Advertisement

ಸ್ವಂತ ಖರ್ಚಿನಲ್ಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾದರಿ ಪರೀಕ್ಷೆ

08:36 AM Mar 01, 2019 | Team Udayavani |

ಮಾನ್ವಿ: ಕಾನೂನು ಸುವ್ಯವಸ್ಥೆ, ಅಪರಾಧ ಪ್ರಕರಣಗಳ ತನಿಖೆ ಇಂತಹ ಕಾರ್ಯ ಒತ್ತಡದ ಮಧ್ಯೆಯೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ, ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಭಯ ನಿವಾರಿಸಲು ಸ್ವಂತ ಖರ್ಚಿನಲ್ಲೇ ಮಾದರಿ ಪರೀಕ್ಷೆ ನಡೆಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ.

Advertisement

ಸ್ಥಳೀಯ ಠಾಣೆ ಸಿಪಿಐ ಜಿ. ಚಂದ್ರಶೇಖರ ನಾಯಕ ಅವರು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಪ್ರಶ್ನೆಪತ್ರಿಕೆ ಹಾಗೂ ಉತ್ತರ
ಪತ್ರಿಕೆಗಳನ್ನು ಸಿದ್ಧಪಡಿಸಿ ಮಾದರಿ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ.

ತಾಲೂಕಿನಾದ್ಯಂತ ಇರುವ 40 ಸರ್ಕಾರಿ ಶಾಲೆ, ಒಂದು ಅನುದಾನಿತ ಶಾಲೆ ಸೇರಿ 41 ಪ್ರೌಢಶಾಲೆಗಳ ಒಟ್ಟು 3008 ವಿದ್ಯಾರ್ಥಿಗಳಿಗೆ ಮಾದರಿ ಪರೀಕ್ಷೆ ನಡೆಸಲಾಗಿದೆ. ಸಿಪಿಐ ಚಂದ್ರಶೇಖರ ನಾಯಕರು ಶಿಸ್ತುಬದ್ಧವಾಗಿ ಶಿಕ್ಷಣ ಇಲಾಖೆ ನಡೆಸುವ ಕ್ರಮಾನುಸಾರವಾಗಿಯೇ ಪ್ರಶ್ನೆಪತ್ರಿಕೆ, ಉತ್ತರ
ಪತ್ರಿಕೆ ತಯಾರಿಸಿ ಒಂದು ಮಾದರಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಲ್ಲಿನ ಭಯ ನಿವಾರಿಸಿದ್ದಾರೆ.

ಇಲಾಖೆ ಆದೇಶ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸಿದ್ದರಿಂದ ವಿವಿಧ ಪ್ರೌಢಶಾಲೆಗಳಿಗೆ ತೆರಳಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗು ಶಿಕ್ಷಕರೊಂದಿಗೆ
ಸಭೆ ನಡೆಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ ಮೇಲಾಧಿಕಾರಿಗಳು ಆದೇಶ ನೀಡಿದ್ದರು. ಕೇವಲ ಸಭೆ, ಭಾಷಣಗಳಿಂದ ಫಲಿತಾಂಶ ಹೆಚ್ಚಿಸಲು ಸಾಧ್ಯವಿಲ್ಲ ಎಂದುಕೊಂಡ ಸಿಪಿಐ ಚಂದ್ರಶೇಖರ ನಾಯಕ ಸ್ವಂತ ಖರ್ಚಿನಲ್ಲೇ ಮಾದರಿ ಪರೀಕ್ಷೆ ನಡೆಸುವ ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯ ಪ್ರವೃತ್ತರಾಗಿದ್ದಾರೆ.

ಸಿದ್ಧತೆ: ಮಾದರಿ ಪರೀಕ್ಷೆ ನಡೆಸುವ ಮುನ್ನ ಅನುಭವಿ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ ಅವರಿಂದ ಪ್ರಶ್ನೆ ಮತ್ತು ಉತ್ತರ ಪತ್ರಿಕೆ ತಯಾರಿಸಿ ಪರೀಕ್ಷೆ ನಡೆಸಿದ್ದಾರೆ. ಅನುಭವಿ ಶಿಕ್ಷಕರಿಂದ ವಿದ್ಯಾರ್ಥಿಗಳು ಬರೆದ ಪತ್ರಿಕೆಗಳ ಮೌಲ್ಯಮಾಪನ ಮಾಡಿಸಿದ್ದಾರೆ. ನಂತರ ಪ್ರತಿ ಶಾಲೆಗೆ ಸ್ವತಃ ತಾವೇ ತೆರಳಿ ಪಲಿತಾಂಶ ಪ್ರಕಟಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಸಭೆ ನಡೆಸಿ ಪರೀಕ್ಷೆಗಳಿಗೆ ಪೂರ್ವ ತಯಾರಿ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಪರೀಕ್ಷೆಗಳ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಿದ್ದಾರೆ.

