ಮುಂಬೈ : ಜೀರೊ ಸಿನಿಮಾ ಸೋಲಿನಿಂದ ಹೊರ ಬಂದಿರುವ ಬಾಲಿವುಡ್ ನಟ ಶಾರುಖ್ ಖಾನ್ ‘ಪಠಾಣ್’ ಚಿತ್ರದಲ್ಲಿ ನಟಿಸುತ್ತಿರುವುದು ಸಿನಿ ಪ್ರಿಯರಿಗೆ ತಿಳಿದಿರುವ ವಿಚಾರ. ಸದ್ಯ ಈ ಚಿತ್ರದ ಕುರಿತು ಇಂಟ್ರೆಸ್ಟಿಂಗ್ ಸಂಗತಿಯೊಂದು ರಿವೀಲ್ ಅಗಿದೆ.
ಬಿಟೌನ್ ನ ಬಹುನಿರೀಕ್ಷಿತ ಪಠಾಣ್ ಸಿನಿಮಾದಲ್ಲಿ ಬಾಲಿವುಡ್ ನ ಮತ್ತೋರ್ವ ಬಿಗ್ ಸ್ಟಾರ್ ಕಾಣಿಸಿಕೊಳ್ಳಲ್ಲಿದ್ದಾರೆ. ಅದು ಬೇರೆ ಯಾರೂ ಅಲ್ಲ, ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್.
ಹೌದು, ಪಠಾಣ್ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಇದು ಸಲ್ಲು ಹಾಗೂ ಶಾರುಖ್ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಂಭ್ರಮ ಮೂಡಿಸಿದೆ. ಈ ಬಿಗ್ ತಾರೆಯರನ್ನು ಬೆಳ್ಳಿ ಪರದೆ ಮೇಲೆ ಒಟ್ಟಾಗಿ ನೋಡಲು ಬಿಟೌನ್ ಮಂದಿ ಉತ್ಸುಕರಾಗಿದ್ದಾರೆ.
ಇನ್ನು ತಮ್ಮದೆಯಾದ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್, ಜತೆಯಾಗಿ ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 1995 ಬಿಡುಗಡೆಯಾಗಿ ದೊಡ್ಡ ದಾಖಲೆ ಬರೆದ ‘ಕರಣ್ ಅರ್ಜುನ್’ ಸಿನಿಮಾದಲ್ಲಿ ಈ ತಾರೆಯರು ಜತೆಯಾಗಿ ನಟಿಸಿದ್ದರು. ಈ ಸಿನಿಮಾ ಬಳಿಕ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿಲ್ಲವಾದರೂ, ಸಾಕಷ್ಟು ಚಿತ್ರಗಳಲ್ಲಿ ಅತಿಥಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಇದೀಗ ಮತ್ತೊಮ್ಮೆ ಪಠಾಣ್ ಸಿನಿಮಾ ಮೂಲಕ ಸಲ್ಲು ಹಾಗೂ ಶಾರುಕ್ ಸಮಾಗಮವಾಗಲಿದೆ.
ಪಠಾಣ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಿಭಾಯಿಸಲಿರುವ ಪಾತ್ರದ ಬಗ್ಗೆ ತಿಳಿದು ಬಂದಿಲ್ಲ. ಸದ್ಯ ಹಿಂದಿ ಬಿಗ್ ಬಾಸ್ ಸೀಸನ್ 14 ರಲ್ಲಿ ಬ್ಯುಸಿಯಾಗಿರುವ ಸಲ್ಮಾನ್, ಈ ಶೋ ಮುಗಿದ ನಂತರ ಚಿತ್ರೀಕರಣಕ್ಕೆ ತೆರಳಲಿದ್ದಾರಂತೆ.
ಇನ್ನು 2018 ರಲ್ಲಿ ತೆರೆ ಕಂಡಿದ್ದ ಜೀರೊ ಸಿನಿಮಾ ಸೋಲು ಕಂಡಿತ್ತು. 200 ಕೋಟಿ ವೆಚ್ಚದಲ್ಲಿ ಸಿದ್ಧವಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಸದ್ಯ ಪಠಾಣ್ ಚಿತ್ರವಾದರೂ ಶಾರುಖ್ ಖಾನ್ ಕೈ ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.