Advertisement

ಸಮಾಜ ಸೇವೆಯಲ್ಲೇ ಗೌರವ

06:15 AM Apr 15, 2018 | Team Udayavani |

ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾದರೂ ಸಮಾಜ ಸೇವೆಯ ಮೂಲಕ ಸದಾ ಚಟುವಟಿಕೆಯಲ್ಲಿರುವವರು ಕೆ. ಲೀಲಾಧರ ಶೆಟ್ಟಿ.
 
ರಾಜಕೀಯದತ್ತ ಹೇಗೆ ಆಕರ್ಷಿತರಾದಿರಿ?
    ಸಮಾಜ ಸೇವೆಯಲ್ಲಿಯೇ ಸಂತೃಪ್ತಿ ಕಾಣುತ್ತಿದ್ದ ನಾನು ಹೊಂದಿದ್ದ ಜನಸಂಪರ್ಕದ ಕಾರಣ, ಬೆಂಬಲಿಗರ ಒತ್ತಾಯಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸಿದೆ. 1994ರಲ್ಲಿ ಕೆಸಿಪಿ ಮತ್ತು ಜನತಾ ದಳದಲ್ಲಿ ಸ್ಪರ್ಧಿಸುವ ಅವಕಾಶವಿದ್ದರೂ ಕೊನೇ ಕ್ಷಣದಲ್ಲಿ ಟಿಕೆಟ್‌ ವಂಚಿತನಾಗಿ ಪಕ್ಷೇತರನಾಗಿ ಸ್ಪರ್ಧಿಸಿದೆ. 15 ವರ್ಷಗಳ ಬಳಿಕ ಅಂದರೆ 2009ರಲ್ಲಿ ಜೆಡಿಎಸ್‌ ಮೂಲಕ ಸ್ಪರ್ಧಿಸುವಂತಾಯಿತು.

Advertisement

ರಾಜಕೀಯ ಹಿಡಿಸಿತೇ?
     ಸಮಾಜ ಸೇವಕನಾಗಿರುವ ನನಗೆ ರಾಜಕೀಯ ಕ್ಷೇತ್ರ ಹಿಡಿಸದು ಎಂದು ಹಲವರು ಹೇಳಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಿದ ಬಳಿಕ ಅದು ಹೌದೆಂದು ಮನದಟ್ಟಾಗಿದೆ. ಸಮಾಜ ಸೇವೆಯಲ್ಲಿ ಸಿಗುವ ಗೌರವ ರಾಜಕೀಯ ಕ್ಷೇತ್ರದಲ್ಲಿ ಸಿಗದು ಎಂಬುದು ಅರಿವಿಗೆ ಬಂದಿದೆ. ಈ ಕಾರಣದಿಂದಾಗಿ ರಾಜಕೀಯ ಕ್ಷೇತ್ರದಿಂದ ಹಿಂದೆ ಸರಿದಿದ್ದೇನೆ.

ಇಂದಿನ ರಾಜಕೀಯ ಪರಿಸ್ಥಿತಿಯ ಬಗ್ಗೆ… ?
     ಪ್ರಸಕ್ತ ರಾಜಕೀಯ ವ್ಯವಸ್ಥೆಗೂ ನನ್ನ ಸಮಾಜ ಸೇವೆಗೂ ತಾಳೆಯೇ ಆಗುವುದಿಲ್ಲ. ಆ ಕಾರಣದಿಂದಾಗಿ ರಾಜಕೀಯದಲ್ಲಿ ಸಕ್ರಿಯನಾಗಿಲ್ಲ. ಜಾತಿ ಬಲ, ಹಣ ಬಲದ ಆಮಿಷಗಳನ್ನು ಒಡ್ಡಿ  ಮತದಾರರನ್ನು ಓಲೈಸುವುದು, ಮತ ಗಿಟ್ಟಿಸಿಕೊಳ್ಳುವುದು ಮಾಮೂಲಾಗಿದೆ. ಜನರು ಯಾವುದೇ ಆಮಿಷಕ್ಕೊಳಗಾಗದೆ ಜಾತಿ, ಧರ್ಮ, ಮತ, ಪಕ್ಷಕ್ಕೆ ಒತ್ತು ನೀಡದೇ ಸಜ್ಜನರನ್ನು ಆಯ್ಕೆ ಮಾಡುವಂತೆ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದೇನೆ.

