Advertisement
ವಿಶೇಷ ವರದಿ–ಉಡುಪಿ: ಮನೆಬಾಗಿಲಿಗೆ ಬಂದು ಕಾಗದ ಪತ್ರ, ಪಾರ್ಸೆಲ್, ಮನಿ ಆರ್ಡರ್ ಹಣ ತಂದು ನೀಡುತ್ತಿದ್ದ ಅಂಚೆ ಇಲಾಖೆ ಈಗ ಆಧಾರ್ ಕಾರ್ಡ್ ಮಾಡಿಕೊಡುವ ಹೊಣೆಯನ್ನೂ ಹೊತ್ತಿದೆ.
ವಾರದಲ್ಲಿ ಒತ್ತಡ ಕಡಿಮೆಯಿರುವ ದಿನ ಆಯ್ಕೆ ಮಾಡಿಕೊಂಡು ಕ್ಯಾಂಪ್‌ಗ್ಳನ್ನು ನಡೆಸಲಾಗುತ್ತಿದೆ. ಇದಕ್ಕೆ ಪ್ರತ್ಯೇಕ ಸಿಬಂದಿಯಿಲ್ಲ. ದಿನವೊಂದಕ್ಕೆ 100ಕ್ಕೂ ಅಧಿಕ ಮಂದಿಗೆ ಸೇವೆ ಒದಗಿಸಲಾಗಿದೆ. 15ರಷ್ಟು ಸಿಬಂದಿ ಸಮಯ ಹೊಂದಿಸಿಕೊಂಡು ವಾರದಲ್ಲಿ ಎರಡು ದಿನ ಸೇವೆ ಒದಗಿಸುತ್ತಿದ್ದಾರೆ.
Related Articles
ಕೇಂದ್ರ ಸರಕಾರ ಅಂಚೆ ಇಲಾಖೆಯನ್ನು ಬಲಪಡಿಸುವ ಉದ್ದೇಶದಿಂದ ನಾನಾ ಹೊಸ ಯೋಜನೆಗಳನ್ನು ಇಲಾಖೆ ಮೂಲಕ ಆರಂಭಿಸಿತ್ತು ಪೋಸ್ಟಲ್ ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ ಕೇಂದ್ರಗಳು ಅಂಚೆ ಇಲಾಖೆಯ ಮಹತ್ವದ ಯೋಜನೆಗಳು.
Advertisement
ಆಧಾರ್‌ಗೆ ಸಂಬಂಧಿಸಿ ಸೇವೆ ಉತ್ತಮವಾಗಿ ನೀಡಲಾಗುತ್ತಿದೆ. ಮನೆ ಬಾಗಿಲಲ್ಲೇ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿರುವುದರಿಂದ ಜನ ಕಚೇರಿಗಳಿಗೆ ಅಲೆದಾಡುವುದೂ ತಪ್ಪುತ್ತಿದೆ. ಸರಕಾರದ ಎಲ್ಲ ಸ್ಕೀಮ್‌ಗಳಿಗೆ ಆಧಾರ್ ಮುಖ್ಯವಾದ್ದರಿಂದ ಆಧಾರ್ ಸೇವೆಗಾಗಿ ಜನ ದಾಖಲೆ ಪತ್ರಗಳೊಂದಿಗೆ ಕ್ಯಾಂಪ್ ಬಳಿ ಸೇರುತ್ತಿದ್ದಾರೆ. ಕುಂದಾಪುರದಲ್ಲಿ ನಡೆದ ಕ್ಯಾಂಪ್‌ನಲ್ಲಿ 3000ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆಯಲು ಬಂದಿದ್ದರು.
ವಿವಿಧ ಯೋಜನೆಯಡಿ ಅಂಚೆ ಕಚೇರಿಯಲ್ಲಿ ಖಾತೆ ತೆರೆದವರಿಗೆ ಕಚೇರಿಗೆ ಬಂದು ಹಣ ಪಾವತಿಗೆ ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಮನೆಯಲ್ಲೇ ಕುಳಿತು ಹಣ ಪಾವತಿಗೆ ಯೋಜನೆಗಳನ್ನು ಕೂಡ ಇಲಾಖೆ ರೂಪಿಸಿಕೊಂಡು ಈ ಬಗ್ಗೆಯೂ ಕ್ಯಾಂಪ್‌ಗ್ಳಲ್ಲಿ ಮಾಹಿತಿ ನೀಡುತ್ತಿದೆ.
