ಮೆಲ್ಬೊರ್ನ್: ಚರಂಡಿ ಯಾವಾಗ ರಿಪೇರಿ ಮಾಡಿಕೊಡುತ್ತೀರಿ, ನಮ್ಮ ಏರಿಯಾಗೆ ಹೆಚ್ಚುವರಿ ಬಸ್‌ಗಳನ್ನು ಯಾವಾಗ ಒದಗಿಸುತ್ತೀರಿ, ಮುಂದಿನ ಎಲೆಕ್ಷನ್‌ನಲ್ಲಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೀರಿ, ಭ್ರಷ್ಟಾಚಾರ ಆರೋಪದ ಕುರಿತು ಏನನ್ನುತ್ತೀರಿ? ಇಂಥ ಪ್ರಶ್ನೆಗಳಿಗೆ ನಮ್ಮೂರಿನ ರಾಜಕಾರಣಿಗಳು ಉತ್ತರಿಸಲು ತಡವರಿಸಬಹುದು ಅಥವಾ ಸಹವಾಸವೇ ಬೇಡ ಎಂದು ಜಾರಿಕೊಳ್ಳಬಹುದು. ಆದರೆ, ಇದಕ್ಕೆಲ್ಲ ಪಟಪಟನೆ ಉತ್ತರಿಸಿ, ಹುಬ್ಬೇರುವಂತೆ ಮಾಡುವ ಹೊಸ ರಾಜಕಾರಣಿಯೊಬ್ಬನ ಪ್ರವೇಶವಾಗಲಿದೆ. ಅವನ್ಯಾರು ಗೊತ್ತಾ?
ಕೃತಕ ಬುದ್ಧಿಮತ್ತೆ (ಆರ್ಟಿಫಿಷಲ್ ಇಂಟೆಲಿಜೆನ್ಸ್) ಹೊಂದಿರುವ ಸ್ಯಾಮ್. ಇದ್ಯಾರು, ಯಾವ ಪಕ್ಷಕ್ಕೆ ಸೇರಿದವನು ಎಂದು ಯೋಚಿಸುತ್ತಿದ್ದೀರಾ? ಈ ಸ್ಯಾಮ್ ಹೊಸದಾಗಿ ಸೃಷ್ಟಿಯಾಗಿರುವ ರೋಬೋ ರಾಜಕಾರಣಿ. ಇವನನ್ನು ಭಾವೀ ರಾಜಕಾರಣಿ ಎಂದರೂ ತಪ್ಪಿಲ್ಲ.
ಹೌದು, ಇತ್ತೀಚೆಗಷ್ಟೇ, ಸೌದಿ ಅರೇಬಿಯಾದಲ್ಲಿ ಸೋಫಿಯಾ ಎಂಬ ರೋಬೋ ಯುವತಿಯೊಬ್ಬಳು ಜನ್ಮ ತಾಳಿದ್ದು ಜಗತ್ತಿನಾದ್ಯಂತ ಸುದ್ದಿಯಾದ ಬೆನ್ನಲ್ಲೇ ಇದೀಗ, ರೋಬೋ ರಾಜಕಾರಣಿಯೊಬ್ಬನು ಸೃಷ್ಟಿಯಾಗಿದ್ದಾನೆಂದು ಟೆಕ್ ಇನ್ ಏಷ್ಯಾ ವರದಿ ಮಾಡಿದೆ. ಈ ಕೃತಕ ಬುದ್ಧಿಮತ್ತೆ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್)ಯ ರಾಜಕಾರಣಿಯ ಹೆಸರು ಸ್ಯಾಮ್.ನ್ಯೂಜಿಲೆಂಡ್‌ನ 49 ವರ್ಷದ ಉದ್ಯಮಿ ನಿಕ್ ಗೆರಿಟೆನ್ ಎಂಬಾತ ವಿಜ್ಞಾನಿಗಳಿಂದ ಇದನ್ನು ತಯಾರಿಸಿಕೊಂಡಿದ್ದಾರೆ. ಸ್ಥಳೀಯ ವಿಚಾರಗಳ ಕುರಿತು ಪ್ರಶ್ನೆ ಮಾಡಿದರೆ, ಸ್ಯಾಮ್ ರಾಜಕಾರಣಿಯ ಗತ್ತಿನಲ್ಲೇ ಉತ್ತರಿಸುವ ಸಾಮರ್ಥ್ಯ ಪಡೆಯಲಿದ್ದಾನೆ.
