Advertisement

ಸೇಮ್‌ ಪಿಂಚ್‌: ಸೋಲ್‌ಮೇಟ್‌; ಮನಸ್ಸು- ಮನಸ್ಸು ಒಂದೇ ಡ್ರೆಸ್ಸು! 

09:21 AM Aug 23, 2017 | |

ಜಗತ್ತಿನಲ್ಲಿ ಒಂದೇ ರೀತಿ ಏಳು ಮಂದಿ ಇರುತ್ತಾರಂತೆ. ಅಂಥವರು ಒಬ್ಬರಿಗೊಬ್ಬರು ಸಿಕ್ಕಾಗ ಮೂಕವಿಸ್ಮಿತರಾಗುತ್ತಾರಂತೆ. ಆದರೆ, ಒಂದೇ ರೀತಿಯ ಮನಸ್ಸು, ಆಲೋಚನೆ, ಅಭಿರುಚಿ ಇದ್ದವರು ಎದುರು- ಬದರಾಗುವುದು, ಬಾಳಿನ ಪಯಣದಲ್ಲಿ ಜತೆಗಾರರಾಗುವುದು ಅಪರೂಪ. ಅವರೇ “ಸೋಲ್‌ ಮೇಟ್‌’!

Advertisement

ಆಫೀಸಿನಲ್ಲಿ ಆಕೆ ಕೆಲಸದಲ್ಲಿ ಮುಳುಗಿದ್ದಳು. ಥಟ್ಟನೆ ಫೋನ್‌ ರಿಂಗಣಿಸಿತು. ಅತ್ತ ಕಡೆಯಿಂದ ದುಂಬಿಯ ದನಿ; “ನಾಳೆ ಸಿಗ್ತಿàರಾ? ಒಮ್ಮೆ ಮಾತಾಡ್ಬೇಕು’. ಇವಳು “ಸರಿ’ ಎಂದಳು. ಫೋನಿನಲ್ಲೇ ಮುಹೂರ್ತವೂ ಫಿಕ್ಸ್‌. “ನಿಮ್ಮ ಆಫೀಸಿಗೆ ಹತ್ತಿರವೇ, ನಿಮಗೆ ಹೆಚ್ಚು ತೊಂದರೆ ಕೊಡಲ್ಲ’ ಎನ್ನುತ್ತಾ ಭೇಟಿಯಾಗಬೇಕಾದ ಸ್ಥಳವನ್ನೂ ಆತ ಹೇಳಿದ. “ಬರಿ¤àರಾ? ಖಂಡಿತವಾಗಿ…’, ಅವನ ದನಿಯಲ್ಲಿ ಅದೇನೋ ಗೋಗರೆತ. ಇನ್ನಾéರೋ ಆಗಿದ್ದರೆ ಸತಾಯಿಸುತ್ತಿದ್ದಳೇನೋ! ಆ ದನಿಯಲ್ಲಿದ್ದ ಆದ್ರìತೆಗೆ ಈಕೆಯ ಮನಸ್ಸು ಮೆತ್ತಗಾಯಿತು. “ಆಗಲಿ ಬರ್ತೇನೆ, ನಾಳೆ ಸಂಜೆ ಆರೂವರೆಗೆ ಅಲ್ಲಿರ್ತೇನೆ, ಪಕ್ಕಾ’ ಎಂದುಬಿಟ್ಟಳು.

