Advertisement

ಲಾಲಾರಸದಿಂದಲೇ ಬಾಯಿಯ ಕ್ಯಾನ್ಸರ್‌ ಪತ್ತೆ?

09:11 AM Mar 05, 2020 | sudhir |

ಬೆಂಗಳೂರು: ನಮ್ಮ ಲಾಲಾ ರಸವು ಕ್ಯಾನ್ಸರ್‌ ಮುನ್ಸೂಚನೆ ನೀಡುವುದು ಸಾಧ್ಯವೇ? ಖಂಡಿತ ಸಾಧ್ಯ ಎನ್ನುತ್ತದೆ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)!

Advertisement

ದೇಹದಲ್ಲಿ ಜೀವಕೋಶಗಳ ಉತ್ಪತ್ತಿಗೆ ಪ್ರೊಟೀನ್‌ಗಳು ಕಾರಣ. ಅವು ಲಾಲಾ ರಸದಲ್ಲೂ ಇರುತ್ತವೆ. ಅಂಥ ಜೊಲ್ಲಿನ ಮಾದರಿಗೆ ಜೈವಿಕ ಮಾಪಕ (ಬಯೋ ಮಾರ್ಕರ್‌)ನಿಗದಿಪಡಿಸಿ, ಬಾಯಿ ಕ್ಯಾನ್ಸರ್‌ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಿದೆ. ಬಾಯಿಯ ಕ್ಯಾನ್ಸರ್‌ ಪತ್ತೆ ವಿಧಾನದಲ್ಲಿ ಈ ತಂತ್ರಜ್ಞಾನ ಹೊಸದು ಎನ್ನ ಲಾಗಿದೆ. ಈ ಸಂಬಂಧದ ಪ್ರಾತ್ಯಕ್ಷಿಕೆಯು ನಗರ ದಲ್ಲಿ ನಡೆಯುತ್ತಿರುವ “ಬೆಂಗಳೂರು ಇಂಡಿಯಾ ನ್ಯಾನೊ ಮೇಳ’ದ ಕೇಂದ್ರಬಿಂದು ಆಗಿದೆ.

ಈ ಶೋಧದಿಂದ ಕ್ಯಾನ್ಸರನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯ ವಾಗು ವುದ ರಿಂದ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ ಎಂದು ಐಐಟಿ ಕಾನ್ಪುರದ ಸಂಶೋಧನ ವಿದ್ಯಾರ್ಥಿ ಶುಭದೀಪ್‌ ಮಿತ್ರಾ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಕ್ಯಾನ್ಸರ್‌ ಪತ್ತೆಯೇ ಸವಾಲು
ಸಾಮಾನ್ಯವಾಗಿ ಕ್ಯಾನ್ಸರ್‌ ಕಾಯಿಲೆಯನ್ನು ಅದರ ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲು. ಬಾಯಿಯ ಕ್ಯಾನ್ಸರ್‌ ಸಂದರ್ಭದಲ್ಲಿ ವೈದ್ಯರು ವ್ಯಕ್ತಿಯ ಬಾಯೊಳಗೆ, ನಾಲಗೆಯಲ್ಲಿ ಗುಳ್ಳೆ ಗಳು ಅಥವಾ ಊತಗಳು ಕಂಡುಬಂದರೆ ಗುರುತಿಸಿ ರಕ್ತದ ಪರೀಕ್ಷೆ, ಬಯಾಪ್ಸಿಯಂತಹ ತಪಾಸಣೆಗಳನ್ನು ನಡೆಸಲು ಸೂಚಿಸುತ್ತಾರೆ. ಅದರ ವರದಿ ಆಧರಿಸಿ ಕಾಯಿಲೆ ದೃಢಪಡಿಸುವ ವಿಧಾನ ಅನುಸರಿಸಲಾಗುತ್ತದೆ. ಇವೆಲ್ಲವೂ ವೈದ್ಯರ ಅನುಭವವನ್ನು ಆಧರಿಸಿದ್ದು. ಹೀಗೆ ಗುರುತಿಸುವಲ್ಲಿ ಹಲವು ಬಾರಿ ವ್ಯತ್ಯಾಸಗಳೂ ಆಗಬಹುದು. ಅಷ್ಟೇ ಅಲ್ಲ, ಅನೇಕ ಸೂಚನೆಗಳು ಆರಂಭಿಕ ಹಂತದಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಇದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆಗಳಿವೆ.

