ಮುಳಬಾಗಿಲು: ಶಾಲಾ ಕಟ್ಟಡ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರೊಬ್ಬರು ಬರುತ್ತಾರೆ ಎಂದು ಸಂಜೆಯವರೆಗೂ ಕಾದು ಸುಸ್ತಾದ ಶಾಸಕರು ಉದ್ಘಾಟಿಸುತ್ತಿದ್ದಂತೆಯೇ, ಸಂಸದರು ಬರುತ್ತಾರೆ ಎಂಬ ಸುದ್ದಿ ತಿಳಿದು, ಮತ್ತೆ ಅರ್ಧ ಗಂಟೆ ಕಾದು ಮತ್ತೂಮ್ಮೆ ಕಾರ್ಯಕ್ರಮ ಉದ್ಘಾಟಿಸಿದ ಪ್ರಸಂಗ ಆವಣಿ ಗ್ರಾಮದಲ್ಲಿ ನಡೆಯಿತು.
ತಾಲೂಕಿನ ಪಿಡಬ್ಲಯೂಡಿಯಿಂದ 55 ಲಕ್ಷ ರೂ.ನಲ್ಲಿ ಆವಣಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 4ಕೊಠಡಿ ನಿರ್ಮಿಸಲಾಗಿತ್ತು. ಅದರ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಪೂರ್ವ ನಿಗದಿಯಂತೆ 12.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನಕಾರ್ಯಕ್ರಮ ಉದ್ಘಾಟಿಸಲಿದ್ದರು.
ಅದರಂತೆ ಕ್ಷೇತ್ರದ ಶಾಸಕ ಎಚ್.ನಾಗೇಶ್ ಸಹ 11 ಗಂಟೆಗೆ ತಮ್ಮ ಬೆಂಬಲಿಗರೊಂದಿಗೆಆವಣಿ ಗ್ರಾಮದ ಶಾಲಾ ಕಾರ್ಯಕ್ರಮದ ಬಳಿ ಬಂದು ಸಚಿವರ ಆಗಮನಕ್ಕೆ ಕಾದಿದ್ದರು.ಆದರೆ, ಕಾರ್ಯಕರ್ತರು ಕಾದಿದ್ದು ಬೇಸತ್ತು ಹೊರಟು ಹೋದರು. ಆದರೆ, ಸಚಿವರು ಸಂಜೆ 4 ಗಂಟೆಯಾದರೂ ಬರದೇ ಇದ್ದಿದ್ದರಿಂದ ಕಾದು ಕಾದು ಬೇಸತ್ತು ಕೊನೆಗೆ ಎಚ್.ನಾಗೇಶ್ ಅವರೇ ಶಾಲಾ ಕಟ್ಟಡವನ್ನು 4 ಗಂಟೆಗೆ ಉದ್ಘಾಟನೆ ಮಾಡಿದರು.
ಉದ್ಘಾಟನೆ ಮಾಡಿದ ಕೆಲವೇ ಕ್ಷಣದಲ್ಲಿಯೇ ಎಂಪಿ ಮುನಿಸ್ವಾಮಿ ಕಾರ್ಯಕ್ರಮಕ್ಕೆ ಬರುತ್ತಾರೆಂದು ತಿಳಿದು, ಉದ್ಘಾಟನೆ ಮಾಡಿದ್ದ ನಾಮಫಲಕಕ್ಕೆ ಮತ್ತೂಮ್ಮೆ ಬಟ್ಟೆಯನ್ನು ಮುಚ್ಚಿಸಿ ಮರು ಮಾತನಾಡದೇ ಎಂಪಿ ಆಗಮನಕ್ಕೆ ಕಾಯುವಂತಾಯಿತು.ಸಂಜೆ 4.30ಕ್ಕೆ ಸದಸ್ಯ ಮುನಿಸ್ವಾಮಿ ಆಗಮಿಸುತ್ತಿದ್ದಂತೆ ಅರ್ಧ ಗಂಟೆಯಿಂದ ಕಾದಿದ್ದ ಶಾಸಕರು ಎಂಪಿ ಅವರೊಂದಿಗೆ ಸೇರಿ 2ನೇ ಬಾರಿಗೆ ಮತ್ತೂಮ್ಮೆ ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದಾರ್ ರಾಜಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ತಾಪಂ ಅಧ್ಯಕ್ಷ ಎ.ವಿ.ಶ್ರೀ ನಿವಾಸ್, ಪಿಡಬ್ಲೂéಡಿ ಎಇಇ ಗೋಪಾಲ್, ಬಿಇಒ ಗಿರಿಜೇಶ್ವರಿದೇವಿ, ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ವೆಂಕಟಗಿರಿಯಪ್ಪ, ಇಸಿಒ ಸಿ.ಸೊಣ್ಣಪ್ಪ, ಸೇವಾದಳ ತಾಲೂಕು ಅಧ್ಯಕ್ಷ ಎನ್.ರೆಡ್ಡಪ್ಪ, ಭಾಸ್ಕರ್‌ರೆಡ್ಡಿ, ಓಬಳರೆಡ್ಡಿ, ಆವಣಿ ವಿಜಿ, ಮಂಡಿಕಲ್ ಚಲಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.