Advertisement

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿರುವ ಪರೀಕ್ಷೆಯ ನಿವಾರಣೆ ಹಾಗೂ ಫಲಿತಾಂಶ ಸುಧಾರಣೆ ಉದ್ದೇಶದಿಂದ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳೇ ಹೆಚ್ಚು ಇರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಇರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ
ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಧೈರ್ಯ ತುಂಬುವ ಉದ್ದೇಶದಿಂದ ಮಾದರಿ ಪರೀಕ್ಷೆ ನಡೆಸಲಾಗಿದೆ. ನಾನು ಸಹ ಸರ್ಕಾರಿ ಶಾಲೆಯಲ್ಲೆ
ಓದಿದ್ದು, ಅಲ್ಲಿನ ಸ್ಥಿತಿಯ ಅರಿವಿದೆ. ಈ ಕಾರ್ಯಕ್ಕೆ ಪಿಎಸ್‌ಐ ರಂಗಪ್ಪ ದೊಡ್ಡಮನಿ ಸಹಕಾರ ತುಂಬಾ ಇದೆ ಎನ್ನುತ್ತಾರೆ ಸಿಪಿಐ ಜಿ. ಚಂದ್ರಶೇಖರ ನಾಯಕ. 

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿರುವ ಪರೀಕ್ಷೆ ಭಯ ನಿವಾರಣೆ ಹಾಗೂ ಶೇಕಡಾವಾರು ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ಹೆಚ್ಚಾಗಿ ಬಡ ವಿದ್ಯಾರ್ಥಿಗಳೇ ಇರುವ ಸರ್ಕಾರಿ ಶಾಲೆಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಈ ಕಾರ್ಯಕ್ಕೆ ಪೊಲೀಸ್‌ ಇಲಾಖೆ ಸಿಬ್ಬಂದಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪಿಎಸ್‌ಐ ರಂಗಪ್ಪ ದೊಡ್ಡಮನಿ ಸಹಕರಿಸಿದ್ದಾರೆ.
 ಜಿ. ಚಂದ್ರಶೇಖರ ನಾಯಕ, ಸಿಪಿಐ, ಮಾನಿ

ಸಿಪಿಐ ಚಂದ್ರಶೇಖರ ನಾಯಕ, ಪಿಎಸ್‌ಐ ರಂಗಪ್ಪ ದೊಡ್ಡಮನಿಯವರ ಕಾರ್ಯ ಶ್ಲಾಘನೀಯ. ಹೆಚ್ಚಿನ ಕಾಳಜಿ ವಹಿಸಿ ಶಿಕ್ಷಣ ಇಲಾಖೆ ನಡೆಸುವ ಪರೀಕ್ಷೆಗಳ ರೀತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಮಾದರಿ ಪರೀಕ್ಷೆ ನಡೆಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೂ ತುಂಬಾ ಅನುಕೂಲವಾಗಿದೆ.
 ದೇವಯ್ಯ, ಮುಖ್ಯಗುರು, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಮಾನಿ

ಸಿಪಿಐ ಚಂದ್ರಶೇಖರ ನಾಯಕ ಹಾಗೂ ಪಿಎಸ್‌ಐ ರಂಗಪ್ಪ ದೊಡ್ಡಮನಿಯವರು ನಡೆಸಿದ ಪರೀಕ್ಷೆಯಿಂದ ತುಂಬಾ ಅನುಕೂಲವಾಗಿದೆ. ಪರೀಕ್ಷೆ ಭಯ ನಿವಾರಣೆಯಾಗಿದೆ. ಪೊಲೀಸರೆಂದರೆ ಭಯ ಆಗುತ್ತಿತ್ತು. ಆದರೆ ಅವರ ಆತ್ಮೀಯ ಗುಣ ನಮಗೆ ತುಂಬಾ ಇಷ್ಟವಾಯಿತು. ನಾನು ಸಹ ಇನ್ನೂ ಚೆನ್ನಾಗಿ ಓದಿ, ಅವರಂತೆ ಉತ್ತಮ ಅಧಿಕಾರಿಯಾಗುವ ಅಸೆ ಆಗುತ್ತಿದೆ.  ಪ್ರಿಯಾಂಕ,
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಮಾನ್ವಿ

„ರವಿ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next