Advertisement

ಒಂಬತ್ತೇ ಶ್ಮಶಾನ‌; ನಿರ್ವಹಣೆಯೇ ಅನುಮಾನ : ಸಾಲಿಗ್ರಾಮ ಪಟ್ಟಣ ಪಂಚಾಯತ್‌

03:10 AM Apr 22, 2021 | Team Udayavani |

ಒಂದು ಪಟ್ಟಣದ ಮೂಲ ಸೌಕರ್ಯಗಳ ಪಟ್ಟಿಗಳಲ್ಲಿ ಶ್ಮಶಾನವೂ ಒಂದು. ವ್ಯವಸ್ಥಿತ ಸೌಲಭ್ಯಗಳುಳ್ಳ ಶ್ಮಶಾನ ಇರಬೇಕು. ಹಾಗೆ ನೋಡುವುದಾದರೆ ಸಾಲಿಗ್ರಾಮ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಎಲ್ಲವೂ ಇದೆ. ಆದರೆ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಸೌಲಭ್ಯಗಳಿದ್ದರೂ ಬಳಸಲು ಸಿಗುತ್ತಿಲ್ಲ ಎಂಬ ಕೊರಗು ಸ್ಥಳೀಯರದ್ದು. ಪಟ್ಟಣ ಪಂಚಾಯತ್‌ ಆಡಳಿತ ವ್ಯವಸ್ಥೆ ಇದರತ್ತ ಇನ್ನಾದರೂ ಗಮನಹರಿಸಬೇಕು.

Advertisement

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್‌ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಶ್ಮಶಾನಗಳಿದ್ದರೂ, ನಿರ್ವಹಣೆ ಇಲ್ಲದೇ ಸೊರಗುತ್ತಿವೆ.

ಒಟ್ಟು ಒಂಬತ್ತು ಸರಕಾರಿ ಶ್ಮಶಾನಗಳಿದ್ದು, ಇನ್ನೆರಡು ಶ್ಮಶಾನಗಳಿಗೆ ಬೇಡಿಕೆ ಇದೆ. ಈಗಿರುವ ಬಹುತೇಕ ಶ್ಮಶಾನಗಳಲ್ಲಿ ಹೆಚ್ಚಿನ ಕಡೆ ಉತ್ತಮ ಕಟ್ಟಡ, ಇಂಟರ್‌ಲಾಕ್‌, ಆವರಣಗೋಡೆ, ಮಿನಿ ಪಾರ್ಕ್‌, ಶೌಚಾಲಯ, ಸಿಲಿಕಾನ್‌ ಛೇಂಬರ್‌ ಸೇರಿದಂತೆ ಎಲ್ಲ ಅಗತ್ಯ ವ್ಯವಸ್ಥೆ ಇದೆ. ಆದರೆ ಇರುವುದನ್ನೇ ಸರಿಯಾಗ ನಿರ್ವಹಣೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಸಮಸ್ಯೆ ಎದುರಿಸತೊಡಗಿದ್ದಾರೆ.

ಶ್ಮಶಾನಗಳ ನಿರ್ವಹಣೆಗೆ ಪಟ್ಟಣ ಪಂಚಾಯತ್‌ ನಲ್ಲಿ ಹಣದ ಕೊರತೆ ಇಲ್ಲ. ಪ್ರತಿ ವರ್ಷ ಹಣ ಕಾದಿರಿಸುವ ಪದ್ಧತಿಯಿದೆ. ಈ ವರ್ಷವೂ 12. 50 ಲಕ್ಷ ರೂ. ಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಆದರೆ ಸಮರ್ಪಕವಾಗಿ ನಿರ್ವಹಣೆ ಏಕೆ ಮಾಡುವುದಿಲ್ಲ ಎಂಬುದಕ್ಕೆ ಸ್ಪಷ್ಟವಾದ ಕಾರಣಗಳೇ ತೋಚದಾಗಿದೆ.

