Advertisement
ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕಿನ ಸಾಲೂರು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ, ಭಕ್ತರ ಕಷ್ಟಕ್ಕೆ ನೆರವಾಗುವ ಆಪದ್ಭಾಂದವ ಎನ್ನುವ ಖ್ಯಾತಿ ಗಳಿಸಿದೆ. ಶಿಕಾರಿಪುರ-ಆನಂದಪುರ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಈ ದೇವಾಲಯ ಪೂರ್ವಾಭಿಮುಖವಾಗಿದೆ. ದೇವಾಲಯಕ್ಕೆ ಪ್ರಾಚೀನ ಇತಿಹಾಸವಿದೆ. ಕೆಳದಿ ಅರಸು ಮನೆತನದ ಪ್ರಸಿದ್ಧ ರಾಜ ಶಿವಪ್ಪನಾಯಕನ ಸಾಮ್ರಾಜ್ಯ ಇಲ್ಲಿಯವರೆಗೂ ವಿಸ್ತರಿಸಿತ್ತು ಎಂಬ ಮಾತುಗಳಿವೆ. ಸುಂಕ ವಸೂಲಿ ಮತ್ತು ಆಡಳಿತದ ಭದ್ರತೆಗೆ ಶಿವಪ್ಪ ನಾಯಕನು ಹಲವು ಗ್ರಾಮಗಳಲ್ಲಿ ತನ್ನ ನಂಬಿಗಸ್ಥ ಕುಟುಂಬಸ್ಥರನ್ನು ನೇಮಿಸಿದ್ದನು. ಸಾಲೂರಿಗೆ ಹಿಂದೆ ಭದ್ರಗಿರಿನಗರ ಎಂಬ ಹೆಸರಿತ್ತು. ಊರಿನ ಬಾಗಿಲಿನಲ್ಲಿರುವ ಈ ಆಂಜನೇಯ ಗುಡಿಯನ್ನು ಶಿವಪ್ಪ ನಾಯಕ ಅಭಿವೃದ್ಧಿ ಪಡಿಸಿ, ನಿತ್ಯ ಪೂಜೆಗೆ ವ್ಯವಸ್ಥೆ ಕಲ್ಪಿಸಿದ್ದನು ಎನ್ನುತ್ತದೆ ಇತಿಹಾಸ. ಈ ಗ್ರಾಮದ ಮುಖ್ಯ ರಸ್ತೆಯ ಬದಿಗಳಲ್ಲಿ ಸಾಲಾಗಿ ಮಾವು, ಹುಣಸೆ, ಆಲ ಇತ್ಯಾದಿ ಮರಗಳನ್ನು ಬೆಳೆಸಲಾಗಿತ್ತು. ಸಾಲಾಗಿ ಮರಗಳಿರುವ ಊರು ಎಂಬ ಕಾರಣದಿಂದ ಸಾಲು ಮರದೂರು ಎಂಬ ಹೆಸರು ಬಂದು, ಆನಂತರ ಸಾಲೂರು ಎಂದಾಯಿತು. ಬಿದನೂರು ನಗರದ ದಾಳಿಯ ಸಂದರ್ಭದಲ್ಲಿ ಪರಕೀಯರ ದಾಳಿ ಈ ಗ್ರಾಮದ ವರೆಗೂ ತಟ್ಟಿತ್ತು. ಪರಕೀಯರ ದಾಳಿಯಿಂದ ದೇಗುಲ ಹಾಳಾಗಿದ್ದರಿಂದ ಮತ್ತು ಸುತ್ತಮುತ್ತಲ ಜನರ ವಲಸೆಯ ಕಾರಣದಿಂದ ಹಲವು ವರ್ಷ ಪೂಜೆ ಪುನಸ್ಕಾರಗಳಿಲ್ಲದೆ ಉಳಿದಿತ್ತು.
Related Articles
Advertisement
ಸಾಲೂರಿನ ಹನುಮನಿಗೆ ಶ್ರಾವಣ ಮಾಸದಲ್ಲಿ ನಿತ್ಯವೂ ಬೆಳಗ್ಗೆ ವಿಶೇಷ ಅಲಂಕಾರ, ಪೂಜೆ ನಡೆಯುತ್ತದೆ. ದಸರಾ ಸಂದರ್ಭದಲ್ಲಿ ಪಾಡ್ಯ ದಿಂದ ನವಮಿಯವರೆಗೆ ವಿಜೃಂಭಣೆಯ ಪೂಜೆ ಮತ್ತು ಕೊನೆಯ ದಿನ ವಿಜಯದಶಮಿಯಂದು ಸೀಮೋಲ್ಲಂಘನ ಮತ್ತು ಪಲ್ಲಕ್ಕಿ ಉತ್ಸವ ನಡೆಸಲಾಗುತ್ತದೆ. ಎಲ್ಲಾ ಹಬ್ಬಗಳಂದು ಗ್ರಾಮದ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
ಫೋಟೋ ಮತ್ತು ಲೇಖನ-ಎನ್.ಡಿ.ಹೆಗಡೆ ಆನಂದಪುರಂ