Advertisement

ಸಂಸಾರ ಸಾಗರ ಅನುಮಾನ ಆಗರ

06:07 AM Jan 05, 2019 | |

ಎದುರು ಮನೆಗೆ ಹೊಸದಾಗಿ ಮದುವೆಯಾಗಿ ಬಂದ ಹುಡುಗಿ ಒಂದು ಕಡೆಯಾದರೆ, ಆಗಷ್ಟೇ ಮದುವೆಯಾಗಿ ಎದುರು ಮನೆಯಲ್ಲಿ ವಾಸವಾಗಿರುವ ಹುಡುಗ ಇನ್ನೊಂದು ಕಡೆ. ಈ ಇಬ್ಬರದು ಒಂದೊಂದು ಸಮಸ್ಯೆ. ಆಕೆಯ ಗಂಡನಿಗೆ ಹಳ್ಳಿ ಹುಡುಗಿ ಎಂಬ ತಾತ್ಸಾರವಾದರೆ, ಈತನ ಪತ್ನಿಗೆ ಗಂಡ ಏನೂ ಕೆಲಸ ಮಾಡದ ಸೋಮಾರಿ ಎಂಬ ಸಿಟ್ಟು. ಇಬ್ಬರದ ಸಮಾನ ಮನಸ್ಥಿತಿ. ಹೀಗೆ ಗಂಡ ಹಾಗೂ ಪತ್ನಿಯ ಬೇಸರಲ್ಲಿರುವ ಸಮಾನ ಮನಸ್ಕರು ಒಂದು ಪ್ಲ್ರಾನ್‌ ಮಾಡುತ್ತಾರೆ.

Advertisement

ಅವರ ನಡುವಿನ ಸಂಬಂಧ, ಉದ್ದೇಶ, ಆಶಯ ಎಲ್ಲವೂ ಒಳ್ಳೆಯದೇ. ಆದರೆ ಅದು ನೋಡುಗರಿಗೆ ಕೊಡುವ ಅರ್ಥ ಮಾತ್ರ ಬೇರೆ. ಇಂತಹ ಒಂದು ಅಂಶವನ್ನಿಟ್ಟುಕೊಂಡು “ಫಾರ್ಚುನರ್‌’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಇಡೀ ಸಿನಿಮಾ ಎರಡು ಸಂಸಾರಗಳ ಸುತ್ತ ಸುತ್ತುತ್ತವೆ ಮತ್ತು ಕೆಲವೇ ಕೆಲವು ಲೊಕೇಶನ್‌ಗಳಿಗೆ ಸೀಮಿತವಾಗಿದೆ. ಪ್ರೀತಿ ಮತ್ತು ನಂಬಿಕೆ ನಡುವೆ ಒಂದು ಸಣ್ಣ ಗೆರೆ ಇರುತ್ತದೆ. ಆ ಗೆರೆ ಒಂಚೂರು ದಾಟಿದರೂ ಅದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.

ಈ ಸಿನಿಮಾದಲ್ಲೂ ಹೈಲೈಟ್‌ ಆಗಿರುವುದು ಅದೇ ಅಂಶ. ಕಥೆ ವಿಚಾರದಲ್ಲಿ ನಿರ್ದೇಶಕರು ಒಂಚೂರು ಭಿನ್ನವಾಗಿ ಯೋಚಿಸಿದ್ದಾರೆ. ಸೌಹಾರ್ದಯುತವಾಗಿ, ಒಳ್ಳೆಯ ಭಾವನೆಯೊಂದಿಗೆ ನೆರೆಹೊರೆಯವರು ಒಟ್ಟಾಗಿ ಬಿಝಿನೆಸ್‌ ಮಾಡಿದರೆ ಅದರಿಂದ ಒಳಿತಾಗುತ್ತದೆ ಎಂಬುದು ನಿರ್ದೇಶಕರ ಯೋಚನೆ. ಆದರೆ, ವಾಸ್ತವವಾಗಿ ಇವತ್ತಿನ ಸಮಾಜದಲ್ಲಿ ಈ ಅಂಶವನ್ನು ಅರಗಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇರುವುದರಿಂದ ಕೇವಲ ಒಂದು ಸಿನಿಮಾ ಕಥೆಯಾಗಿಯಷ್ಟೇ ನೋಡಬೇಕಿದೆ.

