Advertisement

ಸಂಪಾಜೆ: ಶಂಕಿತ ನಕ್ಸಲರಿಗೆ ಮುಂದುವರಿದ ಶೋಧ

09:30 AM Feb 05, 2018 | Team Udayavani |

ಸುಳ್ಯ: ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಕಡಮಕಲ್ಲು ಮೀಸಲು ಅರಣ್ಯ ಪ್ರದೇಶದ ಗುಡ್ಡೆಗದ್ದೆ ಯಲ್ಲಿ ಶುಕ್ರವಾರ ಸಂಜೆ ಮನೆಗಳಿಗೆ ಭೇಟಿ ನೀಡಿ ಆಹಾರ ಪದಾರ್ಥದೊಂದಿಗೆ ತೆರಳಿರುವ ಮೂವರು ಶಂಕಿತ ನಕ್ಸಲರ ಪತ್ತೆಗೆ ರವಿವಾರವೂ ಶೋಧ ಕಾರ್ಯ ಮುಂದುವರಿದಿದೆ.

Advertisement

ನಕ್ಸಲ್‌ ನಿಗ್ರಹ ದಳದ ಎರಡು ತಂಡಗಳು ಕೊಡಗು ಜಿಲ್ಲೆ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಿರತವಾಗಿವೆ. ರವಿವಾರ ಸಂಜೆ ತನಕವೂ ಶಂಕಿತ ನಕ್ಸಲರ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶನಿವಾರ ರಾತ್ರಿ ಗುಡ್ಡೆಗದ್ದೆಯ 4 ಮನೆಗಳಿಗೆ ಬಂದಿದ್ದ ನಕ್ಸಲರು ಮನೆಯವರ ಬಳಿ ಹಂಚಿಕೊಂಡಿರುವ ಮಾಹಿತಿ ಆಧಾರದಲ್ಲಿ, ಶಿರಾಡಿಯ ಅಡ್ಡಹೊಳೆಯಲ್ಲಿ ಕಾಣಿಸಿಕೊಂಡವರೂ ಈ ಮೂವರೂ ಒಂದೇ ತಂಡದವರೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಡ್ಡಹೊಳೆ ಪರಿಸರದಲ್ಲಿ ಶೋಧ ನಡೆಯುತ್ತಿರುವುದರಿಂದ ತಾವು ಇತ್ತ ಬಂದಿರುವುದಾಗಿ ಈ ಮೂವರು ಮನೆ ಮಂದಿಯ ಬಳಿ ತಿಳಿಸಿದ್ದರು.

ಸುಬ್ರಹ್ಮಣ್ಯದತ್ತ ದೃಷ್ಟಿ
ಪ್ರಸ್ತುತ ಶಂಕಿತ ನಕ್ಸಲರು ಸಂಪಾಜೆ ಪರಿಸರದಿಂದ ಸುಬ್ರಹ್ಮಣ್ಯ ಅರಣ್ಯ ಭಾಗಕ್ಕೆ ನುಸುಳಿರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸರು ಶಂಕಿಸಿದ್ದು, ಸಂಪಾಜೆ, ಸುಳ್ಯ, ಸುಬ್ರಹ್ಮಣ್ಯ ಅರಣ್ಯ ಭಾಗದಲ್ಲಿ ಕಟ್ಟೆಚ್ಚರ ಮುಂದು ವರಿಸಿದ್ದಾರೆ. ಸಂಪಾಜೆ ಗೇಟು ಸಹಿತ ಹಲವೆಡೆ ಅಪರಿಚಿತ ವಾಹನಗಳ ತಪಾಸಣೆ, ವ್ಯಕ್ತಿಗಳ ಓಡಾಟದ ಬಗ್ಗೆ ನಿಗಾ ಇಡಲಾಗಿದೆ. ಕಡಬ ತಾಲೂಕು ವ್ಯಾಪ್ತಿಗೆ ಸೇರಿರುವ ಸುಬ್ರಹ್ಮಣ್ಯ ಪ್ರದೇಶದ ಅರಣ್ಯಕ್ಕೆ ತೆರಳಿದ್ದಾರೆಯೇ ಅಥವಾ ಸಂಪಾಜೆ ಮೂಲಕ ಕರಿಕ್ಕೆಗೆ ಸಂಪರ್ಕ ಸಾಧಿಸಿ ಕೇರಳಕ್ಕೆ ತೆರಳಿರಬಹುದೇ ಎಂಬಿತ್ಯಾದಿಗಳ ಪ್ರಶ್ನೆಗಳೂ ಹುಟ್ಟಿಕೊಂಡಿವೆ.

