Advertisement

ಅಜ್ಜನಿಂದ ದೇಶಸೇವೆಗೆ ಸಿಕ್ಕ  ಹೊಸ ಚೈತನ್ಯ’

12:50 AM Jan 28, 2019 | Harsha Rao |

ಮಂಗಳೂರು: ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಅಜ್ಜನಿಂದ ದೇಶಸೇವೆಯ ವೃತ್ತಿಗೆ ಇಳಿಯಲು ಸಿಕ್ಕಿದ ಹೊಸ ;ಚೈತನ್ಯ’ವೇ ಈ ಹುಡುಗನನ್ನು ಸೇನೆಯತ್ತ ಸೆಳೆಯಿತು. ಕಾನೂನು ಪದವಿ ಓದಿದರೂ ರಾಷ್ಟ್ರಭಕ್ತಿಯ ಸ್ರೋತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವಂತೆ ಮಾಡಿತು. ಇವರು ಮಂಗಳೂರಿನ ಚೈತನ್ಯ ಕೊಜಪಾಡಿ. ಸೇನೆಯಲ್ಲಿ ಮೇಜರ್‌ ಆಗಿ ಪ್ರಸ್ತುತ ಹೈದರಾಬಾದ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕನಾಗಲು ಅವರಿಗೆ ಕುಟುಂಬವೇ ಪ್ರೇರಣೆ. 

Advertisement

ಚೈತನ್ಯ ನಗರದ ಕೊಟ್ಟಾರ ಸೈಂಟ್‌ ಪೀಟರ್ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ತನಕ ಓದಿದರು. ಬಳಿಕ ಉರ್ವ ಕೆನರಾ ಪ್ರೌಢಶಾಲೆಯಲ್ಲಿ ಹೈಸ್ಕೂಲ್‌ ಶಿಕ್ಷಣ, ಕೆನರಾ ಪಿಯು ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾಭ್ಯಾಸದ ಬಳಿಕ ಎಸ್‌ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಕಾನೂನು ಶಿಕ್ಷಣ ಪೂರೈಸುವ ವೇಳೆ, ಅಂದರೆ 2009ರಲ್ಲಿ ಭಾರತೀಯ ಸೇನೆಗೆ ಆಯ್ಕೆಯಾದರು. ಚೆನ್ನೈಯಲ್ಲಿ ತರಬೇತಿ ಪಡೆದು 2010ರಲ್ಲಿ ಲೆಫ್ಟಿನೆಂಟ್‌ ಆಗಿ ಸೇನೆಗೆ ನಿಯೋಜನೆಗೊಂಡರು. 

ಚೈತನ್ಯ ಅವರ ಒಂಬತ್ತು ವರ್ಷಗಳ ಸೇನಾ ಸೇವಾನುಭವದಲ್ಲಿ ಜಮ್ಮು-ಕಾಶ್ಮೀರದ ರಜೌರಿ ಸೆಕ್ಟರ್‌ನಲ್ಲಿ ಎರಡು ವರ್ಷ, ಗುಜರಾತಿನ ಜಾಮ್‌ನಗರದಲ್ಲಿ 3 ವರ್ಷ ಹಾಗೂ ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ 5 ತಿಂಗಳುಗಳ ಅಮೂಲ್ಯ ಅನುಭವಗಳು ಸೇರಿವೆ. ಬಳಿಕ ನಾಗಾಲ್ಯಾಂಡಿನ ತ್ಯುನ್‌ಸಂಗ್‌ ಮತ್ತು ದಿಮಾಪುರ್‌ನಲ್ಲಿ ತಲಾ ಒಂದೂವರೆ ವರ್ಷ ಕಾಲ ಕರ್ತವ್ಯ ನಿರ್ವಹಿಸಿ, ನಾಲ್ಕೂವರೆ ತಿಂಗಳುಗಳಿಂದ ಹೈದರಾಬಾದ್‌ನಲ್ಲಿದ್ದಾರೆ. ಈಗ ಅವರು ರಾಷ್ಟ್ರೀಯ ಭದ್ರತಾ ದಳ(ಎನ್‌ಎಸ್‌ಜಿ)ದ ಹೆಮ್ಮೆಯ ಸದಸ್ಯ.

ಕೃಷಿ ಮೂಲ
ಕೃಷಿಕರಾಗಿರುವ ಕೊಟ್ಟಾರಚೌಕಿ ನಿವಾಸಿ ವಸಂತ ಕೊಜಪಾಡಿ ಮತ್ತು ನಿವೃತ್ತ ಅಕೌಂಟೆಂಟ್‌ ಗಾಯತ್ರಿ ವಿ.ಕೆ. ಅವರ ಮೂವರು ಪುತ್ರರಲ್ಲಿ ಚೈತನ್ಯ ಕೊನೆಯವರು. ಅವರ ಪತ್ನಿ ತ್ರಿಷಾ ಗಿರೀಶ್‌ ಸ್ಟಾ Âಚುಟರಿ ಅಡಿಟರ್‌ ಆಗಿದ್ದಾರೆ. ಸಹೋದರರಾದ ದುರ್ಗಾರಾಮ್‌ ಪ್ರಸಾದ್‌ ಡಿಸೈನ್‌ ಎಂಜಿನಿಯರ್‌ ಹಾಗೂ ಧನಂಜಯ ವಿ.ಕೆ. ಬಿಎಸ್‌ಎನ್‌ಎಲ್‌ನಲ್ಲಿ ಜೆಇ ಆಗಿದ್ದಾರೆ.