ಕಾಪು ತಾಲೂಕು ರಚನೆಯಲ್ಲಿ ನಿಮ್ಮ ಪಾತ್ರ ?
     ಕಾಪು ತಾಲೂಕು ರಚನೆ ಬಗ್ಗೆ ಹಾಲಿ ಶಾಸಕರಲ್ಲಿ ಮನವಿ ಮಾಡಿದಾಗ ಅದಕ್ಕೆ ಜನಬೆಂಬಲ ದೊರಕಿಸಲು ಪ್ರಯತ್ನಿಸಿ ಎಂದರು. ಜನಬೆಂಬಲ ಪಡೆಯುವ ನಿಟ್ಟಿನಲ್ಲಿ ಎಲ್ಲ ಗ್ರಾ.ಪಂ.ಗಳಲ್ಲೂ ಎರಡೆರಡು ಬಾರಿ ಸಭೆ ನಡೆಸಿ, ಸರ್ವ ಪಕ್ಷಗಳ ಬೆಂಬಲ ಪಡೆದು ಹೋರಾಟಕ್ಕೆ ಚಾಲನೆ ನೀಡಲಾಯಿತು. ಹೆಜಮಾಡಿಯಿಂದ ಉದ್ಯಾವರ ವರೆಗೆ ಕಾಲ್ನಡಿಗೆ ಜಾಥಾ, ಪತ್ರ ಚಳವಳಿ ಸಹಿತ ಎಲ್ಲರ ಸಹಕಾರ ದೊರಕಿದ ಕಾರಣದಿಂದಾಗಿ ಆರೇ ತಿಂಗಳಲ್ಲಿ ಕಾಪು ತಾಲೂಕು ಘೋಷಣೆಯಾಗಿದೆ.

ನಿಮ್ಮಿಷ್ಟದ ಕ್ಷೇತ್ರ ಯಾವುದು?
      ಸಮಾಜ ಸೇವೆ. ಅಂದೂ ಅದೇ; ಇಂದೂ ಅದೇ. ಕಾಲೇಜು ಜೀವನದಿಂದಲೇ ಸಮಾಜ ಸೇವೆಯಲ್ಲಿ ತೊಡಗಿದವನು ನಾನು. ಕಳೆದ 40 ವರ್ಷಗಳಿಂದ ಇದರಲ್ಲಿ ಸಂತೃಪ್ತಿ ಕಾಣುತ್ತಿದ್ದೇನೆ. ಕಲೆಯೂ ನನ್ನ ಇಷ್ಟದ ಕ್ಷೇತ್ರ. ಕಾಪು ರಂಗತರಂಗ ನಾಟಕ ತಂಡದ ಮೂಲಕ ಸ್ಥಳೀಯ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಪ್ರೋತ್ಸಾಹ, ತ್ರಿಮೂರ್ತಿ ಯಕ್ಷಗಾನ ಕಲಾ ಕೇಂದ್ರ ಸ್ಥಾಪನೆ ಮೂಲಕ ಯಕ್ಷಗಾನ ತರಬೇತಿ, ಬ್ರಹ್ಮಲಿಂಗೇಶ್ವರ ಭಜನ ಮಂಡಳಿ ಮೂಲಕ ಭಜನೆ ಬಗ್ಗೆ ಜಾಗೃತಿ, ಚಕ್ರವರ್ತಿ ಕಲ್ಚರಲ್‌ ಕ್ಲಬ್‌ ಸ್ಥಾಪನೆ ಮೂಲಕ ಗ್ರಾಮೀಣ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

Advertisement

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next