ಲಕ್ನೋ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಗದ್ದುಗೆ ಏರಿದ ಕೂಡಲೇ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಮತ್ತೊಂದೆಡೆ ಯೋಗಿ ಜಿಂದಾಬಾದ್ ಎಂದು ಘೋಷಣೆ ಕೂಗಿದ ಬಾಲಕನನ್ನು ಸಮಾಜವಾದಿ ಪಕ್ಷದ ಮುಖಂಡನೊಬ್ಬ ಶೂಟ್ ಮಾಡಿ ಹತ್ಯೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಒಂದು ವಾರ ಕಳೆಯುವಷ್ಟರಲ್ಲಿ ಭಾನುವಾರ ರಾತ್ರಿ ಅಸ್ಮೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮಧನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವಿನಿಕೆತ್ ಅಲಿಯಾಸ್ ನಾನ್ ಹೆ (17) ಎಂಬ ಬಾಲಕನನ್ನು ಶಿಶುಪಾಲ್ ಸಿಂಗ್ ಎಂಬಾತ ಗುಂಡಿಟ್ಟು ಕೊಂದಿರುವುದಾಗಿ ನ್ಯೂಸ್ 18 ವರದಿ ಮಾಡಿರುವುದಾಗಿ ಐಎಎನ್ಎಸ್ ತಿಳಿಸಿದೆ.
ಬಿಜೆಪಿ ಮುಖಂಡ ಮೋನು ಸಿಂಗ್ ಕಿರಿಯ ಸಹೋದರ ನಾನ್ ಹೆ ಭಾನುವಾರ ರಾತ್ರಿ ಯೋಗಿ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದಾಗಿ ವರದಿ ವಿವರಿಸಿದೆ.
ಸಮಾಜವಾದಿ ಪಕ್ಷದ ಮುಖಂಡ ಶಿಶುಪಾಲ್ ಸಿಂಗ್ ಹೆಂಡತಿ ಉಷಾ ರಾಣಿ ಜಿಲ್ಲಾ ಪಂಚಾಯ್ತಿ ಸದಸ್ಯೆ, ಇವರು ದಾರಿಯಲ್ಲಿ ಹೋಗುತ್ತಿದ್ದಾಗ ನಾನ್ ಹೆ ಘೋಷಣೆ ಕೂಗಿದ್ದನ್ನು ಕೇಳಿಸಿಕೊಂಡು ಶೂಟ್ ಮಾಡಿರುವುದಾಗಿ ವರದಿ ತಿಳಿಸಿದೆ. ಇದು ಘೋಷಣೆ ಕೂಗಿದ್ದಕ್ಕೆ ಸಂಬಂಧಿಸಿದ್ದಲ್ಲ, ರಾಜಕೀಯ ದ್ವೇಷಕ್ಕೆ ಸಂಬಂಧಿಸಿದ್ದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.