ಎರಡನೇ ಮಹಾಯುದ್ಧದಲ್ಲಿ  ಅಜ್ಜ !
ಚೈತನ್ಯ ಅವರ ದೇಶಸೇವೆಯ ತುಡಿತದ ಹಿಂದೆ ಕೌಟುಂಬಿಕ ಹಿನ್ನೆಲೆಯ ಬಲವಾದ ಪ್ರೇರಣೆ ಇದೆ. ಅವರ ತಂದೆಯ ತಂದೆ ಅಜ್ಜ ರಾಮಣ್ಣ  ಭಂಡಾರಿ ಅವರು ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದರು. ಅಜ್ಜನ ಅನುಭವ ಕಥನಗಳನ್ನೇ ತಂದೆ ವಸಂತ ಕೊಜಪಾಡಿ ಅವರಿಂದ ಬಾಲ್ಯಕಾಲದ ಕಥೆಗಳಾಗಿ ಕೇಳುತ್ತ ಬೆಳೆದ ಚೈತನ್ಯ ಅವರಿಗೆ ಸೈನಿಕನಾಗುವ ಬಯಕೆ ಮೊಳೆತದ್ದು ಸಹಜ. ಜತೆಗೆ ಚಿಕ್ಕಪ್ಪ, ದೊಡ್ಡಪ್ಪ ಪೊಲೀಸ್‌ ಇಲಾಖೆಯಲ್ಲಿದ್ದುದು ಆ ಬಯಕೆಗೆ ನೀರೆರೆಯಿತು.

Advertisement

ದೇಶಸೇವೆಯಲ್ಲೇ ಸಾರ್ಥಕ್ಯ
ಹೆತ್ತವರು ಮತ್ತು ಸಹೋದರರ ಪ್ರೋತ್ಸಾಹವೇ ನಾನು ಭಾರತೀಯ ಸೇನೆಗೆ ತೆರಳಲು ಕಾರಣ. ಅಜ್ಜ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದರು. ಅಜ್ಜನ ಅನುಭವಗಳನ್ನು ತಂದೆ ನಮಗೆ ರಸವತ್ತಾಗಿ ವಿವರಿಸುತ್ತಿದ್ದರು. ಇದೇ ನನಗೆ ಸೈನಿಕನಾಗಲು ಪ್ರೇರಣೆಯಾಯಿತು. ದೇಶಸೇವೆಯಲ್ಲಿ  ನನಗೆ ಸಾರ್ಥಕ್ಯವಿದೆ. 
-ಮೇ| ಚೈತನ್ಯ ಕೊಜಪಾಡಿ

ಮೂವರಿಗೂ ಸೇನೆ ಸೇರುವ ಇಚ್ಛೆ
ವಿಶೇಷವೆಂದರೆ ರಾಮಣ್ಣ ಭಂಡಾರಿಯವರ ಮೂವರು ಮೊಮ್ಮಕ್ಕಳೂ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಇಚ್ಛೆಯಿಂದ ಸತತ ಪ್ರಯತ್ನ ಮಾಡಿದ್ದರು. ಹಿರಿಯಣ್ಣ ದುರ್ಗಾರಾಮ್‌ ಪ್ರಸಾದ್‌ ನೌಕಾಪಡೆ ಸೇರಬೇಕೆಂಬ ಇಚ್ಛೆ ಹೊಂದಿದ್ದರಾದರೂ ಅದು ಕೈಗೂಡಿರಲಿಲ್ಲ. ಧನಂಜಯ ಅವರು ಎಂಜಿನಿಯರಿಂಗ್‌ ಶಿಕ್ಷಣ ಮುಗಿಸಿ ಸೇನಾ ಪರೀಕ್ಷೆಗಳನ್ನು ಎದುರಿಸಿದ್ದರು. ಅವರಿಗೂ ಅವಕಾಶ ಲಭಿಸಲಿಲ್ಲ.

‘ತಮ್ಮ’ ಕುಟುಂಬದ ಹೆಮ್ಮೆ
ಚೈತನ್ಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಇಡೀ ಕುಟುಂಬಕ್ಕೆ  ಹೆಮ್ಮೆಯ ವಿಷಯ. ಕಾಲೇಜು ಹಂತದಲ್ಲಿಯೇ ಅವನು ಎನ್‌ಸಿಸಿಯಲ್ಲಿ  ಸಕ್ರಿಯವಾಗಿದ್ದ, ದಿಲ್ಲಿಯ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ  ಭಾಗವಹಿಸುವ ಅವಕಾಶ ಪಡೆದಿದ್ದ. ಕೌಟುಂಬಿಕ ಹಿನ್ನೆಲೆ ನಮಗೆಲ್ಲರಿಗೂ ಬಲವಾದ ಪ್ರೇರಣೆಯಾಗಿತ್ತು. ನಮಗೆ ಸಿಗದ ಸೌಭಾಗ್ಯ ಅವನಿಗೆ ಸಿಕ್ಕಿದೆ. ಸೇನೆಗೆ ಸೇರಿದ ಮೇಲೆ ಉತ್ತಮ ಅವಕಾಶ ಗಳನ್ನು ಪಡೆದುಕೊಂಡಿದ್ದಾನೆ.
– ಧನಂಜಯ ಕೊಜಪಾಡಿ, ಚೈತನ್ಯ ಅವರ ಸಹೋದರ

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next