜೆಲ್ಸ್) ಗಳಿವೆ. ಐಪಿ 67 ರೇಟಿಂಗ್ ಇದ್ದು, ಇದು ನೀರು ಮತ್ತು ಧೂಳು ನಿರೋಧಕವಾಗಿದೆ. ಪರದೆಯ ರಕ್ಷಣೆಗೆ ಗೊರಿಲ್ಲಾ ಗಾಜು 5 ರ ರಕ್ಷಣೆ ಇದೆ.
ಈ ಮೊಬೈಲ್ ಅನ್ನು ಕೈಯಲ್ಲಿ ಹಿಡಿದಾಗ ಬಹಳ ಹಗುರ ಎನಿಸುತ್ತದೆ. 189 ಗ್ರಾಂ ತೂಕವಿದೆ. 8.1 ಮಿಲಿಮೀಟರ್ ನಷ್ಟು ಮಂದವಿದೆ. ಮೊಬೈಲಿನ ಮೂಲೆಗಳು ಹೆಚ್ಚು ಕರ್ವ್ ಆಗಿಲ್ಲ. ನೋಡಲು ಆಕರ್ಷಕ ಎನಿಸುತ್ತದೆ. ಮೊಬೈಲಿನ ಹಿಂಬದಿಯ ಎಡಮೂಲೆಯಲ್ಲಿ ನಾಲ್ಕು ಲೆನ್ಸಿನ ಕ್ಯಾಮರಾವನ್ನು ಅಳವಡಿಸಲಾಗಿದೆ. ಇದರಲ್ಲಿ ಮೂರು ಲೆನ್ಸ್ ಗಳನ್ನು ದೊಡ್ಡದಾಗಿ, ಇನ್ನೊಂದು ಮ್ಯಾಕ್ರೋ ಲೆನ್ಸ್ ಮತ್ತು ಫ್ಲಾಷ್ ಅನ್ನು ಪಕ್ಕದಲ್ಲಿ ಸಣ್ಣದಾಗಿ ವಿನ್ಯಾಸ ಮಾಡಲಾಗಿದೆ. ಕ್ಯಾಮರಾ ಹೆಚ್ಚು ಉಬ್ಬು ಬರದಂತೆ ಡಿಸೈನ್ ಮಾಡಲಾಗಿದೆ. ಎಡಭಾಗದಲ್ಲಿ ಯಾವುದೇ ಬಟನ್ ಇಲ್ಲ. ಬಲಭಾಗದಲ್ಲಿ ಧ್ವನಿ ಹೆಚ್ಚು ಕಡಿಮೆ ಮಾಡುವ ಬಟನ್ ಹಾಗೂ ಆನ್ ಆಫ್ ಬಟನ್ ಇದೆ. ಕೆಳಭಾಗದಲ್ಲಿ ಬ್ಯಾಟರಿ ಚಾರ್ಜ್ ಮಾಡುವ ಯುಎಸ್‍ಬಿ ಟೈಪ್ ಸಿ ಪೋರ್ಟ್ ಹಾಗೂ ಸಿಮ್ ಟ್ರೇ, ಸ್ಪೀಕರ್ ಕಿಂಡಿಗಳಿವೆ. ಒಟ್ಟಾರೆ ಫೋನಿನ ಬ್ಯುಲ್ಡ್ ಕ್ವಾಲಿಟಿ ಚೆನ್ನಾಗಿದೆ.
