Advertisement

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

11:22 PM Apr 24, 2024 | Team Udayavani |

ಹೊಸದಿಲ್ಲಿ: ಸಂಪತ್ತಿನ ಮರುಹಂಚಿಕೆ ಬಗ್ಗೆ ರಾಹುಲ್‌ ಗಾಂಧಿ ನೀಡಿರುವ ಹೇಳಿಕೆ ಈಗಾಗಲೇ ವಿವಾದದ ಸ್ವರೂಪ ಪಡೆದಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷದ ಸಾಗರೋತ್ತರ ಮುಖ್ಯಸ್ಥ ಸ್ಯಾಮ್‌ ಪಿತ್ರೋಡಾ ನೀಡಿರುವ ಹೇಳಿಕೆ ಬಿರುಗಾಳಿ ಎಬ್ಬಿಸಿದೆ.

Advertisement

ಅಮೆರಿಕದಲ್ಲಿ ನಾಗರಿಕರ ಪಿತ್ರಾರ್ಜಿತ ಆಸ್ತಿಯಲ್ಲಿ ಶೇ. 55ನ್ನು ಅಲ್ಲಿನ ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ, ಇಂತಹ ವಿಷಯಗಳ ಬಗ್ಗೆ ಭಾರತದಲ್ಲೂ ಚರ್ಚೆಯಾಗಬೇಕು ಎಂದು ಅವರು ಹೇಳಿದ್ದಾರೆ. ಇದರ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು?
ಅಮೆರಿಕದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ಪದ್ಧತಿ ಇದೆ. ವ್ಯಕ್ತಿಯೊಬ್ಬರು ತಮ್ಮ ಒಟ್ಟು ಆಸ್ತಿಯಲ್ಲಿ ಶೇ. 45ರಷ್ಟನ್ನು ಮಾತ್ರ ತಮ್ಮ ಮಕ್ಕಳಿಗೆ ವರ್ಗಾಯಿಸಬಹುದು. ಉಳಿದ ಶೇ. 55 ಆಸ್ತಿಯನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಅಂದರೆ ನಿಮ್ಮ ಮರಣಾನಂತರ ನಿಮ್ಮ ಆಸ್ತಿಯಲ್ಲಿ ಅರ್ಧಕ್ಕೂ ಹೆಚ್ಚು ಸರಕಾರಕ್ಕೆ ಹೋಗುತ್ತದೆ. ಇದು ಕುತೂಹಲಕಾರಿ ಕಾನೂನು. ಈ ಬಗ್ಗೆ ಭಾರತದಲ್ಲಿ ಚರ್ಚೆಯಾಗಬೇಕು ಎಂದು ಪಿತ್ರೋಡಾ ಎ. 23ರ ಟಿವಿ ಸಂದರ್ಶನದಲ್ಲಿ ಹೇಳಿದ್ದರು.

ಇದು ವಿವಾದವಾಗುತ್ತಿದ್ದಂತೆ ಪಿತ್ರೋಡಾ ಸ್ಪಷ್ಟನೆ ನೀಡಿ, ನಾನು ಅಮೆರಿಕದಲ್ಲಿರುವ ಕಾನೂನನ್ನು ಉಲ್ಲೇಖೀಸಿದ್ದೇನೆ ಅಷ್ಟೆ. ಇಂತಹ ವಿಷಯಗಳು ಚರ್ಚೆಯಾಗಬೇಕು ಎನ್ನುವುದು ನನ್ನ ನಿಲುವು. ಇದು ಕಾಂಗ್ರೆಸ್‌ ನೀತಿಗೆ ಸಂಬಂಧಿಸಿದ್ದಲ್ಲ ಎಂದಿದ್ದಾರೆ.

ಅಂತರ ಕಾಯ್ದುಕೊಂಡ ಕಾಂಗ್ರೆಸ್‌
ಪಿತ್ರೋಡಾ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ. ಪ್ರಧಾನಿ ಮೋದಿಯವರ ದ್ವೇಷಪೂರ್ಣ ಪ್ರಚಾರ ವಿವಾದದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಪಿತ್ರೋಡಾ ಹೇಳಿಕೆಯನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿದೆ. “ಪಿತ್ರೋಡಾ ಹೇಳಿಕೆ ಕಾಂಗ್ರೆಸ್‌ನ ನಿಲುವು ಎಂದು ಭಾವಿಸಬೇಕಿಲ್ಲ’ ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ. ಅಂಥ ಉದ್ದೇಶವಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ಕಾಂಗ್ರೆಸ್‌ನಿಂದ ದೇಶ ನಾಶ: ಬಿಜೆಪಿ
ಪಿತ್ರೋಡಾ ಹೇಳಿಕೆಯನ್ನು ಬಿಜೆಪಿ ಬಲವಾಗಿ ಟೀಕಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ, “ಕಾಂಗ್ರೆಸ್‌ ಪಕ್ಷವು ಭಾರತವನ್ನು ನಾಶ ಮಾಡಲು ಹೊರಟಿದೆ. ಸಂಪತ್ತು ಮರುಹಂಚಿಕೆಯ ಜತೆಗೆ ಕಾಂಗ್ರೆಸ್‌ ಶೇ. 50 ಪಿತ್ರಾರ್ಜಿತ ತೆರಿಗೆ ವಿಧಿಸಲು ಮುಂದಾಗಿದೆ. ಕಾಂಗ್ರೆಸ್‌ ಗೆದ್ದರೆ ನಮ್ಮ ಎಲ್ಲ ಆಸ್ತಿಯಲ್ಲಿ ಅರ್ಧವನ್ನು ಕಬಳಿಸಲಿದೆ’ ಎಂದಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಿಂದ ಸಂಪತ್ತು ಮರುಹಂಚಿಕೆಯ ಪ್ರಸ್ತಾವವನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ. ಅನುರಾಗ್‌ ಠಾಕೂರ್‌, ನಿರ್ಮಲಾ ಸೀತಾರಾಮನ್‌ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬದುಕಿದ್ದಾಗಲೂ, ಬದುಕು ಮುಗಿದ ಮೇಲೂ ಜನರನ್ನು ಲೂಟಿ ಮಾಡುವುದೇ (ಜಿಂದಗಿ ಕೇ ಸಾಥ್‌ ಭೀ, ಜಿಂದಗಿ ಕೇ ಬಾದ್‌ ಭೀ) ಕಾಂಗ್ರೆಸ್‌ನ ಮಂತ್ರ. ಕಾಂಗ್ರೆಸ್‌ ಪಿತ್ರಾರ್ಜಿತ ಆಸ್ತಿ ತೆರಿಗೆ ಹೇರುವುದಾಗಿ ಹೇಳುತ್ತಿದೆ. ನೀವು ಶ್ರಮಪಟ್ಟು ಗಳಿಸಿದ ಆಸ್ತಿಯನ್ನು ನಿಮ್ಮ ಮಕ್ಕಳು ಪಡೆಯುವುದಿಲ್ಲ. ಕಾಂಗ್ರೆಸ್‌ನ ವಜ್ರಮುಷ್ಟಿ ಅದನ್ನು ನಿಮ್ಮಿಂದ ದೂರ ಒಯ್ಯುತ್ತದೆ.
-ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next