Advertisement

ಬಾರೋ ಸಾಧಕರ ಕೇರಿಗೆ: ಕಲಾವಿದನ ಬೆಕ್ಕು

05:31 PM May 05, 2020 | mahesh |

ಸಾಲ್ವಡಾರ್‌ ಡಾಲಿ, ಸ್ಪೇನಿನ ಅಗ್ರಮಾನ್ಯ ಸರಿಯಲಿಸ್ಟ್ ಚಿತ್ರಕಾರ. ಹೊಳೆವ ಕಣ್ಣು, ಭಯ ಹುಟ್ಟಿಸುವ ನೋಟ, ಬಯಲು ಹಣೆ, ಮಾವಿನ ಕಾಯಂಥ ಗಲ್ಲ, ಜಿರಳೆ ಮೀಸೆ- ಅದವನ ಚಹರೆ. ಚಿತ್ರ ಬರೆಯುವುದಷ್ಟೇ ಅಲ್ಲದೆ, ಫೋಟೋಗ್ರಫಿ, ಸಿನಿಮಾ, ನಾಟಕ, ಕತೆ- ಕಾವ್ಯ, ಪ್ರಬಂಧಗಳಲ್ಲೂ ತೊಡಗಿಸಿಕೊಂಡಿದ್ದ ಡಾಲಿ, ಒಂದಿಡೀ ತಲೆಮಾರನ್ನು ಪ್ರಭಾವಿಸಿದ ಪ್ರತಿಭಾವಂತ. ಪ್ರತಿಭೆಗೆ ತಕ್ಕಂತೆಯೇ, ಅವನಿಗೆ ಕೆಲವೊಂದು ವಿಚಿತ್ರ ಹವ್ಯಾಸಗಳೂ ಇದ್ದವು.

Advertisement

ಆಸೆಲಾಟ್‌ ಎಂಬ ಚಿರತೆ ಬೆಕ್ಕನ್ನು ಸಾಕಿದ್ದು ಅಂಥ ಹವ್ಯಾಸಗಳಲ್ಲೊಂದು. ಆಸೆಲಾಟ್‌ ಎಂಬುದು, ಮಧ್ಯ ಅಮೆರಿಕದ ದಟ್ಟಕಾಡುಗಳಲ್ಲಿ ಕಂಡುಬರುವ ಪ್ರಾಣಿ. ಆಕಾರ, ಗಾತ್ರ ಬೆಕ್ಕಿನಂತೆ. ಮೈಯ ವಿನ್ಯಾಸ ಚಿರತೆಯಂತೆ! ಪ್ರಾಯಪ್ರಬುದ್ಧವಾದಾಗ, 8ರಿಂದ 15 ಕೆಜಿ ತೂಗುವ ಈ ಕಾಡುಪ್ರಾಣಿ, ಮನೆ ಬೆಕ್ಕಿಗಿಂತ ತುಸು ದೊಡ್ಡದು. ಆದರೆ ಚಿರತೆಯ ಮರಿಗಿಂತ ಚಿಕ್ಕದು. ಕಾಡಿನಲ್ಲಿ ಸಿಗುವ, ತನಗಿಂತ ಚಿಕ್ಕದಾದ, ಹರಿದಾಡುವ ಯಾವುದನ್ನಾದರೂ ತಿಂದು ಇದು ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಇಂಥದೊಂದು ವಿಚಿತ್ರ ಕಾಡುಪ್ರಾಣಿಯನ್ನು, ಡಾಲಿ ತನ್ನ ಮನೆಯಲ್ಲಿಟ್ಟುಕೊಂಡಿದ್ದ. ಆಗೀಗ ವಾಯುವಿಹಾರಕ್ಕೆ ಹೋದಾಗ, ಅದನ್ನು ಕೊಂಡೊಯ್ಯುತ್ತಿದ್ದುದೂ ಉಂಟು. ಹಾಗೊಮ್ಮೆ ನ್ಯೂಯಾರ್ಕಿನ ರೆಸ್ಟಾರೆಂಟೊಂದಕ್ಕೆ ಹೋದಾಗಲೂ,
ಅದನ್ನು ಜೊತೆಗೇ ಕರೆದೊಯ್ದ. ಆ ಪ್ರಾಣಿಯನ್ನು ಮೇಜಿನ ಕಾಲಿಗೆ ಕಟ್ಟಿ, ನಂತರ ಕಾಫಿ ಆರ್ಡರ್‌ ಮಾಡಿದ. ಕಾಫಿಯ ಕಪ್ಪು ಹಿಡಿದು ಬಂದ ಪರಿಚಾರಿಕೆ, ಈ ಚಿರತೆ ಮರಿಯಂತಿದ್ದ ಪ್ರಾಣಿಯನ್ನು ಕಂಡು ಹೌಹಾರಿದಳು. “ಚಿರತೆ! ಚಿರತೆ!’ ಎಂದು ಗಟ್ಟಿಯಾಗಿ ಕೂಗಿಕೊಂಡೂಬಿಟ್ಟಳು. ಡಾಲಿ ಆಕೆಯನ್ನು ಸಮಾಧಾನಪಡಿಸಿ, ಕುರ್ಚಿಯಲ್ಲಿ ಕೂರಿಸಿ ಉಪಚರಿಸಿದ. ಭಯ- ಉದ್ವೇಗಗಳಿಂದ ಕಂಗೆಟ್ಟ ಆಕೆ, “ನಿಮಗೇನು ಬುದ್ಧಿ ಇದೆಯೇ? ಚಿರತೆಯನ್ನು ಹಿಡಿದುಕೊಂಡು ಹೊಟೇಲ್‌ ಒಳಗೆ ಬಂದಿದ್ದೀರಲ್ಲ?’ ಎಂದು ದಬಾಯಿಸಿದಳು.

“ಸರಿಯಾಗಿ ನೋಡಿ ಮಿಸ್‌. ಅದು ಬೆಕ್ಕಲ್ಲವೆ?’ ಡಾಲಿ ಹೇಳಿದ. “ಏನು, ತಮಾಷೆ ಮಾಡ್ತಿದ್ದೀರ?’ ಕೇಳಿದಳಾಕೆ. “ನೋಡಿ ಮಿಸ್‌. ನಾನು ಪೇಂಟರ್‌. ಚಿತ್ರ ಕಲಾವಿದ. ನೀವು ನೋಡ್ತಿರೋದು ಒಂದು ಸಾಧಾರಣ ಬೆಕ್ಕು. ಅದಕ್ಕೆ ಚಿರತೆಯ ಹಾಗೆ ಪೇಂಟ್‌ ಮಾಡಿದ್ದೀನಷ್ಟೆ’ ಎಂದು ಡಾಲಿ ವಿವರಿಸಿದ. ಅಲ್ಲಿದ್ದ ಗ್ರಾಹಕರಲ್ಲೊಬ್ಬರು, ಡಾಲಿ ಚಿತ್ರಕಲಾವಿದ ಎಂಬುದನ್ನು ಅನುಮೋದಿಸಿದ ಮೇಲೆ, ಆಕೆ ಆ ಪ್ರಾಣಿಯನ್ನು ಸೂಕ್ಷ್ಮವಾಗಿ ನೋಡಿ, “ಬಹಳ ಚೆನ್ನಾಗಿ ಪೇಂಟ್‌ ಮಾಡಿದ್ದೀರಿ. ನಾನೆಲ್ಲೋ ಇದು ಆಸೆಲಾಟ್‌ ಅಂದ್ಕೊಂಡೆ’ ಎಂದು ನಿಟ್ಟುಸಿರುಬಿಟ್ಟಳು.

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next