ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಅವರು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಅಪರ್ಣಾ ಅವರು ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಹೆಂಡತಿಯ ಮಗ ಪ್ರತೀಕ್ ಯಾದವ್ ಅವರ ಪತ್ನಿ. ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮೊದಲ ಪತ್ನಿಯ ಮಗ.
ಅಪರ್ಣಾ ಯಾದವ್ ಅವರು, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಯಾವಾಗಲೂ ಪ್ರಭಾವಿತಳಾಗಿದ್ದೇನೆ ಮತ್ತು ರಾಷ್ಟ್ರದ ಹಿತಾಸಕ್ತಿ ಯಾವಾಗಲೂ ತನ್ನ ಆದ್ಯತೆಯಾಗಿದೆ ಎಂದು ಹೇಳಿದರು.
ಅಪರ್ಣಾ ಬಿಜೆಪಿ ಬಿಜೆಪಿಗೆ ಸೇರುವ ಬಗ್ಗೆ ಹಲವು ದಿನಗಳಿಂದ ಊಹಾಪೋಹಗಳು ಇದ್ದವು ಮತ್ತು ಅಖಿಲೇಶ್ ಯಾದವ್ ಅವರು ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಕ್ಷದ ನೆಲೆಯನ್ನು ಒಟ್ಟುಗೂಡಿಸಲು ಹೋರಾಟ ಮಾಡುತ್ತಿರುವ ಸಮಯದಲ್ಲಿ ಎಸ್ ಪಿ ಯ ಕೌಟುಂಬಿಕ ಬಿರುಕುಗಳನ್ನು ಈ ಬೆಳವಣಿಗೆ ಎತ್ತಿ ತೋರಿಸಿದೆ.
ಅಪರ್ಣಾ ಅವರು 2017 ರ ಚುನಾವಣೆಯಲ್ಲಿ ಲಕ್ನೋನಿಂದ ಸ್ಪರ್ಧಿಸಿ ಬಿಜೆಪಿಯ ರೀಟಾ ಬಹುಗುಣ ಜೋಶಿ ವಿರುದ್ಧ ಸೋತಿದ್ದರು.