ಪರದೆ: ಇದರಲ್ಲಿ ಎಫ್‍ಎಚ್‍ಡಿ ಪ್ಲಸ್ ಸೂಪರ್ ಅಮೋಲೆಡ್, 6.5 ಇಂಚಿನ ಪರದೆ ಇದೆ. ಪರದೆಯ ರಿಫ್ರೆಶ್ ದರ 120 ಹರ್ಟ್ಜ್ ಇದೆ. ಅಮೋಲೆಡ್ ಪರದೆಯ ಕಾರಣ, ಚಿತ್ರಗಳು, ವಿಡಿಯೋ ಅಥವಾ ಮೊಬೈಲಿನ ಇಂಟರ್ ಫೇಸ್ ಚೆನ್ನಾಗಿ ಮೂಡಿಬರುತ್ತವೆ. ರಿಫ್ರೆಶ್‍ರೇಟ್ ಕಾರಣದಿಂದ ಪರದೆಯನ್ನು ವೇಗವಾಗಿ ಸ್ಕ್ರೋಲ್ ಮಾಡಿದಾಗಲೂ ಅಡೆತಡೆ ಕಾಣುವುದಿಲ್ಲ. ಮೃದುವಾಗಿ ಚಲಿಸುತ್ತದೆ.
ಕಾರ್ಯಾಚರಣೆ: ಈ ಮೊಬೈಲ್‍ನಲ್ಲಿರುವುದು ಎಕ್ಸಿನಾಸ್ 1280 ಪ್ರೊಸೆಸರ್. ಗೆಲಾಕ್ಸಿ ಎ 73ಯಲ್ಲಿ ಸ್ನಾಪ್‍ಡ್ರಾಗನ್ 778 ಪ್ರೊಸೆಸರ್ ನೀಡಲಾಗಿತ್ತು. ಆದರೆ ಇದರಲ್ಲಿ ಸ್ಯಾಮ್ ಸಂಗ್‍ನ ಸ್ವಂತ ತಯಾರಿಕೆಯಾದ ಎಕ್ಸಿನಾಸ್ ಪ್ರೊಸೆಸರ್ ಬಳಸಲಾಗಿದೆ. ಸ್ನಾಪ್‍ಡ್ರಾಗನ್ ಪ್ರಿಯರಿಗೆ ಇದು ಕೊಂಚ ನಿರಾಶೆ ಮೂಡಿಸುತ್ತದೆ. ಆದರೂ ಎಕ್ಸಿನಾಸ್ ಚೆನ್ನಾಗಿಯೇ ಕಾರ್ಯಾಚರಿಸುತ್ತದೆ. 5ಜಿ ಸೌಲಭ್ಯ ಹೊಂದಿದ್ದು, ವೇಗವಾಗಿದೆ. ಇದರಲ್ಲಿ ರ್ಯಾಮ್ ಅನ್ನು ಹೆಚ್ಚಿಸಿಕೊಳ್ಳುವ ಸೌಲಭ್ಯವನ್ನೂ ನೀಡಲಾಗಿದೆ.
ಆಂಡ್ರಾಯ್ಡ್ 12 ಓಎಸ್ ಇದ್ದು, ಇದಕ್ಕೆ ಸ್ಯಾಮ್ ಸಂಗ್ ನ ಒನ್ ಯೂಐ 4.1 ಸ್ಕಿನ್ ಇದೆ. ಎಂದಿನಂತೆ ಹಿಂದಿನ ಸ್ಯಾಮ್ ಸಂಗ್ ಫೋನ್ ಗಳ ಇಂಟರ್ ಫೇಸ್ ಕಾಣಬರುತ್ತದೆ.
ಉತ್ತಮ ಕ್ಯಾಮರಾ: ಇದರಲ್ಲಿ 64 ಮೆ.ಪಿ. ಮುಖ್ಯ ಕ್ಯಾಮರಾ ಇದೆ. 12 ಮೆಪಿ ಅಲ್ಟ್ರಾ ವೈಡ್, 5 ಮೆ.ಪಿ. ಡೆಪ್ತ್, 5 ಮೆ.ಪಿ. ಮ್ಯಾಕ್ರೋ ಕ್ಯಾಮರಾ ಇದೆ. ಮುಂಬದಿ ಕ್ಯಾಮರಾ 32 ಮೆ.ಪಿ.ಇದೆ.