ಚಿತ್ರಪಾಡಿ ಗ್ರಾಮದ ದೇವಾಡಿಗರಬೆಟ್ಟು, ಮಡಿವಾಳಸಾಲು, ಕಾರ್ತಟ್ಟು ಹಾಗೂ ಪಾರಂಪಳ್ಳಿ ಗ್ರಾಮದ ಗೆಂಡೆಕೆರೆ, ತೋಡ್ಕಟ್ಟು, ಕೆಮ್ಮಣ್ಣುಕೆರೆ, ಪಡುಕರೆ, ಕಾರ್ಕಡ ಗ್ರಾಮದ ಕಡಿದ ಹೆದ್ದಾರಿ, ಗುಂಡ್ಮಿ ಗ್ರಾಮದ ಹಳೆಕೋಟೆ ಶ್ಮ¾ಶಾನಗಳಿವೆ. ಕಾಪು ಪುರಸಭೆ ವ್ಯಾಪ್ತಿಯಲ್ಲಿ ಇರುವುದೂ 5 ಶ್ಮಶಾನಗಳು. ಅದೇ ಎರಡನೇ ದೊಡ್ಡ ಸಂಖ್ಯೆ.

Advertisement

ನಿರ್ವಹಣೆ ಕೇಳುವವರಿಲ್ಲ
ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಶ್ಮಶಾನ ನಿರ್ವಹಣೆಗೆಂದು ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಶವ ದಹನಕ್ಕೆ ಸಹಕರಿಸುವವರ ಸಮಿತಿಯನ್ನು ರಚಿಸಲಾಗುತ್ತದೆ. ಶ್ಮಶಾನದ ಬೀಗವನ್ನು ಸಮಿತಿಗೆ ಹಸ್ತಾಂತರಿಸಿ ನಿರ್ವಹಣೆಯ ಹೊಣೆಯನ್ನು ವಹಿಸಲಾಗುತ್ತದೆ. ಈ ಕುರಿತು ಸರಕಾರದ ಸುತ್ತೋಲೆಯೂ ಇದೆ. ಆದರೆ ಪಟ್ಟಣ ಪಂಚಾಯತ್‌ ನ ಒಂದೂ ಶ್ಮಶಾನದಲ್ಲೂ ಈ ವ್ಯವಸ್ಥೆ ಇಲ್ಲ. ಕೆಲವು ಕಡೆ ವಾರ್ಡ್‌ ಸದಸ್ಯರು ಅಥವಾ ಸಾಕಷ್ಟು ಹಿಂದಿನಿಂದ ಸೇವೆಯಲ್ಲಿ ತೊಡಗಿಸಿಕೊಂಡವರು, ಸಂಘ-ಸಂಸ್ಥೆಗಳು ಸ್ವಲ್ಪ ಮಟ್ಟಿನ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಉಳಿದಂತೆ ಸಮರ್ಪಕ ವ್ಯವಸ್ಥೆ ಇಲ್ಲ.

ಶೌಚಾಲಯಕ್ಕೆ ಖಾಯಂ ಬೀಗ
ಪ್ರತಿ ಶ್ಮಶಾನದಲ್ಲಿ ಕಡ್ಡಾಯವಾಗಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇರಬೇಕು ಎಂದು ಈ ಹಿಂದೆ ಸರಕಾರ ಆದೇಶಿಸಿತ್ತು. ಹೀಗಾಗಿ ಆ ಸಂದರ್ಭ ಪ.ಪಂ. ಎಲ್ಲಾ ಶ್ಮಶಾನಗಳಿಗೆ ಶೌಚಾಲಯ, ಬಾವಿ ಅಥವಾ ನಳ್ಳಿ ಮೂಲಕ ವಾಟರ್‌ ಟ್ಯಾಂಕ್‌ನೊಂದಿಗೆ ನೀರಿನ ವ್ಯವಸ್ಥೆ ಮಾಡಿದೆ. ಆದರೆ ಶೌಚಾಲಯಕ್ಕೆ ಬೀಗ ಜಡಿಯಲಾಗಿದ್ದು, ನೀರೂ ಬಳಸಿಕೊಳ್ಳಲಾಗುತ್ತಿಲ್ಲ. ಕೆಲವು ಕಡೆ ಕುಡಿಯುವ ನೀರಿನ ನಳ್ಳಿ ಹಾಗೂ ಟ್ಯಾಂಕ್‌ಗಳು ಹಾನಿಗೊಳಗಾಗಿವೆ. ಒಟ್ಟಾರೆ ಈ ಅವ್ಯವಸ್ಥೆಯನ್ನು ಕೇಳುವವರಿಲ್ಲ ಎನ್ನುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next