Advertisement

ಕಡಲು ಉಕ್ಕೇರಿ ಸಂಕಲಕರಿಯವರೆಗೆ ತುಂಬಿದ ಉಪ್ಪು ನೀರು

11:22 PM Jun 12, 2019 | sudhir |

ಬೆಳ್ಮಣ್‌: ಸಾಧಾರಣ ಮಳೆ ಮಧ್ಯೆಯೇ ಕಡಲು ಉಕ್ಕೇರಿ ಮುಂಡ್ಕೂರು ಸಂಕಲಕರಿಯದವರೆಗೆ ಶಾಂಭವಿ ನದಿಯಲ್ಲಿ ಉಪ್ಪು ನೀರು ತುಂಬಿದೆ.
ಈ ಹಿಂದೆಯೂ ಸಮುದ್ರದ ನೀರು ನದಿಯೊಳಗೆ ಹರಿದಿದ್ದರೂ ಮುಲ್ಕಿಗೆ ಅಕ್ಕ ಪಕ್ಕದ ಊರುಗಳ ವರೆಗೆ ಉಕ್ಕೇರುತ್ತಿತ್ತು. ಆದರೆ ಈ ಬಾರಿ ಇನ್ನೂ ಮುಂದುವರಿದು ಮುಂಡ್ಕೂರು, ಸಂಕಲಕರಿಯದವರೆಗೆ ನೀರು ವ್ಯಾಪಿಸಿದೆ. ಸಂಕಲಕರಿಯ ಸೇತುವೆ ಬಳಿಯ ಅಣೆಕಟ್ಟುವರೆಗೆ ಈ ಉಪ್ಪುನೀರು ತುಂಬಿದ್ದು ಅಚ್ಚರಿಗೆ ಕಾರಣವಾಗಿದೆ.

Advertisement

ಪಲಿಮಾರು ಅಣೆಕಟ್ಟು ತೆರವು ಕಾರಣ?
ಪಲಿಮಾರು ಅಣೆಕಟ್ಟನ್ನು ನಿರ್ವಾಹಕರು ತೆರೆದ ಪರಿಣಾಮವಾಗಿ ಏಕಾಏಕಿ ಸಮುದ್ರದ ನೀರು ಮೇಲೇರಿ ಬಂದಿರಬಹುದು ಎಂದು ಬಳುRಂಜೆ ಗ್ರಾಮ ಪಂಚಾಯತ್‌ ಅಧ್ಯಕ್ಷ ದಿನೇಶ್‌ ಪುತ್ರನ್‌ ತಿಳಿಸಿದ್ದಾರೆ. ಪಲಿಮಾರುವಿನಲ್ಲಿ ಇದೀಗ ಇರುವ ಅಣೆಕಟ್ಟು ಬಿರುಕು ಬಿಟ್ಟು ನೀರು ಭಾರೀ ಪ್ರಮಾಣದಲ್ಲಿ ಪೋಲಾಗುತ್ತಿರುವುದರಿಂದ ಕೃಷಿಕರ ಬೇಡಿಕೆಯಂತೆ ಅದರ ಪಕ್ಕದಲ್ಲಿಯೇ ಇನ್ನೊಂದು ವ್ಯವಸ್ಥಿತ ಅಣೆಕಟ್ಟು ನಿರ್ಮಾಣಗೊಳ್ಳುತ್ತಿದೆ. ಕಳೆದೆರಡು ದಿನದ ಹಿಂದೆ ಅದಕ್ಕೆ ಹಾಕಿದ ತಡೆಯೂ ತೆರವು ಮಾಡಲಾಗಿತ್ತು. ಮರುದಿನವೇ ಸಮುದ್ರದ ಉಪ್ಪುನೀರು ಶಾಂಭವೀ ನದಿ ಪ್ರವೇಶಿಸಿದೆ.

