ಮುಂಬಯಿ: ಸಲ್ಮಾನ್ ಖಾನ್ ನಿವಾಸ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಐದನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದಲ್ಲಿ ಮೊಹಮ್ಮದ್ ಚೌಧರಿ ಎಂಬಾತನನ್ನು ಬಂಧಿಸಲಾಗಿದೆ.
ಬಂಧಿತ ಚೌಧರಿ ಇಬ್ಬರು ಶೂಟರ್‌ಗಳಾದ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಅವರಿಗೆ ಹಣವನ್ನು ಒದಗಿಸಿದ್ದಾನೆ ಮತ್ತು ಮುಂಬೈನ ಬಾಂದ್ರಾ ಪ್ರದೇಶದಲ್ಲಿನ ನಟನ ನಿವಾಸ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಪ್ರದೇಶದಿಂದ ಪರಾರಿ ಆಗಲು ನೆರವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಚೌಧರಿಯನ್ನು ಮಂಗಳವಾರ(ಮೇ.7 ರಂದು) ಮುಂಬೈಗೆ ಕರೆತರಲಾಗುತ್ತಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಅಲ್ಲಿಂದ ಕಸ್ಟಡಿಗೆ ತೆಗೆದುಕೊಳ್ಳಲು ಮನವಿ ಸಲ್ಲಿಸಲಾಗುವುದು ಎಂದು ಕ್ರೈಂ ಬ್ರಾಂಚ್ ತಿಳಿಸಿದೆ.
ಈಗಾಗಲೇ ಈ ಪ್ರಕರಣದಲ್ಲಿ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಅವರನ್ನು ಮುಂಬೈ ಪೊಲೀಸರು ಗುಜರಾತ್‌ನ ಭುಜ್‌ನಿಂದ ಬಂಧಿಸಿದ್ದಾರೆ.
ಇತರೆ ಇಬ್ಬರು ಆರೋಪಿಗಳಾದ ಸೋನು ಸುಭಾಷ್ ಚಂದರ್ ಮತ್ತು ಅನುಜ್ ಥಾಪನ್ ಅವರನ್ನು ಕಳೆದ ತಿಂಗಳ ಕೊನೆಯಲ್ಲಿ ಬಂಧಿಸಲಾಗಿತ್ತು. ಇದರಲ್ಲಿ ಥಾಪನ್ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಏ.14 ರಂದು ಸಲ್ಮಾನ್ ಖಾನ್ ನಿವಾಸದ ಮೇಲೆ ಬೈಕ್ ನಲ್ಲಿ ಬಂದು ಇಬ್ಬರು ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದರು.