ನವದೆಹಲಿ: ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಇಲ್ಲ ಮತ್ತು ಆ ನಿಟ್ಟಿನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಪಕ್ಷದ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಎಲ್ಲರಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ. “ಪಿಟಿಐ’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಅವರು, ಪಕ್ಷದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅದರದ್ದೇ ಆದ ವೇದಿಕೆಗಳಿವೆ. ಅದರ ವ್ಯಾಪ್ತಿಯಿಂದ ಹೊರತಾದ ಕೇಂದ್ರಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಪಕ್ಷದ ನಾಯಕತ್ವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಸೋನಿಯಾ- ರಾಹುಲ್‌ಗೆ ನಿಷ್ಠರಾಗಿರುವ ಸಲ್ಮಾನ್‌ರಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ :KSRP ಹುದ್ದೆಗೆ ಅಭ್ಯರ್ಥಿ ಪರ ನಕಲಿ ಹೆಸರಲ್ಲಿ ಪರೀಕ್ಷೆ ಬರೆದು ಸಿಕ್ಕಿಬಿದ್ದ ಪೊಲೀಸ್ ಪೇದೆ!
ಬಿಹಾರ ಮತ್ತು ಇತರ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿನ ಬಗ್ಗೆ ಚಿದಂಬರಂ, ಸಿಬಲ್ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ಆದರೆ ಅವರಿಬ್ಬರೂ ಅದನ್ನೇಕೆ ಬಹಿರಂಗ ಮಾಡಬೇಕಿತ್ತು ಎಂದು ಖುರ್ಷಿದ್ ಪ್ರಶ್ನೆ ಮಾಡಿದರು. ಹಂಗಾಮಿ ಅಧ್ಯಕ್ಷರ ಬದಲಿಗೆ ಪೂರ್ಣ ಪ್ರಮಾಣದಲ್ಲಿ ಪಕ್ಷಕ್ಕೆ ಅಧ್ಯಕ್ಷರು ಬೇಕೆನ್ನುವವರು ಆಂತರಿಕ ವೇದಿಕೆಗಳಲ್ಲಿ ಅದನ್ನು ಪ್ರಸ್ತಾಪ ಮಾಡಲಿ. ವರಿಷ್ಠರು ಅದರ ಬಗ್ಗೆ ನಿರ್ಧರಿಸುತ್ತಾರೆ ಎಂದರು.