ಜೋಧ್‌ಪುರ: ಕೃಷ್ಣ ಮೃಗ ಬೇಟೆಪ್ರಕರಣದಲ್ಲಿ 5 ವರ್ಷಗಳ ಶಿಕ್ಷೆಗೊಳಗಾಗಿ ಜೈಲು ಪಾಲಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಶನಿವಾರ ಜಾಮೀನು ದೊರಕಿದ್ದು ಜೈಲಿನಿಂದ ಬಿಡುಗಡೆಯಾಗವು ಭಾಗ್ಯ ದೊರಕಿದೆ.
ಜಾಮೀನು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿಗಳು ಜಾಮೀನು ಮಂಜೂರು ಮಾಡಿದರು. ಜಾಮೀನು ದೊರಕುತ್ತಿದ್ದಂತೆ ಸಲ್ಮಾನ್ ಅಭಿಮಾನಿಗಳು ಕೇಕೆ ಹಾಕಿ ಸಂಭ್ರಮಿಸಿದ್ದಾರೆ.
ಕೋರ್ಟ್ ತೀರ್ಪಿನಿಂದಾಗಿ ಅವರ ಚಿತ್ರಗಳಿಗೆ ಹಣ ಹೂಡಿದ್ದ ನಿರ್ಮಾಪಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸ್ಥಳೀಯ ನ್ಯಾಯಾಲಯದಲ್ಲಿ ಶುಕ್ರವಾರ ಆರಂಭಗೊಂಡ ವಿಚಾರಣೆ ವೇಳೆ, ಭಾರೀ ವಾದ, ಪ್ರತಿವಾದಗಳು ನಡೆದು ಅಂತಿಮ ನಿರ್ಧಾರಕ್ಕೆ ಅವಕಾಶವಾಗದ ಕಾರಣ, ವಿಚಾರಣೆಯನ್ನು ನ್ಯಾಯಾಧೀಶರು ಶನಿವಾರ ಬೆಳಗ್ಗೆಗೆ ಮುಂದೂಡಿದ್ದರು.
1998ರಲ್ಲಿ ರಾಜಸ್ಥಾನದ ಜೋಧಪುರ ಬಳಿ ಕೃಷ್ಣ ಮೃಗಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿ, ಜೋಧ್‌ಪುರ ನ್ಯಾಯಾಲಯ, ಗುರುವಾರ ಖಾನ್‌ಗೆ 5 ವರ್ಷಗಳ ಜೈಲು ಹಾಗೂ 10,000 ದಂಡ ವಿಧಿಸಿತ್ತು. ತೀರ್ಪಿನ ಬೆನ್ನಲ್ಲೇ ಅವರನ್ನು ಜೈಲಿಗೆ ರವಾನಿಸಲಾಗಿತ್ತು. ಶುಕ್ರವಾರದ ವಿಚಾರಣೆ ವೇಳೆ, ಸಲ್ಮಾನ್ ಪರ ವಕೀಲರು, 1998ರ ಪ್ರಕರಣದಲ್ಲಿಯೂ ಅವರು ಶಸ್ತ್ರಾಸ್ತ್ರ ಬಳಸಿದ್ದಕ್ಕೆ ಯಾವುದೇ ಪುರಾವೆಯಿಲ್ಲ. ತನಿಖೆಯಲ್ಲಿ ಸಾಕಷ್ಟು ಲೋಪಗಳಾಗಿವೆ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು ನಂಬುವಂತೆ ಇಲ್ಲ ಎಂದು ವಾದಿಸಿದ್ದರು.