ಕೃಷಿ ಹಾಗೂ ಕುಡಿಯುವ ನೀರಿಗೆ ತೊಂದರೆ
ನದಿಗೆ ಉಪ್ಪು ನೀರು ಪ್ರವೇಶದಿಂದ ಈ ನೀರು ಕೃಷಿಗೆ ಅಯೋಗ್ಯವಾಗಿದೆ. ಇದರಿಂದ ಮುಂಡ್ಕೂರು, ಉಳೆಪಾಡಿ, ಏಳಿಂಜೆ, ಸಂಕಲಕರಿಯ, ಪಲಿಮಾರು, ಬಳುRಂಜೆ, ಕರ್ನಿರೆ, ಮಟ್ಟು ಭಾಗದ ಕೃಷಿಕರು ಆತಂಕಕ್ಕೊಳಗಾಗಿದ್ದಾರೆ. ಅದೇ ರೀತಿ ನದಿಯ ನೀರಿನ ಒರತೆ ಇರುವ ಈ ಭಾಗದ ಬಾವಿಗಳಲ್ಲಿಯೂ ಉಪ್ಪು ನೀರಿನ ಒರತೆ ಉಂಟಾಗಿ ಕುಡಿಯುವ ನೀರಿಗೂ ತೊಂದರೆಯಾಗುವ ಸಾಧ್ಯತೆಗಳಿವೆ.

ಮೊದಲ ಮಳೆಗೆ ಉಬೈರ್‌ ಗುದ್ದಿ ನದಿ ಮೀನು ಹಿಡಿಯುವ ಈ ಭಾಗದ ಮೀನು ಪ್ರಿಯರಿಗೆ ಈ ಉಪ್ಪು ನೀರಿನಿಂದ ತೊಂದರೆಯಾಗಲಿದೆ. ಉಪ್ಪು ನೀರು ಸೇವಿಸುವ ನದಿಯ ಮೀನುಗಳು ಹೆಚ್ಚು ಕಾಲ ಬಾಳುವುದಿಲ್ಲ. ಜತೆಗೆ ಕೆಲವೊಮ್ಮೆ ಸಮುದ್ರದ ಮೀನುಗಳೂ ಕೆಲವೊಮ್ಮೆ ನದಿ ಪ್ರವೇಶಿಸುತ್ತವೆ ಎನ್ನುತ್ತಾರೆ ಮೀನುಗಾರ ಐಕಳ ನಿವಾಸಿ ಮುದರ ಅವರು.

ಗಾಳಿ ನಿಂತರೆ ಉಬ್ಬರ ಸ್ಥಗಿತ
ಹವಾಮಾನ ವೈಪರೀತ್ಯದ ಪರಿಣಾಮ ಇದೀಗ ನಿರಂತರವಾಗಿ ಗಾಳಿ ಬೀಸುತ್ತಿರುವುದರಿಂದ ಸಮುದ್ರದ ನೀರು ನದಿಗೆ ತುಂಬಿದೆ. ಇನ್ನೆರಡು ದಿನಗಳಲ್ಲಿ ಗಾಳಿ ಕಡಿಮೆಯಾಗಿ ಈ ಉಪ್ಪು ನೀರು ಹರಿವು ಕಡಿಮೆಯಾಗುವ ಆಶಯವಿದೆ.

Advertisement

ಇದೇ ಮೊದಲು
ಪಲಿಮಾರು ಅಣೆಕಟ್ಟು ತೆರವಿನಿಂದ ಏಕಾಏಕಿ ಸಮುದ್ರದ ನೀರು ನದಿ ಪ್ರವೇಶಿಸಿರಬಹುದು. ಈ ಹಿಂದೆಯೂ ಉಪ್ಪು ನೀರು ಪಲಿಮಾರುವರೆಗೆ ಏರಿ ಬರುತ್ತಿತ್ತು. ಆದರೆ ಈ ಬಾರಿ ಸಂಕಲಕರಿಯದವರೆಗೆ ಉಕ್ಕೇರಿದೆ.
-ದಿನೇಶ್‌ ಪುತ್ರನ್‌, ಬಳುRಂಜೆ ಗ್ರಾ.ಪಂ. ಅಧ್ಯಕ್ಷ

ಕೃಷಿಗೆ ಅಪಾಯ
ಸಂಕಲಕರಿಯದವರೆಗೆ ಉಪ್ಪು ನೀರು ವ್ಯಾಪಿಸಿದ್ದು ಇದೇ ಮೊದಲು. ಈ ನೀರಿನಿಂದ ಕೃಷಿಕರಿಗೆ ತೊಂದರೆಯಾಗಲಿದೆ. ಕೃಷಿ ಬಳಕೆಗೆ ಈ ನೀರು ಸೂಕ್ತವಲ್ಲ. ಕುಡಿಯುವ ನೀರಿನ ಬಾವಿಗಳಿಗೂ ಇದರ ಒರತೆ ಉಂಟಾದಲ್ಲಿ ಅಪಾಯವಿದೆ.
-ಸುಧಾಕರ ಸಾಲ್ಯಾನ್‌ ಸಂಕಲಕರಿಯ, ಪ್ರಗತಿಪರ ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next