ಸರಳ ವಿಧಾನ
ಸಾಮಾನ್ಯವಾಗಿ ಲಾಲಾರಸದಲ್ಲಿ ಪ್ರೊಟೀನ್‌ ಮಾದರಿಯ ಪ್ರತಿಜನಕಗಳು ಇರುತ್ತವೆ. ಕ್ಯಾನ್ಸರ್‌ ಲಕ್ಷಣಗಳಿರುವ ವ್ಯಕ್ತಿಯಲ್ಲಿ ಈ ಪ್ರತಿ ಜನಕ (ಆಂಟಿಜೆನ್ಸ್‌)ಗಳ ಸಂಖ್ಯೆ ಹೆಚ್ಚುತ್ತದೆ. ಆದ್ದರಿಂದ ಅವುಗಳನ್ನು ಗುರುತಿಸುವ ಕಡೆಗೆ ಗಮನ ಕೇಂದ್ರೀಕರಿಸಲಾಗುತ್ತದೆ. ಇದಕ್ಕಾಗಿ ಫಿಲ್ಟರ್‌ ಪೇಪರ್‌ ತುಣುಕಿನಲ್ಲಿ ಸೆನ್ಸರ್‌ಗಳನ್ನು ಅಳವಡಿಸಲಾಗುತ್ತದೆ. ಈ ಬಯೋಸೆನ್ಸರ್‌ಗೆ
ಪ್ರೊಟೀನ್‌-53 ಎಂದು ಮಾಪಕ ನಿಗದಿ ಪಡಿಸಲಾಗುತ್ತದೆ. ಅನಂತರ ಸೆನ್ಸರನ್ನು ಇಐಎಸ್‌ (ಎಲೆಕ್ಟ್ರೊ ಕೆಮಿಕಲ್‌ ಇಂಪೆಡೆನ್ಸ್‌ ಸ್ಪೆಕ್ಟ್ರೋಸ್ಕೋಪ್‌)ಗೆ ಜೋಡಣೆ ಮಾಡಲಾಗುತ್ತದೆ. ಬಳಿಕ ಬಯೋಸೆನ್ಸರ್‌ ಮೇಲೆ ಶಂಕಿತ ವ್ಯಕ್ತಿಯ ಲಾಲಾರಸವನ್ನು ಹಾಕಿದಾಗ, ಪ್ರತಿಜನಕಗಳ ಪ್ರಮಾಣ ಗೊತ್ತಾಗುತ್ತದೆ. ಒಂದು ವೇಳೆ ಪಿ53ಗಿಂತ ಹೆಚ್ಚು ಇರುವುದು ಕಂಡುಬಂದರೆ, ತತ್‌ಕ್ಷಣ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತದೆ ಎಂದು ಶುಭದೀಪ್‌ ಮಿತ್ರಾ ಹೇಳಿದ್ದಾರೆ.

Advertisement

ಗ್ರಾಮೀಣ ಭಾಗಕ್ಕೆ ಉಪಯುಕ್ತ
ಎರಡು ಮತ್ತು ಮೂರನೇ ಹಂತದ ನಗರಗಳು ಹಾಗೂ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಬಹುತೇಕ ಕಡೆ ಕ್ಯಾನ್ಸರ್‌ ತಜ್ಞ ವೈದ್ಯರು ಇರುವುದಿಲ್ಲ, ಪತ್ತೆಮಾಡುವ ವ್ಯವಸ್ಥೆಯೂ ಇಲ್ಲ. ಅಂತಹ ಕಡೆ ಬಾಯಿಯಂತಹ ಅಂಗಗಳ ಕ್ಯಾನ್ಸರ್‌ ಪತ್ತೆಯಾಗುವುದು ಕೊನೆಯ ಹಂತದಲ್ಲಿ. ಆದರೆ ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿರುತ್ತದೆ. ಇಂತಹ ಕಡೆಗಳಲ್ಲಿ ಈ ಹೊಸ ತಂತ್ರಜ್ಞಾನ ಬಹಳ ಉಪಯುಕ್ತ ಆಗಬಲ್ಲುದು ಎಂದು ತಜ್ಞ ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ತಂತ್ರಜ್ಞಾನವನ್ನು ದೃಢ ಪಡಿಸಿ ಕೊಳ್ಳಲು ಬಾಯಿ ಕ್ಯಾನ್ಸರ್‌ ನಿಂದ ಬಳಲುತ್ತಿರುವವರ ಜೊಲ್ಲು ಹಾಗೂ ಆರೋಗ್ಯವಂತ ಪುರುಷ ಮತ್ತು ಮಹಿಳೆಯರ ಲಾಲಾರಸದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಿ ಖಾತ್ರಿಪಡಿಸಿಕೊಳ್ಳಲಾಗಿದೆ. ಆದರೆ ಇದು ಬಾಯಿ ಕ್ಯಾನ್ಸರ್‌ಗೆ ಪರಿಹಾರ ಅಲ್ಲ; ಪತ್ತೆಯ ವಿಧಾನ ಮಾತ್ರ.
– ಶುಭದೀಪ್‌ ಮಿತ್ರಾ, ವಿದ್ಯಾರ್ಥಿ ಸಂಶೋಧಕ

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next