ತಂಡದಲ್ಲಿ ವಿಕ್ರಂ ಗೌಡ
ಶಂಕಿತ ನಕ್ಸಲರು ಆಹಾರ ಪಡೆದು ತೆರಳಿರುವ ಗುಡ್ಡೆ ಗದ್ದೆಯ ಮನೆಗಳ ಮಂದಿಗೆ ಪೊಲೀಸರು ನಕ್ಸಲರ ಭಾವಚಿತ್ರಗಳನ್ನು ತೋರಿಸಿದಾಗ ಅದರಲ್ಲಿರುವ ಓರ್ವ ತಮ್ಮಲ್ಲಿಗೆ ಬಂದಿರುವ ವಿಕ್ರಂ ಗೌಡ ಎಂದು ಗುರುತು ಪತ್ತೆಹಚ್ಚಿದ್ದಾರೆ. ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಕೆಲವರ ಪ್ರಯತ್ನಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸೇರಿದಂತೆ ಹಲವು ಗಂಭೀರ ಆರೋಪಗಳು ವಿಕ್ರಮ್‌ ಗೌಡನ ಮೇಲಿರುವುದರಿಂದ ಆತನ ಪತ್ತೆಗೆ ಪೊಲೀಸರೂ ಹದ್ದಿನಗಣ್ಣಿಟ್ಟಿದ್ದಾರೆ. ಸುರಕ್ಷಿತ ಸ್ಥಳವನ್ನು ಅರಸಿ ಆತ ತನ್ನ ಸಹಚರರೊಂದಿಗೆ ದಕ್ಷಿಣ ಕನ್ನಡ, ಕೊಡಗು ವ್ಯಾಪ್ತಿಯ ಅರಣ್ಯಕ್ಕೆ ನುಸುಳಿರಬಹುದು ಎಂಬ ಸಂಶಯ ಮೂಡಿದೆ.

Advertisement

ಆಹಾರದ ಕೊರತೆ
ರಾಜ್ಯ ಹಾಗೂ ಹೊರ ರಾಜ್ಯದ ನಾನಾ ಭಾಗಗಳಲ್ಲಿ ನಕ್ಸಲ್‌ ನಿಗ್ರಹ ಚಟುವಟಿಕೆ ತೀವ್ರಗೊಂಡಿರುವ ಪರಿಣಾಮ ಭೀತರಾಗಿರುವ ನಕ್ಸಲರು ನಿಂತಲ್ಲಿ ನಿಲ್ಲದೇ ಕಾಡಲ್ಲೇ ಅಲೆದಾಡುವ ಸ್ಥಿತಿ ನಿರ್ಮಾಣ ಆಗಿದೆ. ಇದರಿಂದಾಗಿ ಅವರನ್ನು ಆಹಾರದ ಕೊರತೆ ಕಾಡುತ್ತಿದ್ದು, ಪೊಲೀಸರ ಸಂಚಾರ ಹಾಗೂ ಜನವಸತಿ ಕಡಿಮೆ ಇರುವ ಭಾಗದ ಮನೆಗಳಿಗೆ ತೆರಳಿ ಆಹಾರ ಸಾಮಗ್ರಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ತಿಂಗಳ ಅಂತರದಲ್ಲಿ ಎರಡನೇ ಬಾರಿ ನಕ್ಸಲರು ಕಾಣಿಸಿಕೊಂಡಿರುವುದರಿಂದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಜನರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಗರಿಷ್ಠ  ಜಾಗೃತಿ
ಕಾಸರಗೋಡು: ಮಡಿಕೇರಿ ತಾಲೂಕಿನ ಕೊಯನಾಡು, ಸುಳ್ಯ ಮತ್ತು ಸುಬ್ರಹ್ಮಣ್ಯ ಅರಣ್ಯ ಪ್ರದೇಶಗಳಲ್ಲಿ ನಕ್ಸಲರನ್ನು ಕಂಡಿರುವುದಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಗರಿಷ್ಠ ಎಚ್ಚರ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next