ಮೊದಲ ಬಾರಿ ಹುಡುಗನನ್ನು ಭೇಟಿಯಾಗಲು ಎಣ್ಣೆ ಹಚ್ಚಿಕೊಂಡು ಹಳ್ಳಿ ಹುಡುಗಿಯಂತೆ ಬಂದಿದ್ದೆಯಲ್ಲ? ಆ ನಿನ್ನ ಸಿಂಪಲ್ ಸೆನ್ಸ್ ಬ್ಯೂಟಿಗೆ ಯಾಮಾರಿಯೇ ನನ್ನ ಹೃದಯದಲ್ಲಿ ನಿನಗೆ ಸ್ಥಾನ ನೀಡಿದೆ…
ಹಾಯ್ ಅಂದಗಾತಿ
ನಿನ್ನನ್ನೂ ನೋಡದೆ, ನಿನ್ನ ದನಿ ಕೇಳದೆ, ನೆನಪ ತಡೆ ಹಿಡಿದು ಬದುಕುವುದು ಬಲು ಕಷ್ಟ ಕಣೇ. ಅಂತಹ ಸೆಳೆತ, ಆಳದ ಸೆಲೆ, ಮರೆಲಾಗದಂಥ ಮೋಹ ನಿನ್ನಲ್ಲಿ ಏನಿದೆಯೋ ತಿಳಿಯುತ್ತಿಲ್ಲ. ಆ ನಿನ್ನ ಪ್ರೀತಿಗೆ, ಚೆಲುವಿಗೆ, ವಾರೆಗಣ್ಣಿನ ನೋಟಕ್ಕೆ, ಮುಗ್ಧ ಭಾವಗಳಿಗೆ ಸಂಪೂರ್ಣ ಸೋತು ಶರಣಾಗಿದ್ದೇನೆ. ಮತ್ತೆಂದೂ ನಾಟಕೀಯ ಯುದ್ಧ, ತಾಪ, ಮುನಿಸುಗಳ ಬಾಣ ಹೂಡಿ ಗೆಲ್ಲಲು ಪ್ರಯತ್ನ ಪಡಬೇಡ. ಅದಾಗಲೇ ನಿನಗೆ ಸೋತುಬಿಟ್ಟಿದ್ದೇನೆ.
ನೆನಪಿದೆಯಾ? ಶ್ವೇತವರ್ಣದ ಚೂಡಿಯಲ್ಲಿ ಮಿರ ಮಿರ ಮಿಂಚುತ್ತಾ, ಕೂದಲಿಗೆ ಎಣ್ಣೆ ತಿಕ್ಕಿ, ಹೆರಳು ಕಟ್ಟಿ, ಒಂದೇ ಬಗಲಿಗೆ ಬ್ಯಾಗ್ ಜೋತು ಹಾಕಿಕೊಂಡು ಹತ್ತಿರ ಬರುತ್ತಾ ಹೂ ನಗು; ಚೆಲ್ಲಿದೆಯಲ್ಲ ಅಂದು ನಿನಗೆ ನಗುವಿನ ಪ್ರತ್ಯುತ್ತರ ನೀಡಿದರೂ ಕೈ ಕಾಲುಗಳಲ್ಲಿ, ಎದೆಯಲ್ಲಿ ನಡುಕ ಹತ್ತಿ ಭಯದಿಂದ ಒಂದು ಕ್ಷಣ ಕಂಪಿಸಿದ್ದು ನನಗೆ ಮಾತ್ರವೇ ಗೊತ್ತು. ಅಲ್ಲವೇ ಪೆದ್ದು ಪುಟ್ಟಿà, ಮೊದಲ ಬಾರಿ ಹುಡುಗನನ್ನು ಭೇಟಿಯಾಗಲು ಎಣ್ಣೆ ಹಚ್ಚಿಕೊಂಡು ಹಳ್ಳಿ ಹುಡುಗಿಯಂತೆ ಬಂದಿದ್ದೆಯಲ್ಲ? ಆ ನಿನ್ನ ಸಿಂಪಲ್ ಸೆನ್ಸ್ ಬ್ಯೂಟಿಗೆ ಯಾಮಾರಿಯೇ ನನ್ನ ಹೃದಯದಲ್ಲಿ ನಿನಗೆ ಸ್ಥಾನ ನೀಡಿದೆ. ಆದರೆ ನೀನು ಪಟ್ಟಾಗಿ ನನ್ನ ಆಸ್ತಿ ಇದು ಎಂದು ಕುಳಿತುಬಿಟ್ಟೆಯಲ್ಲ ? ಅಂದಿನಿಂದ ನಿನ್ನ ಮುಂದೆ ಎಲ್ಲೆಲ್ಲೂ ಸೋಲುತ್ತಲೇ ಹೋದೆ. ಹಾಗೆ ಸೋಲುತ್ತಲೇ ನಿನಗೆ “ಅರಿವಾಗದಂತೆ ನಿನ್ನ ಮನ ಗೆದ್ದೆ. ಈ ಕ್ಷಣಕ್ಕೆ ನಾನು ನಿನ್ನಿಂದ ನೂರಾರು ಮೈಲಿ ದೂರವಿದ್ದೇನೆ ನಿಜ. ಆದರೆ, ಕಣ ಕಣದಲ್ಲೂ ನಿನ್ನ ನೆನಪೇ ಜೊತೆಗಿದೆ. ಹೊಸತನದ ಅಗಲಿಕೆಯಲ್ಲಿ ಈ ಭಾವಗಳು ಸಹಜ ಕಣೇ. ಆದರೆ, ನನ್ನ ಜೊತೆಯಿದ್ದಾಗ ಚೂರು ಕಷ್ಟ ಬರದಂತೆ ನೋಡಿಕೊಳ್ಳುವೆ. ನಿನ್ನನ್ನು ಜತನದಿಂದ ನೋಡಿಕೊಳ್ಳಬೇಕೆಂಬುದೇ ನನ್ನ ಜೀವಮಾನದ ಪರಮ ಹೆಗ್ಗುರಿ. ಜೀವಕ್ಕೆ ಜೀವವಾದ ಹುಡುಗಿಯನ್ನು ಬಿಟ್ಟಿರುವುದು ಬಹಳ ಕಷ್ಟದ ಕೆಲಸ. ಅದೆಲ್ಲ ಇರಲಿ, ಇಂದು ನನ್ನ ವೃತ್ತಿ ಬದುಕಿನ ತಿರುವಿನ ದಿನ. ಮುಂದಿನ ನಮ್ಮ ನೆಮ್ಮದಿಯ ಜೀವನದ ಕ್ಷಣಕ್ಕೆ ಕನಸುಗಳ ಭದ್ರತೆಯ ಕಾಂಚಾಣದ ಹೂಡಿಕೆ ಹಾಕಬೇಕಲ್ಲವೆ? ಅದೇ ಉದ್ದೇಶದಿಂದ ದೇಶಾಂತರ ಬಂದಿದ್ದೇನೆ. ನಮ್ಮ ಪಾಲಿನ ಒಳ್ಳೆಯ ದಿನಗಳು ಬರುವವರೆಗೂ ಬೇಜಾರಾಗದೆ ತಾಳ್ಮೆಯಿಂದ ಇರು. ಬೇಗ ಬಂದು ನಿನ್ನನ್ನೂ ಸೇರುತ್ತೇನೆ.
ಪಾಷಾ, ತುಮಕೂರು