ಮುಂಬಯಿ : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇದ್ದ ಕಾರಣಕ್ಕೆ ಮುಂಬರುವ ಆತನ ಹೊಸ ಚಿತ್ರ “ರೇಸ್ 3′ ಶೂಟಿಂಗನ್ನು ಅರ್ಧಕ್ಕೇ ನಿಲ್ಲಿಸಿ ಬಿಗಿ ಭದ್ರತೆಯಲ್ಲಿ ಆತನನ್ನು ಆತನ ಬಾಂದ್ರಾ ನಿವಾಸಕ್ಕೆ ತಲುಪಿಸಲಾದ ಘಟನೆ ವರದಿಯಾಗಿದೆ.
ಸಲ್ಮಾನ್ ಖಾನ್ ಅವರು ಈಚೆಗೆ ಕೃಷ್ಣ ಮೃಗ ಅಕ್ರಮ ಬೇಟೆಯ ಕೇಸ್‌ಗೆ ಸಂಬಂಧಪಟ್ಟು ಜೋಧ್‌ಪುರ ಕೋರ್ಟಿನಲ್ಲಿ ಹಾಜರಾಗಲು ಹೋಗಿದ್ದರು. ಅದರ ಮರುದಿನವೇ ಲಾರೆನ್ಸ್ ಬಿಷ್ಣೋಯಿ ಎಂಬ ವ್ಯಕ್ತಿಯಿಂದ ಜೀವ ಬೆದರಿಕೆ ಬಂದಿತ್ತು ಎನ್ನಲಾಗಿದೆ.
ವಿಶೇಷವೆಂದರೆ ಸಲ್ಮಾನ್ ಖಾನ್ ಅವರು ಜೋಧ್‌ಪುರ ಕೋರ್ಟಿನಲ್ಲಿ ಹಾಜರಾದ ದಿನವೇ ಬಿಷ್ಣೋಯಿ ಯನ್ನು ಕೂಡ ಬಿಗಿ ಭದ್ರತೆಯಲ್ಲಿ ಕೋರ್ಟಿನಲ್ಲಿ ಹಾಜರುಪಡಿಸಲಾಗಿತ್ತು.
ಮುಂಬಯಿ ಮಿರರ್ ಪ್ರಕಟಿಸಿರುವ ವರದಿ ಪ್ರಕಾರ ಸುಮಾರು 12ಕ್ಕೂ ಹೆಚ್ಚು ಪೊಲೀಸರು ಮೊನ್ನೆ ಮಂಗಳವಾರ ರೇಸ್-3 ಚಿತ್ರದ ಸೆಟ್‌ಗೆ ಧಾವಿಸಿ, “ಕೆಲವು ಅಪರಿಚಿತ ವ್ಯಕ್ತಿಗಳು ಈ ಸೆಟ್ ಆವರಣವನ್ನು ಪ್ರವೇಶಿಸಿದ್ದಾರೆ’ ಎಂದು ತಿಳಿಸಿದರು. ಸಲ್ಮಾನ್‌ಗೆ ಜೀವ ಬೆದರಿಕೆ ಇರುವ ಕಾರಣ ಆತನನ್ನು ಒಡನೆಯೇ ಸುರಕ್ಷಿತವಾಗಿ ಆತನ ಬಾಂದ್ರಾ ನಿವಾಸಕ್ಕೆ ತಲುಪಿಸಿದರು. ಒಂದು ವಾಹನದಲ್ಲಿ ಸಲ್ಮಾನ್ ಜತೆಗೆ ಪೊಲೀಸರಿದ್ದರು ಇನ್ನೊಂದು ವಾಹನದಲ್ಲಿ ಇನ್ನಷ್ಟು ಪೊಲೀಸರು ಬೆಂಗಾವಲಾಗಿ ಹೋಗಿದ್ದರು.
“ಸಲ್ಮಾನ್ ಅಥವಾ ಆತನ ಕುಟುಂಬ ಸದಸ್ಯರೊಬ್ಬರಿಗೆ ಜೀವ ಬೆದರಿಕೆ ಬಂದಿರುವುದು ಇದೇ ಮೊದಲ ಬಾರಿ ಅಲ್ಲ; ಸಲ್ಮಾನ್ ಒಮ್ಮೆ ಪಟ್ಟಣದಲ್ಲಿ ಯಾವುದೇ ಭದ್ರತೆ ಇಲ್ಲದೆ, ತನ್ನ ಬಾಡಿಗಾರ್ಡ್ ಶೇರಾ ಕೂಡ ಜತೆಗಿಲ್ಲದೆ, ಒಂಟಿಯಾಗಿ ಇರುವುದು ಒಮ್ಮೆ ಗಮನಕ್ಕೆ ಬಂದಿತ್ತು. ಆಗಲೇ ಆತನಿಗೆ ಜಾಗೃತೆಯಿಂದ ಇರುವಂತೆ ಸೂಚಿಸಲಾಗಿತ್ತು. ಈಗ ಅಭೂತಪೂರ್ವ ದಾಳಿಯ ನಿರೀಕ್ಷೆಯಲ್ಲಿ ಸಲ್ಮಾನ್‌ಗೆ ಹೆಚ್ಚು ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಹೇಳಿದ್ದಾರೆ.
ಈ ವಿದ್ಯಮಾನವನ್ನು ಅನುಸರಿಸಿ ರೇಸ್-3 ಚಿತ್ರದ ನಿರ್ಮಾಪಕ ರಮೇಶ್ ತೌರಾಣಿ ಅವರು ತಮ್ಮ ಚಿತ್ರದ ಸೆಟ್‌ಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತಿದ್ದಾರೆ.