Advertisement
ಇವರ ಹೆಸರು ಸಮರ್ಥ್ ಜೆ. ರಾವ್. ಮೂಲತಃ ಕುಂದಾಪುರದ ಬಸ್ರೂರಿನವರು. ಸದ್ಯ ಹೊನ್ನಾವರದಲ್ಲಿ ನೆಲೆಸಿರುವ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಜಗದೀಶ್ ರಾವ್ ಬಿ.ಎಸ್. ಹಾಗೂ ವಿನುತಾ ಭಟ್ ದಂಪತಿ ಪುತ್ರ. ಹೊನ್ನಾವರದ ಎಸ್‌ಡಿಎಂ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ವ್ಯಾಸಂಗ ನಡೆಸುತ್ತಿರುವ ಸಮರ್ಥ್ ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾನೆ.
ಸಮರ್ಥ್ ಅವರಿಗೆ ನಾಲ್ಕು ವರ್ಷ ತುಂಬುತ್ತಿದ್ದಂತೆ ಪಾಲಕರು ಎಲ್‌ಕೆಜಿಗೆ ಸೇರಿಸಿದರು. ಬರೆಯಲು ಕಷ್ಟವಾದರೂ ಜ್ಞಾಪಕ ಶಕ್ತಿ ಉತ್ತಮವಾಗಿತ್ತು. ಕ್ಯಾಲೆಂಡರ್‌ನಲ್ಲಿನ 12 ತಿಂಗಳುಗಳ ದಿನಾಂಕ, ದಿನ, ರಜಾದಿನಗಳನ್ನು ಗಮನಿಸಿದ ಬಳಿಕ ಯಾವುದೇ ದಿನಾಂಕವನ್ನು ಕೇಳಿದರೆ ವಾರವನ್ನು ಹೇಳುವ ಚಾಕಚಕ್ಯತೆ ಇವರದ್ದು. ಮಗ ಆಟ ಆಡಲಿ ಎಂಬ ಕಾರಣಕ್ಕೆ ಕೇರಂ ಮತ್ತು ಚೆಸ್ ಎರಡನ್ನೂ ಮುಂದಿಟ್ಟಾಗ ಸಮರ್ಥ್ ಆಯ್ಕೆ ಮಾಡಿಕೊಂಡಿದ್ದು ಚೆಸ್. ಇದರಲ್ಲಿ ಪಳಗಿದ ಸಮರ್ಥ್ ಎಸ್‌ಜಿಎಫ್ಐನ ಕ್ಲಸ್ಟರ್ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದರು. “ಸೋಲೇ ಗೆಲುವಿನ ಸೋಪಾನ’ ಎಂದು ತಿಳಿದುಕೊಂಡು ಎದೆಗುಂದದೆ ಮುನ್ನುಗ್ಗಿದರು. ಚೆಸ್‌ನಲ್ಲಿನ ಆತನ ಆಸಕ್ತಿಯನ್ನು ಗಮನಿಸಿ ಪೋಷಕರು ಎಸ್‌ಡಿಎಂ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕರಾಗಿದ್ದ ದಿ| ವಿ. ಆರ್. ಶಾಸ್ತ್ರಿ ಅವರಿಂದ ಮಾರ್ಗದರ್ಶನ ಕೊಡಿಸಿದರು. ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನೂ ಪಡೆದರು.
Related Articles
2017ರಲ್ಲಿ ಸ್ಲೋವಾಕಿಯಾ ಆಯೋಜಿಸಿದ್ದ ಒಎಂಡಿ ಡಿಸ್ಟ್ರೋ ಒಪೆ-ನೆಟ್ ವಿಶ್ವಮಟ್ಟದ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. 2018ರಲ್ಲಿ ಸ್ಲೋವಾಕಿಯಾ ಆಯೋಜಿಸಿದ್ದ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಇತರ ಇಬ್ಬರು ಅಂಗವಿಕಲರೊಂದಿಗೆ ಭಾಗವಹಿಸಿ ಪಂದ್ಯಾವಳಿಯ ಚಾಂಪಿಯನ್ ಆಗಿದ್ದಲ್ಲದೇ ಭಾರತೀಯ ತಂಡ ಪ್ರಥಮ ಬಹುಮಾನ ಪಡೆಯಿತು.
Advertisement
ಈ ವರೆಗೆ ಸಮರ್ಥ್ 80ಕ್ಕೂ ಅಧಿಕ ಚೆಸ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ 30 ತಾಲೂಕು, ಜಿಲ್ಲಾ ಮತ್ತು ಅಂತರ್ ಜಿಲ್ಲಾ ಮಟ್ಟ, 26 ರಾಜ್ಯಮಟ್ಟ, 8 ರಾಷ್ಟ್ರೀಯ ಮಟ್ಟ, 2 ಅಂತಾರಾಷ್ಟ್ರೀಯ ಮಟ್ಟ, 4 ಐಪಿಸಿಎ ವಿಶ್ವ ಚೆಸ್, ಯುಎಸ್‌ಎಯಲ್ಲಿ ನಡೆದ ಅಂಗವಿಕಲರಿಗಾಗಿ ಚಾಂಪಿಯನ್‌ಶಿಪ್ ಮತ್ತು ಒಂದು ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ತನ್ನ ಮಗನನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಬ್ಯಾಂಕಿನಲ್ಲಿ ಉನ್ನತ ಹುದ್ದೆಗೆ ಬಡ್ತಿ ದೊರೆತರೂ ಬಡ್ತಿ ಪಡೆಯದೆ ಮಗನಿಗೆ ಉತ್ತಮ ಶಿಕ್ಷಣ ಮತ್ತು ತರಬೇತಿ ಕೊಡಿಸುತ್ತಾ ಹಲವಾರು ಪಂದ್ಯಾವಳಿಗಳಿಗೆ ತಾವೇ ಸ್ವತಃ ಕರೆದೊಯ್ಯುತ್ತಿದ್ದಾರೆ.
ವಿಶ್ವನಾಥನ್ ಆನಂದ್ ಜತೆ ಆಡುವಾಸೆ5 ಬಾರಿ ವಿಶ್ವ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ ಆನಂದ ಅವರು ನನಗೆ ಆದರ್ಶ. ಒಂದು ದಿನ ಅವರ ಜೊತೆ ಆಡುವುದಲ್ಲದೇ ಅವರಂತೆಯೇ ಆಗಬೇಕೆಂಬ ಆಸೆ ಇದೆ ಎನ್ನುತ್ತಾರೆ ಸಮರ್ಥ್.
ಎಂ.ಎಸ್.ಶೋಭಿತ್, ಮೂಡ್ಕಣಿ, ಹೊನ್ನಾವರ