ಕ್ಯಾಮರಾದಲ್ಲಿ ಮೂಡಿಬಂದ ಫೋಟೋಗಳ ಗುಣಮಟ್ಟ ಚೆನ್ನಾಗಿದೆ. ಹೊರಾಂಗಣ ಮಾತ್ರವಲ್ಲ, ಒಳಾಂಗಣದಲ್ಲೂ ಫೋಟೋಗಳು ಮಸುಕಿಲ್ಲದೇ ಚೆನ್ನಾಗಿ ಮೂಡಿಬಂದವು. ಹಾಗಾಗಿ ಲೋ ಲೈಟ್ ಫೋಟೋಗ್ರಫಿಗೂ ಇದು ಸೂಕ್ತವಾಗಿದೆ. ಇನ್ನು ಸೆಲ್ಫೀ ಕ್ಯಾಮರಾ ಬಗ್ಗೆ ಹೇಳುವುದಾದರೆ ಹೆಚ್ಚು ಕ್ಲಿಯರ್ ಆದ, ಹಿಂಬದಿಯ ಕ್ಯಾಮರಾದಷ್ಟೇ ಸಶಕ್ತವಾದ ಇಮೇಜ್ ಗಳನ್ನ ನೀಡಿತು. ನಿಜಕ್ಕೂ ಸೆಲ್ಫೀ ಕ್ಯಾಮರಾದ ಗುಣಮಟ್ಟ ಉತ್ತಮವಾಗಿದೆ.
ವಿಡಿಯೋ ಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಇದೆ. ಹೀಗಾಗಿ ವಿಡಿಯೋಗಳು ಹೆಚ್ಚು ಅಲುಗಾಟ ತೋರದೇ ಸ್ಟಡಿಯಾಗಿ ಮೂಡಿಬರುತ್ತವೆ. ಎಚ್‍ಡಿಆರ್ ವಿಡಿಯೋ ಸೌಲಭ್ಯ ಸಹ ಒಳಗೊಂಡಿದೆ.
ಬ್ಯಾಟರಿ: ಇದಕ್ಕೆ 5000 ಎಂಎಎಚ್ ಬ್ಯಾಟರಿ ಇದೆ. ಇದಕ್ಕೆ 25 ವ್ಯಾಟ್ಸ್ ಚಾರ್ಜಿಂಗ್ ಸೌಲಭ್ಯ ಇದೆ. ಬಾಕ್ಸ್ ನೊಡನೆ ಚಾರ್ಜರ್ ಇರುವುದಿಲ್ಲ. ಹಾಗಾಗಿ ನಿಮ್ಮಲ್ಲಿರುವ ಹಳೆ ಚಾರ್ಜರ್ ಬಳಸಬೇಕು ಅಥವಾ ಪ್ರತ್ಯೇಕ ಚಾರ್ಜರ್ ಖರೀದಿಸಬೇಕು. ಈ ದರಕ್ಕೆ ಪ್ರತಿಸ್ಪರ್ಧಿ ಕಂಪೆನಿಗಳು 65 ವ್ಯಾಟ್ಸ್ ಹೆಚ್ಚು ವೇಗದ ಚಾರ್ಜಿಂಗ್ ಸೌಲಭ್ಯ ನೀಡುವುದಲ್ಲದೇ, ಚಾರ್ಜರ್ ಅನ್ನೂ ನೀಡುತ್ತವೆ. ಸ್ಯಾಮ್ ಸಂಗ್ ಇನ್ನೂ 25 ವ್ಯಾಟ್ಸ್ ಚಾರ್ಜಿಂಗ್ ವೇಗದಲ್ಲೇ ಇರುವುದು ಆಶ್ಚರ್ಯದ ವಿಷಯ. ಈ ವಿಭಾಗದಲ್ಲಿ ಸ್ಯಾಮ್ ಸಂಗ್ ಸುಧಾರಣೆ ಮಾಡಬೇಕಿದೆ.
ಕೆ.ಎಸ್. ಬನಶಂಕರ ಆರಾಧ್ಯ