Advertisement
ಕೋಟ : ಸಾಲಿಗ್ರಾಮದಲ್ಲಿ ಶನಿವಾರ ಸಂತೆ ಏಕೆ ಆರಂಭವಾಗಬಾರದು? ಪಟ್ಟಣ ಪಂಚಾಯತ್ ಈ ದಿಸೆಯಲ್ಲಿ ಮುಂಚೂಣಿಯಲ್ಲಿ ನಿಂತು ಯಾಕೆ ಸಾಧ್ಯವಾಗಿಸಬಾರದು? ಅದೂ ಊರ ತರಕಾರಿಗಳ, ಕೃಷಿ ಉತ್ಪನ್ನಗಳ ಸಂತೆ.
ಹಲವು ದಶಕಗಳಿಂದ ಇಲ್ಲಿನ ಆಂಜನೇಯ ದೇವಸ್ಥಾನದ ಎದುರು ಪ್ರತಿ ಶನಿವಾರ ಸ್ಥಳೀಯ ಕಿರುಸಂತೆ ನಡೆಯುತ್ತಿದೆ. ಪ.ಪಂ. ವ್ಯಾಪ್ತಿ ಹಾಗೂ ಸುತ್ತಲಿನ ಕೋಡಿ, ಮಣೂರು, ಕೋಟ ಸೇರಿದಂತೆ ದೂರದ ಕೊಕ್ಕರ್ಣೆ, ಮಂದಾರ್ತಿ, ಶಿರೂರು ಮುದ್ದುಮನೆ ಮುಂತಾದ ಕಡೆಗಳ ಬೆಳೆಗಾರರು ತಮ್ಮಲ್ಲಿ ಬೆಳೆದ ಬಸಲೆ, ಹರಿವೆ, ಹೀರೆ, ನುಗ್ಗೆ, ಬೆಂಡೆಕಾಯಿ, ಗೆಣಸು, ಸೌತೆಕಾಯಿ, ತೊಂಡೆಕಾಯಿ ಮುಂತಾದ ತರಕಾರಿ, ಹಣ್ಣು ಹಂಪಲುಗಳನ್ನು ನೇರವಾಗಿ ಇಲ್ಲಿಗೆ ತಂದು ಮಧ್ಯವರ್ತಿಗಳ ಹಂಗಿಲ್ಲದೆ, ತಮ್ಮ ಬೆಳೆಗೆ ತಾವೇ ದರ ನಿಗದಿಪಡಿಸಿ ಮಾರುತ್ತಾರೆ.
Related Articles
ಈಗಾಗಲೇ ಪ್ರತಿ ಶನಿವಾರ ನಡೆಯುತ್ತಿರುವ ಕಿರುಸಂತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಪೇಟೆಯ ಆಸುಪಾಸಿನಲ್ಲೇ ಸೂಕ್ತ ಸ್ಥಳ ಗುರುತಿಸಿ ಮಾರುಕಟ್ಟೆ ನಿರ್ಮಿಸಬೇಕು. ಈಗಿನಂತೆ ಸ್ಥಳೀಯ ರೈತರಿಗೆ ನೇರ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಿದಲ್ಲಿ ಜಿಲ್ಲೆಯಲ್ಲೇ ಮಾದರಿ ವ್ಯವಸ್ಥೆಯೊಂದು ಸಾಲಿಗ್ರಾಮದಲ್ಲಿ ರೂಪುಗೊಂಡಂತಾಗಲಿದೆ. ಜತೆಗೆ ಸಾಲಿಗ್ರಾಮದ ಅರ್ಥಿಕ ಚಟುವಟಿಕೆಗಳು ಮತ್ತಷ್ಟು ವಿಸ್ತರಿಸಲಿದ್ದು, ಸ್ಥಳೀಯ ರೈತರು, ಬೆಳೆಗಾರರನ್ನು ಬೆಂಬಲಿಸಿದಂತಾಗುತ್ತದೆ. ಆದರೆ ಇದನ್ನೆಲ್ಲ ಅನುಷ್ಠಾನಗೊಳಿಸಲು ಸ್ಥಳೀಯಾಡಳಿತದ ಜನಪ್ರತಿ ನಿಧಿ ಗಳು, ಅಧಿಕಾರಿಗಳಿಗೆ ಇಚ್ಛಾಶಕ್ತಿ, ಕನಸು ಕಾಣುವ ಗುಣ ಅಗತ್ಯವಿದೆ.