ಮಾರನೇ ದಿನ ಸಂಜೆ ಆರು ಗಂಟೆಯ ಮುಂಚೆ ಒಂದು ಮೆಸೇಜು; “ಬರ್ತಾ ಇದ್ದೀರಾ, ಅಲ್ವಾ?’. ಇದನ್ನು ನೋಡಿ, ಈಕೆಯ ಮೊಗದಲ್ಲಿ ಮುಗುಳು. “ಬರ್ತಾ ಇದ್ದೀನಿ’, ಅವಳ ಚುಟುಕು ಉತ್ತರ. ಕೆಲಸಗಳೆಲ್ಲ ಬೇಗ ಮುಗಿಸಿ, ತಲೆಕೂದಲಿಗೆ ಬಾಚಣಿಗೆಯಾಡಿಸಿ, ಸೀರೆಯ ನೆರಿಗೆ ಸರಿಪಡಿಸಿಕೊಂಡು, ಲಗುಬಗೆಯಿಂದ ಆರಕ್ಕೆ ಕಚೇರಿಯಿಂದ ಹೊರಟಳು. ಅವರು ಹೇಳಿದ ವಿಳಾಸ, ಅಷ್ಟೇನೂ ದೂರವಿರಲಿಲ್ಲ. ಆಟೋ ಬೇಡವೆನಿಸಿ, ನಡೆದೇ ಹೊರಟಳು. ಸಂಜೆಯ ತಂಗಾಳಿ, ಆಕೆಯ ಹೆಜ್ಜೆಗಳ ಆಯಾಸಕ್ಕೆ ಹಿತ ತುಂಬಿದ್ದವು. ಇಬ್ಬರ ನಡುವಿನ ಪರಿಚಯಕ್ಕೆ ದೊಡ್ಡ ಇತಿಹಾಸವೇನಿಲ್ಲ. ಒಂದು ಆಕಸ್ಮಿಕ ಸನ್ನಿವೇಶದಲ್ಲಿ, ಚಿಗುರಿದ ನಂಟು. ಇಬ್ಬರೂ ಸಾಹಿತ್ಯ ಪ್ರಿಯರು. ಕ್ಲಾಸಿಕ್‌ ಸಿನಿಮಾ ಅಂದ್ರೆ ಇಬ್ಬರಿಗೂ ಇಷ್ಟ. ಅವನು ಮಾತಿಗೆ ಕುಳಿತರೆ, ಈಕೆ ಮೈಮರೆತು ಕೇಳುತ್ತಿದ್ದಳು. ಇವಳ ನವಿರು ಮಾತು, ಮಾರ್ದವತೆ, ಮೌನಭಾಷೆ ಆತನಿಗೂ ಅದೇನೋ ಹಿತ. ಒಂದೇ ವಿಚಾರಧಾರೆ ಇರುವವರ ಮಧ್ಯೆ ಸ್ನೇಹವಾಗಲು ಎಷ್ಟು ಹೊತ್ತು ಬೇಕು?

ವೈಯುಕ್ತಿಕ ವಿಚಾರಗಳನ್ನು ಅವರೆಂದೂ ಮಾತಾಡಲಿಲ್ಲ. ಗಾಳಿ- ಮಳೆ, ಇಷ್ಟದ ಸಿನಿಮಾ, ಇತ್ತೀಚೆಗೆ ಓದಿದ ಒಂದು ಕತೆ, ಕಿವಿತುಂಬಿದ ಗಝಲ್‌… ಇವಿಷ್ಟೇ ಅವರ ಮಾತುಕತೆಯಲ್ಲಿ ಗಸ್ತು. ಕೆಲ ದಿನಗಳ ಸ್ನೇಹ, ಆತ್ಮೀಯತೆಗೆ ತಿರುಗಿತ್ತು. ಆಕೆ ಯಾವ ಪುಸ್ತಕ ಓದಿದರೂ, ಆ ಬಗ್ಗೆ ಆತನಲ್ಲಿ ಹೇಳಿಕೊಳ್ಳಬೇಕೆನಿಸುತ್ತಿತ್ತು. ಹಾಗಂತ ಅವರು ಎದುರಾ ಎದುರು ಕುಳಿತು ಚರ್ಚಿಸುತ್ತಿರಲಿಲ್ಲ. ಫೋನು ಇಲ್ಲವೇ ಮೆಸೇಜಿನಲ್ಲಿ ಈ ಸಂಭಾಷಣೆ. ಯಾವುದೇ ಕಳಂಕವಿಲ್ಲದ, ನಿರ್ಮಲ ಶುದ್ಧ ಸ್ನೇಹ. ಆಗ ತಾನೇ ಅರಳಿದ ಹೂವಿನಂಥ ಘಮ ಆ ಸ್ನೇಹದ್ದು. ಇಬ್ಬರಿಗೂ ಪರಸ್ಪರರ ಬಗ್ಗೆ ಅಪಾರ ಗೌರವ. ಇಬ್ಬರೂ ಪ್ರಬುದ್ಧರಾದ್ದರಿಂದ ವೈಯಕ್ತಿಕ ಬದುಕು ಈ ಸ್ನೇಹಕ್ಕೆ ಅಡ್ಡ ಬರುತ್ತಿರಲಿಲ್ಲ. ವೈಯಕ್ತಿಕ ಬದುಕನ್ನೂ, ಈ ಸ್ನೇಹವನ್ನು ಬೇರೆಯಾಗಿ ನೋಡುವ ಪ್ರಬುದ್ಧತೆ ಇಬ್ಬರಿಗೂ ಇತ್ತು. ಈ ಸ್ನೇಹದ ಪಯಣವನ್ನು ನೆನೆಯುತ್ತಾ ಹೆಜ್ಜೆ ಇಡುವಾಗ, ಆಕೆಗೆ ದಾರಿ ಮುಗಿದಿದ್ದೇ ತಿಳಿಯಲಿಲ್ಲ.

