Advertisement

ಸಹಕಾರ ಬ್ಯಾಂಕ್ ಗಳಿಗೆ ಒಂದೇ ಸಾಫ್ಟ್‌ವೇರ್; ಚರ್ಚಿಸಿ ನಿರ್ಧಾರ: ಸಚಿವ ಸೋಮಶೇಖರ್ ಸೂಚನೆ

07:54 PM Jun 17, 2020 | Sriram |

ಬೆಂಗಳೂರು: ಸಹಕಾರ ಇಲಾಖೆಯ ವ್ಯಾಪ್ತಿಯೊಳಗೆ ಬರುವ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ವಿಎಸ್ಎಸ್ಎನ್ ಸಂಘಗಳಿಗೆ ಒಂದೇ ಸಾಫ್ಟ್‌ವೇರ್ ಅಳವಡಿಸಲು ಸರ್ಕಾರದ ಅಡಿ ಬರುವ ಸಾಫ್ಟ್‌ವೇರ್ ಏಜೆನ್ಸಿ ಜೊತೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಸೂಚನೆ ನೀಡಿದರು.

Advertisement

ಸಹಕಾರ ಇಲಾಖೆಯಡಿ ಬರುವ ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಿ ಒಂದೇ ಸಾಫ್ಟ್‌ವೇರ್ ಅಡಿ ತರುವ ಸಲುವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಸಭಾಂಗಣದಲ್ಲಿ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಸಾಧ್ಯಾಸಾಧ್ಯತೆ ಚರ್ಚಿಸಿ ತೀರ್ಮಾನಕ್ಕೆ ಬನ್ನಿ
ಶೀಘ್ರದಲ್ಲೇ ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ಮತ್ತು ವಿಎಸ್ಎಸ್ಎನ್ ಸಂಘಗಳು ಸರ್ಕಾರಿ ಸಾಫ್ಟ್‌ವೇರ್ ಏಜೆನ್ಸಿಯವರ ಜೊತೆ ಸಭೆ ಕರೆದು ಸಾಧ್ಯಾಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಈಗಿರುವ ಎಲ್ಲ ವ್ಯವಸ್ಥೆಯನ್ನು ಹೇಗೆ ಸಾಫ್ಟ್‌ವೇರ್ ಗೆ ಅಳವಡಿಸಬೇಕು. ಮುಂದಿನ ದಿನಗಳಲ್ಲಿ ಸಮಸ್ಯೆಗಳು ತಲೆದೋರದಂತೆ ಹೇಗೆ ನೋಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕೂಡಲೇ ಸಭೆ ಸೇರಿ ಈ ಬ್ಯಾಂಕ್ ಗಳ ಅಧ್ಯಕ್ಷರು ಚರ್ಚಿಸಿ ಒಂದು ಸಹಮತಕ್ಕೆ ಬರಬೇಕು. ಇನ್ನು 15 ದಿನಗಳ ಬಳಿಕ ಮತ್ತೊಮ್ಮೆ ಸಭೆ ಸೇರೋಣ ಎಂದು ಸಹಕಾರ ಸಚಿವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಹಾಗೂ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಅವರಿಗೆ ತಿಳಿಸಿದರು.

ಲಾಭದ ಬಗ್ಗೆ ಮೊದಲು ತಿಳಿದುಕೊಳ್ಳಿ
ಡಿಸಿಸಿ, ಅಪೆಕ್ಸ್ ಬ್ಯಾಂಕ್ ಹಾಗೂ 5 ಸಾವಿರ ಇರುವ ವಿಎಸ್ಎಸ್ಎನ್ ಬ್ಯಾಂಕ್ ಗಳನ್ನು ಒಂದೇ ಸಾಫ್ಟ್‌ವೇರ್ ಅಡಿ ತರಬೇಕೆಂದರೆ ಸಾಧ್ಯವೇ? ಹಾಗೂ ಉಪಯೋಗ ಏನು ಎಂಬುದು ನಿಮ್ಮೆಲ್ಲರಿಗೂ ತಿಳಿದಿರಬೇಕು ಎಂದು ಸಚಿವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಹೀಗೆ ಮಾಡಿರುವುದರಿಂದ ವಂಚನೆಗಳನ್ನು ತಪ್ಪಿಸಬಹುದಾಗಿದೆ. ಒಮ್ಮೆ ದಾಖಲೆಯನ್ನು ಅಪ್ಡೇಟ್ ಮಾಡುವುದರಿಂದ ಅದನ್ನು ಪುನಃ ತಿದ್ದುವ ಅವಕಾಶ ಇರುವುದಿಲ್ಲ. ಜೊತೆಗೆ ಯಾರು ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲ ಪಡೆದಿದ್ದಾರೆಂಬ ಮಾಹಿತಿಯೂ ದೊರೆಯುತ್ತದೆ ಎಂದು ತಿಳಿಸಿದರು.