ಹಿರಿಯಡ್ಕ ಅಂಚೆ ಕಚೇರಿ ಉದ್ಯೋಗಿ ಜೀವನ್ ಅವರು ಒಂದೇ ದಿನ 5 ಶಿಬಿರದಲ್ಲಿ 150ಕ್ಕೂ ಅಧಿಕ ಸೇವೆಗಳನ್ನು ನೀಡಿ ದಾಖಲೆ ನಿರ್ಮಿಸಿದ್ದಾರೆ.
ಆಧಾರ್ ಕಾರ್ಡ್ ಎಲ್ಲ ವಿಷಯಗಳಿಗೂ ಮಹತ್ವದ ದಾಖಲೆಯಾಗಿ ಪರಿಗಣಿಸಲ್ಪಡುತ್ತಿದೆ. ಆಧಾರ್‌ಗೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸುವುದು ಜನಸಾಮಾನ್ಯರಿಗೆ ಒಂದು ಸವಾಲಿನ ಕೆಲಸವೇ ಸರಿ. ಈಗ ಅಂಚೆ ಇಲಾಖೆ ಆ ಕೆಲಸವನ್ನು ಮಾಡಿಕೊಡುವುದರಿಂದ ಜನರಿಗೆ ಹೆಚ್ಚು ಸಹಾಯವಾಗುತ್ತದೆ.
ಏನೆಲ್ಲ ಸೇವೆ?ಕ್ಯಾಂಪ್‌ಗ್ಳಲ್ಲಿ ಮುಖ್ಯವಾಗಿ ಸರಕಾರದ ಯೋಜನೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಆಧಾರ್ ಹೊಸ ನೋಂದಾವಣೆ, ವಿಳಾಸ ಬದಲಾವಣೆ, ಹೆಸರು ಬದಲಾವಣೆ, ಬಯೋಮೆಟ್ರಿಕ್ ಬದಲಾವಣೆ, ಅಪ್‌ಡೇಟ್, ಮೊಬೈಲ್ ನಂಬರ್ ತಿದ್ದುಪಡಿಗೆ ಸಂಬಂಧಿಸಿ ಮಾಹಿತಿ ಹಾಗೂ ಕೆಲಸ ಮಾಡಿಕೊಡಲಾಗುತ್ತಿದೆ. ಜನರ ಸಮಸ್ಯೆಗೆ ಸ್ಪಂದನೆ
ಅಂಚೆ ಇಲಾಖೆ ಆಧಾರ್ ಸೇವೆಯನ್ನು ಅತ್ಯುತ್ತಮವಾಗಿ ನಿಭಾಯಿಸುತ್ತಿದೆ, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಸಲುವಾಗಿ ವಿಶೇಷ ಶಿಬಿರ ಆಯೋಜಿಸುತ್ತಿದ್ದೇವೆ. ಅನೇಕ ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ..
– ಸುಧಾಕರ ಜಿ. ದೇವಾಡಿಗ ,
ಅಧೀಕ್ಷಕರು, ಅಂಚೆ ಇಲಾಖೆ ಉಡುಪಿ ಜಿಲ್ಲೆ ಅಭಿನಂದನಾರ್ಹ
ಅಂಚೆ ಇಲಾಖೆ ಸಿಬಂದಿ ಕಾರ್ಯ ಮೆಚ್ಚುವಂತಿದೆ, ಜನರ ಬಳಿಗೆ ಬಂದು ಆಧಾರ್ ಸೇವೆ ಹಾಗೂ ಯೋಜನೆಗಳ ಮಾಹಿತಿ ಪರಿಚಯಿಸುತ್ತಿರುವುದು ಅಭಿನಂದನಾರ್ಹ. ಇದರಿಂದ ಜನ ಸಾಮಾನ್ಯರಿಗೆ ಹಲವು ಉಪಯೋಗಗಳು ಲಭ್ಯವಾಗುತ್ತವೆ.
– ಚಂದ್ರಶೇಖರ ಬೀಜಾಡಿ, ಶಿಕ್ಷಕ ಸಮಸ್ಯೆ ಪರಿಹಾರ
ಕ್ಯಾಂಪ್‌ನಲ್ಲಿ ಭಾಗವಹಿಸಿದ್ದೆ. ಆಧಾರ್‌ಗೆ ಸಂಬಂಧಿಸಿ ಸಮಸ್ಯೆಯಿತ್ತು. ಅದಕ್ಕೆ ಸ್ಥಳದಲ್ಲೇ ಪರಿಹಾರ ದೊರಕಿತು.
– ಸದಾಶಿವ ಮೊಗವೀರ,
ಗೋಪಾಡಿ