Advertisement
ಅತೀ ಹೆಚ್ಚು ಕೃಷಿ-ತೋಟಗಾರಿಕೆ ಬೆಳೆಕೃಷಿ ಹಾಗೂ ತೋಟಗಾರಿಕೆ ಕೃಷಿಯಲ್ಲಿ ಕೋಟ ಹೋಬಳಿ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ. ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿನ ತೋಟಗಾರಿಕೆ ಬೆಳೆಗಳ ಬಗ್ಗೆ ಅವಲೋಕಿಸಿದಾಗ ಚಿತ್ರಪಾಡಿ ಗ್ರಾಮದಲ್ಲಿ 48.5 ಎಕ್ರೆ ತೋಟಗಾರಿಕೆ ಪ್ರದೇಶ ಹಾಗೂ 868 ಮಂದಿ ತೋಟಗಾರಿಕೆ ಬೆಳೆಗಾರರಿದ್ದಾರೆ. ಪಾರಂಪಳ್ಳಿಯಲ್ಲಿ 101ಎಕ್ರೆ ಜಾಗ, 699ಮಂದಿ ಕೃಷಿಕರು, ಕಾರ್ಕಡದಲ್ಲಿ 66.26 ಎಕ್ರೆ ಪ್ರದೇಶ 548 ಮಂದಿ ಕೃಷಿಕರು, ಗುಂಡ್ಮಿಯಲ್ಲಿ 94.14ಎಕ್ರೆ ಪ್ರದೇಶ ಹಾಗೂ 442ಮಂದಿ ಕೃಷಿಕರಿದ್ದಾರೆ. ಇಲ್ಲಿ ತೆಂಗು, ಅಡಿಕೆ, ಕಲ್ಲಂಗಡಿ, ಅಲಸಂದೆ, ಗುಂಬಳಕಾಯಿ, ಬದನೆಕಾಯಿ, ಹಸಿಮೆಣಸು, ಸೌತೆಕಾಯಿ, ಗೆಣಸು, ಆವರೆ, ತೊಂಡೆಕಾಯಿ ಮುಂತಾದವುಗಳನ್ನು ಬೆಳೆಯಲಾಗುತ್ತದೆ. ಭತ್ತ, ಶೇಂಗಾ ಹಾಗೂ ದ್ವಿದಳ ಧಾನ್ಯಗಳ ಬೆಳೆಯ ಕುರಿತು ಅವಲೋಕಿಸುವುದಾದರೆ ಚಿತ್ರಪಾಡಿ ಗ್ರಾಮದಲ್ಲಿ 567.44ಎಕ್ರೆ, ಪಾರಂಪಳ್ಳಿಯಲ್ಲಿ 656.54 ಎಕ್ರೆ, ಕಾರ್ಕಡದಲ್ಲಿ 750.44ಎಕ್ರೆ, ಗುಂಡ್ಮಿ ಗ್ರಾಮದಲ್ಲಿ 733.50 ಎಕ್ರೆ ಪ್ರದೇಶದಲ್ಲಿ ಕೃಷಿ ಭೂಮಿ ಇದೆ. ಬೆಳೆದವನಿಗೆ ಸಿಗುವುದು ಅತ್ಯಲ್ಪ
ಊರ ಸೌತೆಕಾಯಿ ಕೆಜಿ ಹತ್ತು ರೂ. ಗಳಿಗೂ ವ್ಯಾಪಾರಿಗಳಿಗೆ ಮಾರಲು ಬೆಳೆಗಾರರು ಹೆಣಗಬೇಕು. ಆದರೆ ತರಕಾರಿ ಅಂಗಡಿಯಲ್ಲಿ ಅದೇ ಸೌತೆಕಾಯಿ ಕೆಜಿಗೆ 20 ರಿಂದ 30 ರೂ. ದರದಲ್ಲಿ ಮಾರಲಾಗುತ್ತದೆ. ಹೆಚ್ಚಾಗಿ ಬೆಳೆಯಲಾಗುವ ಅಲಸಂದೆ, ತೊಂಡೆಕಾಯಿ ಮಾರುಕಟ್ಟೆಯಲ್ಲಿ ಕೆಜಿ ಗೆ 60 ರೂ. ಗಳಂತೆ ಮಾರಾಟವಾಗುತ್ತಿದ್ದರೂ ಬೆಳೆಗಾರರಿಗೆ 25 ರೂ. ಸಿಕ್ಕರೆ ಅದೃಷ್ಟ ಖುಲಾಯಿಸಿದಂತೆ. ಇದು ಒಂದು ತರಕಾರಿಯ ಕಥೆಯಲ್ಲ, ತೆಂಗಿನಿಂದ ಹಿಡಿದು ಧಾನ್ಯಗಳವರೆಗೂ ಇದೇ ಕಥೆ.