ಅವರು ಹೇಳಿದ ಜಾಗ ತಲುಪಿದ ಈಕೆ, “ಹೆಲೋ… ನಾನು ಇಲ್ಲಿದ್ದೇನೆ. ನೀವು ಎಲ್ಲಿದ್ದೀರಿ?’ ಎಂದು ಮೊಬೈಲಿನಲ್ಲಿ ಕೇಳಿದ್ದಳು. “ನಾನು ಇಲ್ಲೇ ಇದ್ದೇನೆ, ನೋಡಿ…’ ಎಂದು ಕೈ ತೋರಿಸುತ್ತಾ, ಆತ ಹೇಳಿದ. ತಿರುಗಿ ನೋಡಿದಾಕೆಗೆ ಕಂಡದ್ದು, ನೀಲಿ ಚೌಕಳಿ ಅಂಗಿಯಲ್ಲಿ ನಿಂತಿದ್ದ ಆತ. ಅವಳಿಗೆ ಗುರುತು ಸಿಗಲಿ ಎಂದು ಕೈ ವೇವ್‌ ಮಾಡಿದ. ತಾನು ಆ ಕಡೆ ಗಮನಿಸದೆ, ಫೋನಾಯಿಸಿದ್ದಕ್ಕೆ ಅವಳಿಗೆ ನಾಚಿಕೆಯಾಗಿತ್ತು. ತನ್ನೊಳಗೇ ನಗುತ್ತಾ ರಸ್ತೆ ಅವನತ್ತ ನಡೆದಳು. ಎರಡೂ ಕೈ ಜೋಡಿಸಿ ನಮಸ್ಕರಿಸಿದ ಆತ, “ಬನ್ನಿ’ ಎಂದು ಮುಂದೆ ನಡೆದಿದ್ದ. ಈಕೆ ತಲೆ ಎತ್ತಿ ನೋಡಿದಳು. ಈಗ ಕಂಡದ್ದು, ಜಗಮಗಿಸುತ್ತಿದ್ದ ಲೈಟಿನ ಬೆಳಕಲ್ಲಿ ಚಿತ್ತಾರವಾಗಿ ಬಿಡಿಸಿದ್ದ “ಸೋಲ್‌ ಮೇಟ್‌’ ಎಂಬ ಫ‌ಲಕ.

