Advertisement

ಬಿರುಮಲೆ ಗುಡ್ಡೆಯಲ್ಲಿ ಸಾಲುಮರದ ತಿಮಕ್ಕ ಟ್ರೀಪಾರ್ಕ್‌

10:28 AM Feb 08, 2018 | |

ಪುತ್ತೂರು: ಸಾಲು ಮರಗಳ ತಿಮ್ಮಕ್ಕ ಅವರ ಸೇವೆಯಿಂದ ಪ್ರೇರಣೆ ಪಡೆದು ಪುತ್ತೂರಿನಲ್ಲೊಂದು ಟ್ರೀಪಾರ್ಕ್‌ ತಲೆ ಎತ್ತಲಿದೆ. ಪೇಟೆಯಿಂದ ಕೇವಲ 2 ಕಿಲೋ ಮೀಟರ್‌ ದೂರದಲ್ಲಿರುವ ಪ್ರೇಕ್ಷಣೀಯ ಸ್ಥಳ ಬಿರುಮಲೆ ಗುಡ್ಡದಲ್ಲಿ
ವೃಕ್ಷೋದ್ಯಾನ ನಿರ್ಮಾಣಕ್ಕೆ ಅಂತಿಮ ಮುದ್ರೆ ಬಿದ್ದಿದೆ.

Advertisement

ಪಾಳುಬಿದ್ದಿದ್ದ ಬಿರುಮಲೆ ಗುಡ್ಡವನ್ನು ಅಭಿವೃದ್ಧಿ ಪಡಿಸಬೇಕು ಎಂಬ ನಿಟ್ಟಿನಲ್ಲಿ ಇದುವರೆಗೆ ಸಾಕಷ್ಟು ಪ್ರಯತ್ನ ನಡೆದಿತ್ತು. ಬಿರುಮಲೆ ಅಭಿವೃದ್ಧಿ ಪ್ರಾಧಿಕಾರ ಎಂಬ ಸಾರ್ವಜನಿಕ ಸಂಸ್ಥೆ ಒಂದಷ್ಟು ಅಭಿವೃದ್ಧಿ ಕೆಲಸಗಳಿಗೆ ಚಾಲನೆಯನ್ನೂ ನೀಡಿತ್ತು. ಮಕ್ಕಳ ಪಾರ್ಕ್‌, ಗ್ರಂಥಾಲಯಕ್ಕಾಗಿ ಒಂದಷ್ಟು ಪರಿಶ್ರಮವನ್ನು ಪಟ್ಟಿತ್ತು. ಮುಂದೆ ಬಿರುಮಲೆ ಹಬ್ಬ ನಡೆಸಿದ್ದು, ಅಷ್ಟಾಗಿ ಯಶಸ್ಸು ಕಾಣಲಿಲ್ಲ.

ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೋ ಏನೋ, ಬಿರುಮಲೆ ಪಾಳು ಭೂಮಿಯಾಗಿ, ಪುಂಡರ ನೆಲವಾಗಿ ಬೆಳೆಯಿತು. ಈ ಎಲ್ಲ ಸಮಸ್ಯೆಗೆ ಪರಿಹಾರವಾಗಿ ಗೋಮಾಳವಾಗಿದ್ದ ಬಿರುಮಲೆ ಗುಡ್ಡದ 16 ಎಕರೆ ಜಾಗವನ್ನು ಅರಣ್ಯ ಇಲಾಖೆಯ ಸುಪರ್ದಿಗೆ ವಹಿಸಲಾಗಿದೆ.

ವಾಕಿಂಗ್‌ ಪಾಥ್‌, ಟ್ರೆಕ್ಕಿಂಗ್‌ ಪಾಥ್‌, ಬೇಲಿ (7 ಲಕ್ಷ ರೂ.), ಪ್ಯಾರಾಗೋಲ/ ಕುಟೀರ (4.99 ಲಕ್ಷ ರೂ.), ಪ್ರವೇಶ ದ್ವಾರ, ಆಕರ್ಷಕ ಗೇಟ್‌, ಚೈನ್‌ಲಿಂಕ್‌ ಮೆಶ್‌, 700 ವಿವಿಧ ತಳಿಯ ಗಿಡಗಳು, ಹರ್ಬಲ್‌ ಗಾರ್ಡನ್‌, ಮಕ್ಕಳ ಬಯಲು ರಂಗಮಂದಿರ, ಗೋಡೆ ಚಿತ್ತಾರ, ಗ್ರಂಥಾಲಯವಿದ್ದ ಕಟ್ಟಡದಲ್ಲಿ ಮಾಹಿತಿ ಕೇಂದ್ರ ನಿರ್ಮಾಣವಾಗಲಿದೆ. ಈ ಎಲ್ಲ
ಕೆಲಸಗಳಿಗೆ ಸುಮಾರು 50 ಲಕ್ಷ ರೂ. ಅಗತ್ಯವಿದೆ. ಆದರೆ 30 ಲಕ್ಷ ರೂ.ಗೆ ಅನುಮೋದನೆ ಸಿಕ್ಕಿದ್ದು, ಕಾಮಗಾರಿಗಳಿಗೆ
ಚಾಲನೆ ನೀಡಲಾಗಿದೆ. ಮುಂದೆ ಸಿಕ್ಕಿದ ಅನುದಾನ ಬಳಸಿಕೊಂಡು ಕಾಮಗಾರಿ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಯಾಕಾಗಿ?
ಪುತ್ತೂರು ಪೇಟೆಯಲ್ಲಿ ಒಟ್ಟು ನಾಲ್ಕು ಪಾರ್ಕ್‌ಗಳಿವೆ. ಇವೆಲ್ಲವೂ ನಗರಸಭೆ ಅಧೀನದಲ್ಲಿದ್ದು, ಯಾವುದೇ ಅಭಿವೃದ್ಧಿ
ಚಟುವಟಿಕೆಗೆ ತೆರೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಅರಣ್ಯ ಇಲಾಖೆ ನಿರ್ಮಾಣಕ್ಕೆ ಮುಂದಾಗಿರುವ ವೃಕ್ಷೋದ್ಯಾನ ಸಾರ್ವಜನಿಕರಿಗೆ ಹೆಚ್ಚು ಆಪ್ತವಾಗಲಿದೆ.

