ನ್ಯೂಯಾರ್ಕ್: ಕೃತಕ ಬುದ್ಧಿಮತ್ತೆ ಆಧಾರಿತ ಕಂಪನಿ ಓಪನ್ ಎಐನ ಪ್ರಮುಖ ಹುದ್ದೆಗಳಿಂದ ಅಚ್ಚರಿಯ ಬೆಳವಣಿಗೆಯೆಂಬಂತೆ ಇತ್ತೀಚೆಗೆ ವಜಾಗೊಂಡ ಸಿಇಒ ಸ್ಯಾಮ್ ಆಲ್ಟ್ ಮ್ಯಾನ್ ಮತ್ತು ಮಾಜಿ ಅಧ್ಯಕ್ಷ ಗ್ರೆಗ್ ಬ್ರಾಕ್‌ಮ್ಯಾನ್ ಅವರನ್ನು ಈಗ ಮೈಕ್ರೋಸಾಫ್ಟ್ ಕಂಪನಿ ಕೆಂಪುಹಾಸು ಹಾಕಿ ಸ್ವಾಗತಿಸಿದೆ.
ಇವರಿಬ್ಬರನ್ನೂ ತಮ್ಮ ಕಂಪನಿಗೆ ಸೇರ್ಪಡೆ ಮಾಡಿಕೊಂಡಿರುವ ಬಗ್ಗೆ ಸೋಮವಾರ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಅವರೇ ಘೋಷಣೆ ಮಾಡಿದ್ದಾರೆ. ಈ ಇಬ್ಬರ ನೇತೃತ್ವದಲ್ಲಿ ಮೈಕ್ರೋಸಾಫ್ಟ್ ವತಿಯಿಂದ ಕೃತಕ ಬುದ್ಧಿಮತ್ತೆ ಆಧಾರಿತ ಹೊಸ ಸಂಶೋಧನಾ ತಂಡ ಸ್ಥಾಪಿಸಲಾಗುತ್ತದೆ. ಅದಕ್ಕೆ ಆಲ್ಟ್ ಮ್ಯಾನ್ ಸಿಇಒ ಆಗಿ ಮುಂದುವರಿಯಲಿದ್ದಾರೆ ಎಂದು ಎಕ್ಸ್‌ನಲ್ಲಿ (ಟ್ವಿಟರ್) ಪ್ರಕಟಿಸಿದ್ದಾರೆ.
ಇದಲ್ಲದೇ, ಓಪನ್ ಎ.ಐ. ಕಂಪನಿಯ ಜತೆ ಸಹಭಾಗಿತ್ವ ಮುಂದುವರಿಸುವುದಾಗಿಯೂ ಹೇಳಿದ್ದಾರೆ.ಅದನ್ನು ರೀ ಟ್ವೀಟ್ ಮಾಡಿರುವ ಸ್ಯಾಮ್ ಆಲ್ಟ್ ಮ್ಯಾನ್ “ಮಿಷನ್ ಕಂಟಿನ್ಯೂಸ್’ (ಕಾರ್ಯಾಚರಣೆ ಮುಂದುವರಿಯಲಿದೆ) ಎಂದು ಬರೆದುಕೊಂಡಿದ್ದಾರೆ. ಬ್ರಾಕ್‌ಮ್ಯಾನ್ ಕೂಡ ನಾದೆಳ್ಲ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
“ನಾವು ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಿದ್ದೇವೆ ಮತ್ತು ಅದು ಊಹಿಸಲಾಗದ ರೀತಿಯಲ್ಲಿ ಇರಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಇಬ್ಬರು ಮೈಕ್ರೋಸಾಫ್ಟ್ ಗೆಸೇರ್ಪಡೆಯಾಗುತ್ತಲೇ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿವೆ. ಮೈಕ್ರೋಸಾಫ್ಟ್ ನ ಪ್ರಬಲ ಟೀಕಾಕಾರ ಉದ್ಯಮಿ ಎಲಾನ್ ಮಸ್ಕ್ ಅವರು, “ಅವರಿಬ್ಬರು ಇನ್ನು ಟೀಮ್ಸ್ ಅನ್ನು ಬಳಸಬೇಕಾಗುತ್ತದೆ’ ಎಂದು ಕಟಕಿಯಾಡಿದ್ದಾರೆ. ಆಲ್ಟ್ ಮ್ಯಾನ್ ಮತ್ತು ಬ್ರಾಕ್‌ಮ್ಯಾನ್‌ರನ್ನು ಓಪನ್‌ಎಐ ಸಂಸ್ಥೆಯು “ಗೂಗಲ್ ಮೀಟ್’ನಲ್ಲಿ ಸಭೆ ಕರೆದು, ಅಲ್ಲೇ ವಜಾ ಮಾಡಿರುವ ಬಗ್ಗೆ ಘೋಷಣೆ ಮಾಡಿತ್ತು. ಗೂಗಲ್ ಮೀಟ್ ಎನ್ನುವುದು ಮೈಕ್ರೋಸಾಫ್ಟ್ ನ “ಟೀಮ್ಸ್’ನ ಪ್ರತಿಸ್ಪರ್ಧಿಯಾಗಿದೆ.