Advertisement

“ಸೋಲ್‌ ಮೇಟ್‌’ ಒಂದು ರೆಸ್ಟೋರೆಂಟ್‌. ಬ್ರಿಟಿಷರ ಕಾಲದ ಕಟ್ಟಡ. ಹಳೆಯ ವಿನ್ಯಾಸವನ್ನು ಹಾಗೇ ಉಳಿಸಿಕೊಂಡಿದ್ದ, ಗತಕಾಲದ ನೆನಪುಗಳನ್ನು ಕಟ್ಟಿ ಕೊಡುವಂತಿದ್ದ ರೆಸ್ಟೋರೆಂಟ್‌. ದೊಡ್ಡ ದೊಡ್ಡ ಕಿಟಕಿಗಳು, ಮರದ ಪೀಠೊಪಕರಣಗಳು… ಆ ರೆಸ್ಟೋರೆಂಟಿನ ಅಂದ ಹೆಚ್ಚಿಸಿದ್ದವು. ಒಳಗಿದ್ದ ಶಾಂತ ವಾತಾವರಣ ಮನಸ್ಸನ್ನು ಇನ್ನಷ್ಟು ಆಹ್ಲಾದಕ್ಕೆ ಏರಿಸಿತ್ತು. ಹೆಚ್ಚು ಗೌಜು ಗದ್ದಲ ಇಲ್ಲದೇ, ನೆಮ್ಮದಿಯಾಗಿ ಕುಳಿತು ಮಾತಾಡಲು ಅದೊಂದು ಅದ್ಭುತ ತಾಣವೇ. ಅಲ್ಲಿನ ಕಾಫಿಯ ಘಮಕ್ಕೆ ಮೂಗಷ್ಟೇ ಅಲ್ಲ, ಹೃದಯವೂ ಅರಳುವಂಥದ್ದು. “ನೀವು ಯಾವಾಗ್ಲೂ ವಾಟ್ಸಾéಪಿನಲ್ಲಿ ಕಾಫಿ ಕುಡಿಸ್ತೀರಲ್ಲ, ಅದಕ್ಕೇ ಇಲ್ಲಿ ನಿಜವಾದ ಕಾಫಿ ಕುಡಿಸೋಣ ಅಂತ ಕರಕೊಂಡು ಬಂದೆ’ ಎಂದ ಆತ. ಈಕೆ ಬಿಡುವಿಲ್ಲದೆ ನಗತೊಡಗಿದಳು. ಆತನೂ ನಕ್ಕ. “ಏನು ತಗೋತೀರಿ ತಿಂಡಿ?’, ಕೇಳಿದ. “ಏನಾದ್ರೂ ಸರಿ, ಎನಿಥಿಂಗ್‌ ವೆಜ್‌…’ ಎಂದಳು ಈಕೆ. ಮತ್ತೆ ಮಾತು ಶುರು. ಫೇಸ್‌ಬುಕ್‌, ಪ್ರಸಕ್ತ ವಿದ್ಯಮಾನ, ಇತ್ತೀಚೆಗೆ ಕಾಡಿದ ಪುಸ್ತಕ… ಮತ್ತೆ ಮಾತಿನ ಬಸ್ಸನ್ನೇರಿ ಬಂದವು. ಅವಳಿಗಾಗಿ ದೆಹಲಿಯ ಚಾಂದ್ನಿಚೌಕ್‌ನಲ್ಲಿ ಖರೀದಿಸಿದ್ದ ಚೆಂದದ ಶಾಲನ್ನು ತನ್ನ ಬ್ಯಾಗ್‌ನಿಂದ ತೆಗೆದುಕೊಟ್ಟ. ಕಡುಗೆಂಪು ವರ್ಣದ ಹಕ್ಕಿಯ ತುಪ್ಪಳದಂತೆ ಮೃದುವಾಗಿದ್ದ ಶಾಲು ಅದು. ಒಂದು ಥ್ಯಾಂಕ್ಸ್‌ ಹೇಳಿ, ಶಾಲನ್ನು ಮೇಲಿಂದ ಕೆಳಗಿನ ತನಕ ಮುಟ್ಟಿ, ಅದರ ಅಂದ ಹೊಗಳುತ್ತಾ, ಹ್ಯಾಂಡ್‌ಬ್ಯಾಗಿನಲ್ಲಿ ಜೋಪಾನವಾಗಿಟ್ಟಳು ಈ ಜಾಣೆ. ಮತ್ತೆ ಆತ್ಮೀಯ ಮಾತುಕತೆಯ ಹಿಮ್ಮೇಳ.

ಕುಳಿತಲ್ಲೇ ಈಕೆ ತನ್ನ ಸುತ್ತ ನೋಡಿದಳು. ಅಲ್ಲಿ ತನ್ನಂತೆಯೇ ಒಬ್ಬೊಬ್ಬರು ಸಂಗಾತಿಯ, ಗೆಳೆಯರ ಜತೆ ಕಾಫೀ ಹೀರುತ್ತಿದ್ದರು. ತನ್ನಂತೆ ಒಂದೇ ಟೇಸ್ಟು, ಒಂದೇ ರೀತಿಯ ಆಲೋಚನೆಗಳನ್ನು ಹೊಂದಿರುವ ವ್ಯಕ್ತಿಯೇ ಅವರಿಗೆಲ್ಲ ಗೆಳೆಯ/ ಗೆಳತಿಯರಾಗಿ ಸಿಕ್ಕಿದ್ದಾರಾ? ಎಂಬ ಪ್ರಶ್ನೆ ಈಕೆಯ ಕಣ್ಣಂಚಲ್ಲಿ. ಜಗತ್ತಿನಲ್ಲಿ ಒಂದೇ ರೀತಿ ಏಳು ಮಂದಿ ಇರುತ್ತಾರಂತೆ. ಅಂಥವರು ಒಬ್ಬರಿಗೊಬ್ಬರು ಸಿಕ್ಕಾಗ ಮೂಕವಿಸ್ಮಿತರಾಗುತ್ತಾರಂತೆ. ಆದರೆ, ಒಂದೇ ರೀತಿಯ ಮನಸ್ಸು, ಆಲೋಚನೆ, ಅಭಿರುಚಿ ಇದ್ದವರು ಎದುರು- ಬದರಾಗುವುದು, ಬಾಳಿನ ಪಯಣದಲ್ಲಿ ಜತೆಗಾರರಾಗುವುದು ಅಪರೂಪ. 

ಅವನ ಕಣ್ಣಲ್ಲಿ ಕಣ್ಣಿಟ್ಟು ಆಕೆ ಗುನುಗಿದಳು… “ನೀನು ಸೋಲ್‌ಮೇಟ್‌’!

ವೀಣಾ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next