Advertisement

ಪ್ರವೇಶ ಶುಲ್ಕ
ವೃಕ್ಷೋದ್ಯಾನದ ಒಳಗಡೆಗೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶವಿದೆ. ಆದರೆ ಒಟ್ಟು ನಿರ್ವಹಣೆ ದೃಷ್ಟಿಯಿಂದ ಪ್ರವೇಶ ಶುಲ್ಕ ವಿಧಿಸುವುದು ಅನಿವಾರ್ಯ. ಇಲ್ಲದೇ ಹೋದರೆ ಉಳಿದ ನಾಲ್ಕು ಪಾರ್ಕ್‌ಗಳ ಪಟ್ಟಿಗೆ ಇದೂ ಸೇರಿ ಹೋಗುವ ಅಪಾಯವಿದೆ. ಆದರೆ ಎಷ್ಟು ಶುಲ್ಕ ವಿಧಿಸುವುದು ಎಂಬ ಬಗ್ಗೆ ಇದುವರೆಗೆ ತೀರ್ಮಾನ ಕೈ ಗೊಂಡಿಲ್ಲ. ಕೆಲಸ ಅಂತಿಮವಾದ ಬಳಿಕ ತೀರ್ಮಾನಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ಅಭಿವೃದ್ಧಿ ಅಗತ್ಯ
ಬಿರುಮಲೆ ಗುಡ್ಡದ 16 ಎಕರೆ ಜಾಗವಷ್ಟೇ ಇದೀಗ ಅಭಿವೃದ್ಧಿಗೆ ತೆರೆದು ಕೊಳ್ಳುತ್ತಿದೆ. ಉಳಿದಂತೆ ಗಾಂಧಿ ಮಂಟಪ, ವ್ಯೂ ಪಾಯಿಂಟ್‌ ಸಹಿತ ಹಲವು ಕಾಮಗಾರಿ ಅಭಿವೃದ್ಧಿ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕಿದೆ. ಬಿರುಮಲೆ ಗುಡ್ಡದ ತುತ್ತತುದಿಗೆ ಹೋದರೆ, ಇಡೀಯ ಪುತ್ತೂರಿನ ನೋಟ ಕಣ್ಸೆರೆಯಾಗುತ್ತದೆ.

ಮಹತ್ವಪೂರ್ಣ ಕೆಲಸ
ಅರಣ್ಯ ಸಚಿವ ರಮಾನಾಥ ರೈ ಅವರ ಆಸಕ್ತಿಯ ಮೇರೆಗೆ ಸಾಲು ಮರದ ತಿಮ್ಮಕ್ಕ ಟ್ರೀಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಜನರಿಗೆ ಉತ್ತಮ ಗಾಳಿ, ಪರಿಸರ ಸಂರಕ್ಷಣೆಯ ಜತೆಗೆ ಸರಕಾರದ ಜಾಗವನ್ನು ಉಳಿಸುವ ಮಹತ್ವಪೂರ್ಣ ಕೆಲಸವೂ ಇದಾಗಲಿದೆ. ಅರಣ್ಯ ಸಂರಕ್ಷಣೆಯ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದ ಅರಣ್ಯ ಇಲಾಖೆ, ಇದೀಗ ಪಾರ್ಕ್‌ ನಿರ್ಮಾಣದ ಮೂಲಕ ಜನರ ನೇರ ಸಂಪರ್ಕಕ್ಕೆ ಸಿಗುವಂತಾಗಿದೆ.
– ವಿ.ಪಿ. ಕಾರ್ಯಪ್ಪ, ವಲಯ ಅರಣ್ಯ
ಸಂರಕ್ಷಣಾಧಿಕಾರಿ, ಪುತ್ತೂರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next