ಲಾಹೋರ್: ಪಾಕಿಸ್ಥಾನ ಕ್ರಿಕೆಟ್ ವಲಯದಲ್ಲಿ ನಾಟಕೀಯ ಬೆಳವಣಿಗೆಗೆ ಸಾಕ್ಷಿ ಎಂಬಂತೆ ಮಾಜಿ ನಾಯಕ ಸಲ್ಮಾನ್ ಬಟ್ ಅವರನ್ನು ಮುಖ್ಯ ಆಯ್ಕೆ ಸಮಿತಿ ಸಲಹೆಗಾರರನ್ನಾಗಿ ನೇಮಿಸಿದ ಒಂದು ದಿನದ ನಂತರ ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತೆಗೆದುಹಾಕಿದೆ.
ಸಾರ್ವಜನಿಕರಿಂದ ತೀವ್ರ ವಿರೋಧ ಮತ್ತು ಮಾಧ್ಯಮಗಳ ಒತ್ತಡದ ಕಾರಣಕ್ಕಾಗಿ ಸಲ್ಮಾನ್ ಅವರನ್ನು ಶನಿವಾರ ತೆಗೆದುಹಾಕಲಾಗಿದೆ ಎಂದು ಮುಖ್ಯ ಆಯ್ಕೆಗಾರ ವಹಾಬ್ ರಿಯಾಜ್ ಘೋಷಿಸಿದ್ದಾರೆ.
“ಜನರು ನನ್ನ ಮತ್ತು ಸಲ್ಮಾನ್ ಬಗ್ಗೆ ಎಲ್ಲಾ ರೀತಿಯ ವಿಷಯಗಳನ್ನು ಮಾತನಾಡಲು ಪ್ರಾರಂಭಿಸಿದರು. ಸಲ್ಮಾನ್ ಬಟ್ ಅವರು ಉತ್ತಮ ಕ್ರಿಕೆಟ್ ಆಟಗಾರರಾದ ಕಾರಣ ಸಲಹೆಗಾರರನ್ನಾಗಿ ಮಾಡುವುದು ನನ್ನ ನಿರ್ಧಾರವಾಗಿತ್ತು. ನಾನು ಈಗ ಆ ನಿರ್ಧಾರವನ್ನು ಬದಲಾಯಿಸುತ್ತಿದ್ದೇನೆ. ನಾನು ಈಗಾಗಲೇ ಸಲ್ಮಾನ್ ಬಟ್ ಗೆ ತಿಳಿಸಿದ್ದೇನೆ” ಎಂದು ಪಾಕ್ ಮಾಜಿ ವೇಗಿ ರಿಯಾಜ್ ಶನಿವಾರ ಲಾಹೋರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಿಸಿಬಿಯ ಅನೇಕ ಟೀಕಾಕಾರರಲ್ಲಿ ಮುಂಚೂಣಿಯಲ್ಲಿದ್ದವರು ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ. ಕಳಂಕಿತ ವ್ಯಕ್ತಿಯನ್ನು ಪ್ರಮುಖ ಕೆಲಸಕ್ಕೆ ನೇಮಿಸಿದ್ದಕ್ಕಾಗಿ ರಮೀಜ್ ಪಿಸಿಬಿಯ ವಿರುದ್ಧ ಕಿಡಿ ಕಾರಿದ್ದರು.”ಈ ನಿರ್ಧಾರ ಪುತ್ರ ವಾತ್ಸಲ್ಯದ ಪ್ರದರ್ಶನ ಎಂದು ಕರೆಯಬಹುದು. ಮ್ಯಾಚ್ ಫಿಕ್ಸಿಂಗ್‌ಗಾಗಿ ಲಾಕ್ ಆಗಿರುವ ಇನ್ನೊಬ್ಬ ಸದಸ್ಯರನ್ನು ಒಳಗೊಂಡಿರುವ ಆಯ್ಕೆ ಸಮಿತಿಯನ್ನು ಹೊಂದಿರುವುದು ಹುಚ್ಚುತನವಾಗಿದೆ” ಎಂದು ರಮಿಜ್ ಅವರು ಸಲ್ಮಾನ್ ಬಟ್ ನೇಮಕಾತಿಯ ಕುರಿತು ಕ್ರಿಕ್‌ಬಜ್‌ಗೆ ಪ್ರತಿಕ್ರಿಯಿಸಿದ್ದರು.
ವಹಾಬ್ ರಿಯಾಜ್ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ, ಸಹಾಯಕರನ್ನಾಗಿ ಮಾಜಿ ಆಟಗಾರರಾದ ಕಮ್ರಾನ್ ಅಕ್ಮಲ್, ರಾವ್ ಇಫ್ತಿಕರ್ ಅಂಜುಂ ಮತ್ತು ಸಲ್ಮಾನ್ ಬಟ್ ಅವರನ್ನು ನೇಮಿಸಲಾಗಿತ್ತು.