Advertisement
ಪ್ರಾಕೃತಿಕ ಅವಘಡದ ಬಳಿಕ ಆ. 8ರಂದು ಉಭಯ ಜಿಲ್ಲಾಡಳಿತಗಳು ಎಲ್ಲ ಬಗೆಯ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದವು. ಅನಂತರ ಲಘು ವಾಹನ ಸಂಚಾರ ಆರಂಭಿಸಿದ್ದರೂ ಮತ್ತೆ ನಿಷೇಧಿಸಲಾಗಿತ್ತು. ತಿಂಗಳ ಹಿಂದೆ ತಾತ್ಕಾಲಿಕ ದುರಸ್ತಿ ಪೂರ್ಣಗೊಂಡು ಅಧಿಕೃತವಲ್ಲದೆ ಲಘು ವಾಹನಗಳು ಸಂಚರಿಸುತ್ತಿದ್ದವು.
ಸಂಪಾಜೆ-ಮಡಿಕೇರಿ ನಡುವೆ ವಾಹನ ಓಡಾಟ ಮುಂದಿನ ಆದೇಶದ ತನಕ ಇರಲಿದೆ ಎಂದು ಜಿಲ್ಲಾಡಳಿತ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹೊರಡಿಸಿದ ಪ್ರಕಟನೆಯಲ್ಲಿ ತಿಳಿಸಲಾಗಿದೆ. ರಸ್ತೆಯಲ್ಲಿ ಭಾಗಶಃ ದುರಸ್ತಿ ಮತ್ತು ಶಾಶ್ವತ ಕಾಮಗಾರಿ ಪ್ರಗತಿಯಲ್ಲಿದ್ದು, ಎಲ್ಲ ಬಗೆಯ ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಹಿಂದಿನ ನಿರ್ಬಂಧ ಆದೇಶದಲ್ಲಿ ಭಾಗಶಃ ಮಾರ್ಪಾಟು ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ. ಓಡಾಟ ಆರಂಭ
ಜಿಲ್ಲಾಡಳಿತದ ಅನುಮೋದನೆಯಿಂದ ಶೇ.70ರಷ್ಟು ಬಸ್ ಓಡಾಟ ರವಿವಾರದಿಂದಲೇ ಆರಂಭಗೊಂಡಿದೆ. ಸೋಮವಾರದೊಳಗೆ ಎಲ್ಲ ಬಸ್‌ಗಳು ಸಂಚರಿಸಲಿವೆ ಎಂದು ಸುಳ್ಯ ಕೆಎಸ್‌ಆರ್‌ಟಿಸಿ ಘಟಕದ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
Related Articles
ರಸ್ತೆಯಲ್ಲಿ ರಾತ್ರಿ ವೇಳೆ ಘನ ವಾಹನಗಳು ಸಂಚರಿಸುತ್ತಿದ್ದರೂ ಸರಕಾರಿ ಬಸ್ ಮತ್ತು ವಾಹನಗಳ ಪ್ರವೇಶಕ್ಕೆ ಅವಕಾಶ ನೀಡದ ಬಗ್ಗೆ ಹಾಗೂ ಹೆದ್ದಾರಿ ಪೂರ್ಣಗೊಳ್ಳುವ ಮೊದಲೇ ಸುಳ್ಯ-ಕರಿಕೆ-ಭಾಗಮಂಡಲ- ಮಡಿಕೇರಿ ಪರ್ಯಾಯ ರಸ್ತೆಯಲ್ಲಿ ಮಿನಿ ಬಸ್ ಓಡಾಟ ರದ್ದುಗೊಳಿಸಿರುವುದರಿಂದ ಜನರಿಗೆ ತೊಂದರೆ ಉಂಟಾಗಿರುವ ಕುರಿತು “ಉದಯವಾಣಿ’ ಸತತ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು.
Advertisement