ಬದುಕು ಸುವಿಸ್ತಾರ. ನಿನ್ನೆ ಎಂಬ ಸಾವಿರ ನೆನಪಿನ ಮಧ್ಯೆಯೂ ಕೆಲ ನೆನಪುಗಳು ಅಕ್ಷಿಪಟಲದ ಕದವನ್ನು ತಟ್ಟುತ್ತಿರುತ್ತದೆ.
ಜೀವನದಲ್ಲಿ ಕೆಲವರ ಭೇಟಿ ಅನಿರೀಕ್ಷಿತ ಹೌದು, ಹಾಗೆಯೇ ನನಗೆ ಅನಿರೀಕ್ಷಿತವಾಗಿ ಸಿಕ್ಕ ವರ ಎಂದರೆ ನಮ್ಮ ಲತಾ ಮೇಡಂ. ಸೌಜನ್ಯತೆಯ ಮಾತಿಂದ ತನ್ನೆಡೆಗೆ ಸೆಳೆದ ಸ್ನೇಹಮೂರ್ತಿ ಅವರು.
ಅವರು ಯಾವಾಗಲೂ ತನ್ನವರ ಬಗ್ಗೆ ಚಿಂತಿಸುತ್ತ ಎಲ್ಲರಿಗೂ ಒಳಿತನ್ನೇ ಬಯಸುವ ಪ್ರೀತಿಯ ಗುರು. ಕುಗ್ಗಿ ಕುಳಿತಾಗ ಧೈರ್ಯ ಹೇಳ್ಳೋ, ಅಮ್ಮನಾಗೋ ಗುರುವನ್ನು ಕಂಡರೆ ಸಾಕು ಮನಸು ಅರಳುತ್ತದೆ.
ನಾ ಬರೆಯುವ ಕವಿತೆಗಳ ಓದಿ “ಮುಂದುವರೆಸೆಂದು’ ಬೆನ್ನು ತಟ್ಟೋ ಒಲವಿನ ಗುರುವವರು. ಪ್ರೀತಿಯ ಗುರುವಾಗಿ, ಮಮತಾಮಯಿ ಅಮ್ಮನಾಗಿ, ಅಕ್ಕರೆಯ ಅಕ್ಕನಾಗಿ ಯಾವಾಗಲೂ ನನ್ನೆದೆಯ ಗುಡಿಯಲ್ಲಿ ಜೋಪಾನವಾಗಿರುವವರು ಇವರು. ನನ್ನಂತಹ ಅದೆಷ್ಟೋ ಮಕ್ಕಳಿಗೆ ಗುರಿ ತೋರುವ ಗುರುವಾಗಿ ಯಾವಾಗಲೂ ಜೊತೆಯಾಗುತ್ತಾರೆ. ನನ್ನ ನೊಂದ ಮನಸ್ಸಿಗೆ ಬೆಳಕಾದ ನನ್ನ ಪ್ರೀತಿಯ ಅಮ್ಮನಂತಹ ಗುರುವಿಗೆ ನಾನೆಂದೂ ಚಿರಋಣಿ.
ಒಲವ ಗುರುವಿಗೆ ಒಲವಿಂದ ಧನ್ಯವಾದ ಹೇಳಬೇಕೆಂಬುವುದು ಈ ಪುಟ್ಟ ಹೃದಯದ ಬಯಕೆ.
– ಕಾವ್ಯಾ ಕೆ.
ಪ್ರಥಮ ಬಿ. ಎ. ಸೈಂಟ್‌ಮೇರೀಸ್ ಸೈರಿಯನ್ ಕಾಲೇಜು, ಬ್ರಹ್ಮಾವರ