ಮೊದಲೇ ಹೇಳಿದಂತೆ ಕಥೆಯ ಉದ್ದೇಶ ಚೆನ್ನಾಗಿದೆ. ಅದನ್ನು ನಿರೂಪಿಸಿದ ರೀತಿಯೂ ತಕ್ಕಮಟ್ಟಿಗೆ ಇಷ್ಟವಾಗುತ್ತದೆ. ಆದರೆ, ಕಥೆ ಮಾತ್ರ ಒಂದು ಪರಿಧಿ ಬಿಟ್ಟು ಮುಂದೆ ಸಾಗುವುದಿಲ್ಲ. ಹಾಗಾಗಿ, ಅದೇ ಗೊಂದಲ, ಮನಸ್ತಾಪ, ಮುನಿಸು ಪದೇ ಪದೇ ಎದುರಾಗುತ್ತದೆ. ಅದರ ಬದಲು ಇದೇ ಕಥೆಯನ್ನು ಇನ್ನೊಂದಿಷ್ಟು ವಿಸ್ತರಿಸಿದ್ದರೆ ಒಂದೊಳ್ಳೆಯ ಫ್ಯಾಮಿಲಿ ಡ್ರಾಮಾ ಆಗುವ ಲಕ್ಷಣ ಈ ಚಿತ್ರಕ್ಕಿತ್ತು. ಸಿನಿಮಾದ ಒಂದಷ್ಟು ತಪ್ಪುಗಳನ್ನು ಬದಿಗಿಟ್ಟು ಮಾತನಾಡುವುದಾದರೆ ನಿರ್ದೇಶಕರು ಚಿತ್ರದಲ್ಲಿ ಅನಾವಶ್ಯಕ ಅಂಶಗಳನ್ನು ಸೇರಿಸಿಲ್ಲ.

ಹೀರೋ ಬಿಲ್ಡಪ್‌ಗೊಂದು ಫೈಟ್‌, ಸುಖಾಸುಮ್ಮನೆ ಕಾಮಿಡಿ ಅಥವಾ ಕಿರಿಕಿರಿ ತರುವ ಪಾತ್ರಗಳು … ಈ ಅಂಶಗಳಿಂದ “ಫಾರ್ಚುನರ್‌’ ಮುಕ್ತವಾಗಿದೆ. ಸರಳವಾದ ನಿರೂಪಣೆ ಮೂಲಕ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಆದರೆ, ಚಿತ್ರದ ಕ್ಲೈಮ್ಯಾಕ್ಸ್‌ ಅನ್ನು ಜನರಿಗೆ ಬಿಟ್ಟಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಊಹಿಸಿಕೊಳ್ಳೋದನ್ನು ಪ್ರೇಕ್ಷಕರಿಗೆ ಬಿಟ್ಟಿದ್ದಾರೆ. ನಾಯಕ ದಿಗಂತ್‌ಗೆ ಈ ತರಹದ ಪಾತ್ರ ಹೊಸದೇನಲ್ಲ. ಪ್ರೀತಿಸಿದ ಹುಡುಗಿಯಿಂದ ಬೈಯಿಸಿಕೊಳ್ಳೋದು, ಹುಡುಗಿ ಹಿಂದೆ ಸುತ್ತೋದು ಯಾವುದೂ ಹೊಸದಲ್ಲ.

Advertisement

ಈ ಹಿಂದಿನ ಕೆಲವು ಸಿನಿಮಾಗಳಲ್ಲೂ ಮಾಡಿದ್ದಾರೆ. ಆದರೆ, ಇಲ್ಲೊಂದಿಷ್ಟು ಭಾವನಾತ್ಮಕ ಸನ್ನಿವೇಶಗಳಿಗೆ ಜಾಗ ಇದೆ ಮತ್ತು ದಿಗಂತ್‌ ಚೆನ್ನಾಗಿ ನಟಿಸಿದ್ದಾರೆ. ಉಳಿದಂತೆ ನಾಯಕಿ ಸೋನು ಗೌಡ ಇಲ್ಲಿ ಸಿಡುಕಿನ ಸಿಂಗಾರಿ. ಚಿತ್ರದ ನಾಯಕನ ಮಾತಲ್ಲೇ ಹೇಳುವುದಾದರೆ ದೌಲತ್‌ ರಾಣಿ. ಕೆಲವು ಸೂಕ್ಷ್ಮ ಸನ್ನಿವೇಶಗಳಲ್ಲಿ ಸೋನು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಉಳಿದಂತೆ ಸ್ವಾತಿ, ರಾಜೇಶ್‌ ನಟರಂಗ, ಬಲರಾಜ್‌ವಾಡಿ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಾಡು ಹಾಗೂ ಛಾಯಾಗ್ರಹಣ ಹೆಚ್ಚೇನು ಗಮನ ಸೆಳೆಯೋದಿಲ್ಲ.

ಚಿತ್ರ: ಫಾರ್ಚುನರ್‌
ನಿರ್ಮಾಣ: ರಾಜೇಶ್‌ ಆನಂದ್‌, ಸುರೇಂದ್ರ ವಿಮಲ್‌ ಗೊಲೇಚ 
ನಿರ್ದೇಶನ: ಮಂಜುನಾಥ್‌ ಜೆ ಅನಿವಾರ್ಯ
ತಾರಾಗಣ: ದಿಗಂತ್‌, ಸೋನು ಗೌಡ, ಸ್ವಾತಿ, ಬಲರಾಜುವಾಡಿ, ರಾಜೇಶ್‌ ನಟರಂಗ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next