Advertisement

ಕಚೇರಿಯಲ್ಲೇ ಡಿಕೆಶಿ ವಿರುದ್ಧ ಮಾತು: ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಅಮಾನತು

02:46 PM Oct 13, 2021 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಪಕ್ಷದ ಕಚೇರಿಯಲ್ಲೇ ಅನಧಿಕೃತವಾಗಿ ಆಡಿದ ಮಾತುಗಳು ವೈರಲ್ ಆಗುತ್ತಿದ್ದಂತೆ ಮಾಧ್ಯಮ ಸಂಯೋಜಕ ಸಲೀಂ ಅವರನ್ನು ಕಾಂಗ್ರೆಸ್ ಪಕ್ಷ ಅಮಾನತು ಮಾಡಿದೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ನಾಯಕ ವಿ.ಎಸ್ .ಉಗ್ರಪ್ಪ ಅವರ ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ಸಲೀಂ ಅವರು ಆಡಿದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಡಿ.ಕೆ. ಶಿವಕುಮಾರ್ ವಿರುದ್ಧವೇ ಭ್ರಷ್ಟಾಚಾರದ ಕುರಿತಾಗಿ ಮಾತನಾಡಿ ತೀವ್ರ ಮುಜುಗರ ತಂದಿಟ್ಟಿದ್ದರು.

ಸಲೀಂ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಉಗ್ರಪ್ಪ ಅವರಿಗೆ 3 ದಿನಗಳ ಒಳಗೆ ಉತ್ತರಿಸುವಂತೆ ಆದೇಶಿಸಿ ಶೋಕಾಸ್ ನೋಟಿಸ್ ನೀಡಲಾಗಿದೆ.

ಸಲೀಂ ಅವರನ್ನು ಪಕ್ಷದಿಂದ ಅಮಾನತು ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೂಚನೆ ನೀಡಿದ್ದರು ಎಂದು ತಿಳಿದು ಬಂದಿದೆ.
ವಿಡಿಯೋ ವೈರಲ್ ಆಗಿ ತೀವ್ರ ಚರ್ಚೆಗೆ ಗುರಿಯಾಗುತ್ತಿದ್ದಂತೆ ಉಗ್ರಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ ನಾನು ಸಲೀಂ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆತ ಮಾತನಾಡಿದ ವಿಷಯ ದ ಬಗ್ಗೆ ಗಮನ ನೀಡಲಿಲ್ಲ ಎಂದಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಟ್ವೀಟ್ ಸಮರ

Advertisement

“ಭ್ರಷ್ಟಾಧ್ಯಕ್ಷ”

ಬಹುಕೋಟಿ ಮೊತ್ತದ ಬಹುಭಾಷಾ ರಾಜಕೀಯ ಚಲನಚಿತ್ರದ ಚಿತ್ರೀಕರಣ ಆರಂಭಗೊಂಡಿದೆ.

ನಿರ್ಮಾಣ, ನಿರ್ದೇಶನ – ಸಿದ್ದರಾಮಯ್ಯ
ತಾರಾಗಣ – ಉಗ್ರಪ್ಪ, ಸಲೀಂ

ಅಕ್ರಮ ಸಂಪಾದನೆಯ ಅಸಲಿ ಕಥೆಯ ಟ್ರೈಲರ್‌ ಕೆಪಿಸಿಸಿ ಕಚೇರಿಯಿಂದಲೇ ಬಿಡುಗಡೆಯಾಗಿದೆ.

#ಭ್ರಷ್ಟಾಧ್ಯಕ್ಷರೇ, ನಿಮ್ಮ ಥಿಯೇಟರ್‌ನಲ್ಲೇ ಸಿನೇಮಾ ಬಿಡುಗಡೆಯಾಗಲಿದೆಯೇ? ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಅನಧಿಕೃತ ಮಾತುಗಳನ್ನು ಇಟ್ಟುಕೊಂಡು ರೊಟ್ಟಿ ನೆಕ್ಕುತ್ತಿರುವ ಬಿಜೆಪಿಯವರು, ತಮ್ಮದೇ ಪಕ್ಷದವರು ಅಧಿಕೃತವಾಗಿಯೇ ಪತ್ರಿಕಾಗೋಷ್ಠಿ ನಡೆಸಿಯೇ ಮಾಡಿದ ಆರೋಪಗಳಿಗೆ ಉತ್ತರ ನೀಡಲಿ.ನೀರಾವರಿ ಹಗರಣದ ಬಗ್ಗೆ ಹೆಚ್. ವಿಶ್ವನಾಥ್ ಅವರ ಆರೋಪ, ಕುಟುಂಬದ ಭ್ರಷ್ಟಾಚಾರ ಆರೋಪಗಳಿಗೆ ಮೊದಲು ಬಿಜೆಪಿ ತನ್ನ ‘ಅಧಿಕೃತ’ ಎಂಬ ಮುದ್ರೆ ಒತ್ತಲಿ. ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದೆ.

ಡಿ.ಕೆ.ಶಿವಕುಮಾರ್ ಅವರು ಸಚಿವರಾಗಿದ್ದ ಜಲಸಂಪನ್ಮೂಲ ಇಲಾಖೆಯ ವಿಚಾರ ಪ್ರಸ್ತಾವಿಸಿ, ಕೆಲವರ ಹೆಸರುಗಳನ್ನೂ ಸಲೀಂ ಅವರು ಉಗ್ರಪ್ಪ ಬಳಿ ಹೇಳಿಕೊಂಡಿದ್ದರು. ‘ಮುಳಗುಂದ 50-100 ಕೋಟಿ ಮಾಡಿದ್ದಾನೆ ಅಂದರೇ, ಇವನ ಹತ್ತಿರ ಎಷ್ಟಿರಬೇಕು.. ಡಿಕೆ ಹತ್ತಿರ ಲೆಕ್ಕಾ ಹಾಕಿ, ಬರಿ ಕಲೆಕ್ಷನ್ ಗಿರಾಕಿ’ಎಂದಿದ್ದರು.ಇದಕ್ಕೆ ಉಗ್ರಪ್ಪ ಅವರು ‘ಅದು ನಮಗೆ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ಪತ್ರಿಕಾ ಗೋಷ್ಠಿ ಆರಂಭಕ್ಕೂ ಮುನ್ನ ನಡೆದ ಈ ಮಾತುಕತೆ ಭಾರಿ ಸುದ್ದಿಯಾಗುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next