ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್ ಕೂಟವು ಇಂದು ಅದ್ದೂರಿಯಾಗಿ ಅಂತ್ಯಕಂಡಿದೆ. ಪಾಕಿಸ್ಥಾನ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್ ತಂಡವು ಎರಡನೇ ಬಾರಿಗೆ ಟಿ20 ಚಾಂಪಿಯನ್ ಆಗಿ ಮೂಡಿ ಬಂದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನವು 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಐದು ವಿಕೆಟ್ ಕಳೆದುಕೊಂಡು ಒಂದು ಓವರ್ ಬಾಕಿ ಇರುವಂತೆ ಜಯ ಸಾಧಿಸಿತು.
ಫೈನಲ್ ಪಂದ್ಯದಲ್ಲಿ ನಾಲ್ಕು ಓವರ್ ನಲ್ಲಿ ಕೇವಲ 12 ರನ್ ಬಿಟ್ಟುಕೊಟ್ಟು ಮೂರು ವಿಕೆಟ್ ಕಬಳಿಸಿದ ಸ್ಯಾಮ್ ಕರ್ರನ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅಲ್ಲದೆ ಕೂಟದಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ಸಾಧನೆ ಮಾಡಿದ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ಒಲಿಯತು.
ಕಳೆದ ಬಾರಿಯ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯದ ಕರ್ರನ್ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡಿದ್ದರು. ಆದರೆ ಈ ಬಾರಿ ಅದ್ಭುತ ಬೌಲಿಂಗ್ ಮಾಡಿದ ಕರ್ರನ್ ಸರಣಿ ಶ್ರೇಷ್ಢ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.