Advertisement

ಒಂದೇ ಸಾಫ್ಟ್‌ವೇರ್ ಬೇಕು
ಸಾಲಮನ್ನಾ ಸಂದರ್ಭದಲ್ಲಿ ಕಂಪ್ಯೂಟರೀಕರಣ ಮಾಡಲು ತುಂಬಾ ಕಷ್ಟವಾಗಿತ್ತು. ಪುನಃ ಡಾಟಾವನ್ನು ರೀ ಎಂಟ್ರಿ ಮಾಡುವುದಕ್ಕೆ ತುಂಬಾ ಸಮಯ ಹಾಗೂ ಸಿಬ್ಬಂದಿಯ ಕೆಲಸ ವ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಒಂದೇ ಸಾಫ್ಟ್‌ವೇರ್ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಅಪೆಕ್ಸ್ ಬ್ಯಾಂಕ್ ಇಲ್ಲವೇ ಡಿಸಿಸಿ ಬ್ಯಾಂಕ್ ಗಳು ಒಮ್ಮತದ ತೀರ್ಮಾನಕ್ಕೆ ಬರಬೇಕಿದ್ದು, ಸಾಫ್ಟ್‌ವೇರ್ ಅನ್ನು ಅವರೇ ಕೊಡುವುದಾದರೆ ನಾವು ಅದನ್ನೇ ಎಲ್ಲ ಬ್ಯಾಂಕ್ ಗಳಲ್ಲೂ ಅಳವಡಿಸಿಕೊಳ್ಳುತ್ತೇವೆ. ಸಹಕಾರ ಇಲಾಖೆಯಿಂದಲೇ ಒಂದೇ ಸಾಫ್ಟ್‌ವೇರ್ ಕೊಡಬೇಕೆಂದಿದ್ದರೆ ಅದನ್ನೂ ಇಲಾಖೆಯಿಂದ ಭರಿಸಲಾಗುವುದು ಎಂಬ ಸೂಚನೆಯನ್ನು ನೀಡಲಾಯಿತು.

ಕಡಿಮೆ ಖರ್ಚಿನಲ್ಲಿ ಹಾಗೂ ನಮ್ಮ ಅಗತ್ಯಕ್ಕೆ ತಕ್ಕಂತೆ ಇರುವ ಸಾಫ್ಟ್‌ವೇರ್ ಇದ್ದರೆ ಸಾಕು. ಈ ನಿಟ್ಟಿನಲ್ಲಿ ಖರೀದಿ ಮಾಡುವ ಚಿಂತನೆಯಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಏಜೆನ್ಸಿಗಳೇ ಏಕೆ?
ಖಾಸಗೀ ಏಜೆನ್ಸಿಗಳಿಗೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಜವಾಬ್ದಾರಿ ಕೊಡುವ ಬದಲು ಸರ್ಕಾರಿ ಏಜೆನ್ಸಿಗಳಿಗೆ ಕೊಡಬೇಕು. ಒಂದು ವೇಳೆ ಆ ಖಾಸಗಿ ಏಜೆನ್ಸಿ ಜೊತೆ ಒಪ್ಪಂದ ರದ್ದು ಮಾಡಿಕೊಂಡರೆ ಡೇಟಾವನ್ನು ಅವರಿಂದ ಪಡೆಯಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಏಜೆನ್ಸಿಯ ಬಳಿ ಸಾಫ್ಟ್‌ವೇರ್ ಸಿದ್ಧಪಡಿಸಿದರೆ ಡಾಟಾ ನಾಶವಾಗುವ ಇಲ್ಲವೇ ಸರ್ಕಾರೇತರ ವ್ಯಕ್ತಿಗಳಿಗೆ ಇಲ್ಲವೇ ಸಂಸ್ಥೆಗಳಿಗೆ ಸಿಗುವ ಸಾಧ್ಯತೆ ಇರುವುದಿಲ್ಲ. ಜೊತೆಗೆ ಸಾಫ್ಟ್‌ವೇರ್ ಅಭಿವೃದ್ಧಿಗೆ ತಗುಲುವು ದುಡ್ಡು ಸರ್ಕಾರದ ಖಾತೆಗೇ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಏಜೆನ್ಸಿಯವರಿಂದಲೇ ಸಾಫ್ಟ್‌ವೇರ್ ಅಭಿವೃದ್ಧಿಪಡಿಸೋಣ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಆದರೆ, ಅನುಷ್ಠಾನದ ಬಗ್ಗೆ ಹಾಗೂ ಇರುವ ಸಮಸ್ಯೆಗಳ ಬಗ್ಗೆ ಈ ಬ್ಯಾಂಕ್ ಗಳು ಚರ್ಚಿಸಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸರ್ಕಾರಿ ಏಜೆನ್ಸಿ ಬಳಕೆಗೆ ಸಲಹೆ
ಮುಖ್ಯಮಂತ್ರಿಗಳ ಇ  ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ್ ಮಾತನಾಡಿ, ಸರ್ಕಾರದ ಸುಪರ್ದಿಯಲ್ಲಿ ಅನೇಕ ಸಾಫ್ಟ್‌ವೇರ್ ಗಳನ್ನು ಅಭಿವೃದ್ಧಿಪಡಿಸಲಾಗುದೆ. ಇದಕ್ಕಾಗಿ ಸರ್ಕಾರಿ ಅಧೀನದ ಸಾಫ್ಟ್‌ವೇರ್ ಏಜೆನ್ಸಿ ಇರುವುದರಿಂದ ಅದನ್ನೇ ಬಳಸಿಕೊಂಡರೆ ಹಣ ಸಂದಾಯ ಮಾಡುವ ಅವಶ್ಯಕತೆ ಇರುವುದಿಲ್ಲ. ಒಮ್ಮೆ ತಜ್ಞರ ಬಳಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

ಅಪರ ಮುಖ್ಯ ಕಾರ್ಯದರ್ಶಿಗಳಾದ ನಾಗಲಾಂಬಿಕಾ ದೇವಿ, ಸಹಕಾರ ಸಂಘಗಳ ನಿಬಂಧಕರಾದ ಪ್ರಸನ್ನಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next