ಆದರೆ, ಸದ್ಯದ ಪರಿಸ್ಥಿತಿಯಲ್ಲಿ, ಈ ಸ್ಯಾಮ್, ತಾಂತ್ರಿಕವಾಗಿ ಪರಿಪೂರ್ಣನಾಗಿದ್ದರೂ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಇನ್ನೂ ಮುಗ್ಧನಾಗಿಯೇ ಇದ್ದಾನೆ! ಅಂದರೆ, ಈತನ ಕೃತಕ ಬುದ್ಧಿಮತ್ತೆಗೆ ನ್ಯೂಜಿಲೆಂಡ್ ದೇಶದ ಸಂಸ್ಕೃತಿ, ಆಚಾರ, ವಿಚಾರ, ಇತಿಹಾಸ, ರಾಜಕೀಯ ವ್ಯವಸ್ಥೆ, ವಿವಿಧ ಸರ್ಕಾರಗಳು ಕೈಗೊಂಡ ಯೋಜನೆಗಳು ಹಾಗೂ ಸುಧಾರಣೆಗಳು, ಸಂವಿಧಾನ, ಸರ್ಕಾರಿ ನಿಯಮಗಳು… ಹೀಗೆ ನೂರಾರು ವಿಚಾರಗಳನ್ನು ದತ್ತಾಂಶ (ಡೇಟಾ) ಮಾದರಿಯಲ್ಲಿ ಅಳವಡಿಸಲಾಗುತ್ತಿದೆ.
ಇದರ ಜತೆಗೆ ಜನರ ಜತೆಗೆ ಹೇಗೆ ಒಡನಾಟ ಮಾಡಬೇಕು, ಹೇಗೆ ಅವರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂಬುದನ್ನೂ ಆತನಿಗೆ ಹೇಳಿಕೊಡಲಾಗುತ್ತಿದೆ. ಇದರ ಪ್ರಾಥಮಿಕ ಹಂತವಾಗಿ, ಫೇಸ್‌ಬುಕ್ ಮೆಸೆಂಜರ್‌ನ ಮೂಲಕ ಜನ ಸಾಮಾನ್ಯರ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಆತನಿಗೆ ಹೇಳಿಕೊಡಲಾಗುತ್ತಿದೆ.
ಈ ದತ್ತಾಂಶ ಪೂರೈಕೆ ಹಾಗೂ ತರಬೇತಿಗಳು ಪೂರ್ಣಗೊಳ್ಳಲು ಸುಮಾರು ಮೂರು ವರ್ಷಗಳು ಬೇಕಿದ್ದು 2020ರಲ್ಲಿ ನಡೆಯುವ ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆ ಹೊತ್ತಿಗೆ ಈ ಸ್ಯಾಮ್ ಪರಿಪೂರ್ಣ ರಾಜಕಾರಣಿಯಾಗಿ ಹೊರಹೊಮ್ಮಲಿದ್ದಾನೆ ಎಂದು ನಿಕ್ ತಿಳಿಸಿದ್ದಾರೆ. 2020ರ ಹೊತ್ತಿಗೆ ರೋಬೋಗಳೂ ಚುನಾವಣೆಗೆ ಸ್ಪರ್ಧಿಸಬಹುದು ಎನ್ನುವ ಮೂಲಕ ನಿಕ್ ಅವರು, ಕಾನೂನಾತ್ಮಕ ಸಮ್ಮತಿ ಸಿಕ್ಕರೆ ಸ್ಯಾಮ್‌ನನ್ನು ಕಣಕ್ಕಿಳಿಸುವ ಸುಳಿವು ನೀಡಿದ್ದಾರೆ.
ಏನಿದು ಕೃತಕ ಬುದ್ಧಿಮತ್ತೆ ?
ಸಾಮಾನ್ಯವಾಗಿ ಮನುಷ್ಯನೊಬ್ಬ ಮಾಡುವ ಎಲ್ಲಾ ಕೆಲಸಗಳನ್ನು ಯಂತ್ರಗಳು ಸ್ವತಂತ್ರವಾಗಿ ಮಾಡುವಂತೆ ಪ್ರೇರೇಪಿಸುವ ವೈಜ್ಞಾನಿಕ ತಂತ್ರಜ್ಞಾನವೇ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್). ಇದನ್ನು ಕೃತಕ ಮೆದುಳು ಎಂದೂ ಪರಿಗಣಿಸುವುದುಂಟು. ಅಂದರೆ, ಮನುಷ್ಯನಿಗೆ ಇರುವ ದೃಶ್ಯ ಗ್ರಹಿಕೆ, ವಾಕ್ ಗ್ರಹಿಕೆ, ಸ್ವತಂತ್ರ ನಿರ್ಧಾರ ಸಾಮರ್ಥ್ಯ, ವಿವಿಧ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವ ಗುಣ ಮುಂತಾದ ಚಾತುರ್ಯಗಳನ್ನು ಯಂತ್ರಗಳಲ್ಲಿಯೂ(ರೋಬೋಗಳೂ) ಅಳವಡಿಸಲಾಗುತ್ತದೆ. ಈ ಕೃತಕ ಬುದ್ಧಿಮತ್ತೆಯ ಸಹಾಯದಿಂದಲೇ ಯಂತ್ರಮಾನವರು ಅಸಾಧಾರಣ ಕಾರ್ಯಗಳನ್ನೂ ಮಾಡುವಂತೆ ಮಾಡಬಹುದಾಗಿದೆ.